ರಾಯಚೂರು: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉದ್ಯೋಗಕ್ಕೆ ಬೇಕಾದ ವೃತ್ತಿ ಕೌಶಲ ಕಲಿಸಲು ಶಿಕ್ಷಕರಿಗೆ ಈ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಸಲಹೆ ನೀಡಿದರು.
ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಗಳ ಯೋಜನೆಯಡಿ ಜಿಲ್ಲಾಡಳಿತ, ಉದ್ಯೋಗಾವಕಾಶಗಳು ಮತ್ತು ಕಲಿಕಾ ಕೇಂದ್ರ (ಸಿ-ಇಒಎಲ್) ಮತ್ತು ಚೆನ್ನೈನ ಪ್ಯಾನ್‌ಟೆಕ್ ಇ-ಲರ್ನಿಂಗ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫ್ಯಾಕಲ್ಟಿ ಡೆವಲಪ್‌ಮೆಂಟ್ ವರ್ಕ್ ಶಾಪ್ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಹೊಸ ತಂತ್ರಜ್ಞಾನ, ಯಂತ್ರೋಪಕರಣಗಳು ಹಾಗೂ ವಿಜ್ಞಾನಿಗಳ ಸಾಧನೆ ಬಗ್ಗೆ ತಿಳಿ ಹೇಳಬೇಕು. ಕೇಂದ್ರ-ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕಲ್ಪಿಸಿದೆ. ನಿತ್ಯ ತರಗತಿ ಆರಂಭಕ್ಕೂ ಮುನ್ನ ಮಕ್ಕಳಿಗೆ ಕೌಶಲ್ಯ ಬಗ್ಗೆ ತರಬೇತಿ ನೀಡುವ ಕೆಲಸವಾಗಬೇಕು. ಉದ್ಯೋಗಕ್ಕಾಗಿ ಜಿಲ್ಲೆಯಿಂದ ಗುಳೆ ಹೋಗುವವರ ಪ್ರಮಾಣ ಹೆಚ್ಚಿದೆ. ಅದಕ್ಕೆ ಮುಖ್ಯವಾಗಿ ಯುವಕರಲ್ಲಿ ಇರುವ ಕೌಶಲ್ಯದ ಕೊರತೆಯೇ ಕಾರಣ ಎಂದರು.
ಕೋವಿಡ್ ಹರಡುವುದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಲಾಕ್ ಡೌನ್ ವೇಳೆ ಜಿಲ್ಲೆಯ ಅಕ್ಕಿಯನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ಎಚ್ಚರಿಕೆಯಿಂದ ಸರಬರಾಜು ಮಾಡಲಾಗಿದೆ ಎಂದರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಶಿಕ್ಷಣ ನಿರ್ದೇಶಕ ಡಾ| ಎಂ.ಜಿ. ಪಾಟೀಲ್ ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ. ಶಿಕ್ಷಕರು ಮಕ್ಕಳಿಗೆ ಹೊಸ ತಂತ್ರಜ್ಞಾನ ಮೂಲಕ ಬೋಧಿ ಸಬೇಕಿದೆ ಎಂದರು.
ಎಡಿಸಿ ದುರುಗೇಶ, ಡಯಟ್ ಕಾಲೇಜು ಪ್ರಾಚಾರ್ಯ ವೃಷಭೇಂದ್ರಯ್ಯ ಸ್ವಾಮಿ, ಜಿಪಂ ಯೋಜನಾ ಧಿಕಾರಿ ಡಾ.ಟಿ. ರೋಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿ ಕಾರಿ ಎಂ.ಎಸ್. ಗೋನಾಳ, ಚೆನ್ನೈನ ಪ್ಯಾಂಟೆಕ್ ಗ್ರುಪ್ ಆಫ್ ಕಂಪನಿಗಳ ನಿರ್ದೇಶಕ ಸೆಂಥಿಲ್ ಕುಮಾರ್, ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಶ್ರೀನಿವಾಸ ಇತರಿದ್ದರು.
ಬಿಇಒ ಚಂದ್ರಶೇಖರ ದೊಡ್ಡಮನಿ ಸ್ವಾಗತಿಸಿದರು. ಮುರಳೀಧರ ಕುಲಕರ್ಣಿ, ಶಿಕ್ಷಕ ಲಕ್ಷ್ಮೀಕಾಂತ ರೆಡ್ಡಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿ ನಿರ್ವಹಿಸಿದರು.