Advertisement

ಪೊಲೀಸರ ವೇತನ ಹೆಚ್ಚಳಕ್ಕೆ ಮತ್ತೆ ವಿಘ್ನ

11:33 PM Sep 17, 2019 | Team Udayavani |

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಅವರು ಹೊರಡಿಸಿದ್ದ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಕುರಿತಾದ ಪರಿಷ್ಕೃತ ಆದೇಶವನ್ನು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದೆ.

Advertisement

ಬಸವರಾಜು ಬೊಮ್ಮಾಯಿ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸರ ವೇತನ ಪರಿಷ್ಕರಣೆ ಕುರಿತ ಔರಾದ್ಕರ್‌ ವರದಿ ಜಾರಿಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಪೊಲೀಸರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು ಪೊಲೀಸ್‌ ಕಾನ್‌ಸ್ಟೇಬಲ್‌ (ನಾಗರಿಕ ಮತ್ತು ಮೀಸಲು ಪಡೆ), ಹೆಡ್‌ ಕಾನ್‌ಸ್ಟೇಬಲ್‌, ಸಹಾಯಕ ಸಬ್‌ಇನ್‌ಸ್ಪೆಕ್ಟರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ವರಿಷ್ಠಾಧಿಕಾರಿಗಳ

(ನಾನ್‌ ಐಪಿಎಸ್‌) ವೇತನ ಪರಿಷ್ಕರಿಸಿ ಆ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದರು. ಹಾಗೆಯೇ ಪ್ರಸ್ತುತ ಮಾಹೆಯ ವೇತನದಲ್ಲಿ ಅದನ್ನು ಸೇರಿಸಲು ಕ್ರಮ ಕೈಗೊಳ್ಳಲು ಬಟವಾಡೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸೆ.13ರಂದು ಸುತ್ತೋಲೆ ಹೊರಡಿಸಿದ್ದರು. ಆದರೆ, ಮಂಗಳವಾರ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ ಎಂ.ಎ.ಸಲೀಂ ಅವರು ಈ ಸುತ್ತೋಲೆಗೆ ತಡೆಯಾಜ್ಞೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.

ಆ.20ರಂದು ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದಂತೆ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ವೇತನವನ್ನು ಪರಿಷ್ಕರಿಸಿ ವೇತನಕ್ಕೆ ಸೇರ್ಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ, ಈ ಕುರಿತು ಸರ್ಕಾರ ಅಥವಾ ಪ್ರಧಾನ ಕಚೇರಿಯಿಂದ ಆದೇಶ ನೀಡುವವರೆಗೂ ವೇತನ ನಿಗದಿ ಪಡಿಸುವ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಿರಲು ತಿಳಿಯಪಡಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

ಲೆಕ್ಕಾಚಾರದಲ್ಲಿ ವ್ಯತ್ಯಾಸ: ಈ ಹಿಂದಿನ ಸುತ್ತೋಲೆಯಲ್ಲಿ ಸೂಚಿಸಿರುವ ವೇತನ ಪರಿಷ್ಕರಣೆ ಕುರಿತಾದ ಲೆಕ್ಕಾಚಾರದಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ. ವಿಶೇಷ ಭತ್ಯೆ ಸೇರಿ ಕೆಲ ಭತ್ಯೆಯ ಮೊತ್ತದಲ್ಲಿ ಏರುಪೇರಾಗಿದ್ದು, ಈ ಕುರಿತು ಕೆಲವೇ ದಿನಗಳಲ್ಲಿ ಪರಿಶೀಲಿಸಿ ತಿಂಗಳಾಂತ್ಯದಲ್ಲಿ ಹೊಸ ಸುತ್ತೋಲೆ ಹೊರಡಿಸಲಾಗುವುದು. ಅದುವರೆಗೂ ಆದೇಶವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

Advertisement

ಡಿವೈಎಸ್‌ಪಿ, ಆರ್ಡರ್ಲಿಗಳನ್ನು ಮರೆತ ಸರ್ಕಾರ: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ನೇತೃತ್ವದಲ್ಲಿ ವೇತನ ಪರಿಷ್ಕರಣೆ ಕುರಿತು ಸಮಿತಿ ರಚಿಸಲಾಗಿತ್ತು. ನಂತರ ನೆರೆ ರಾಜ್ಯಗಳ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ವೇತನ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರವಾದ ವರದಿಯನ್ನು ಸಮಿತಿ ಸರ್ಕಾರಕ್ಕೆ ನೀಡಿತ್ತು.

ಈ ವರದಿಯಲ್ಲಿ ಆರ್ಡರ್ಲಿಗಳು (ಅನುಯಾಯಿಗಳು) ಸೇರಿ ನಾನ್‌ ಐಪಿಎಸ್‌ವರೆಗಿನ ಎಲ್ಲ ಹಂತದ ಅಧಿಕಾರಿಗಳ ವೇತನ ಹೆಚ್ಚಳದ ಬಗ್ಗೆ ಉಲ್ಲೇಖೀಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ, ನಂತರ ಬಂದ ಮೈತ್ರಿ ಸರ್ಕಾರ ಮತ್ತು ಪ್ರಸ್ತುತ ಬಿಜೆಪಿ ಸರ್ಕಾರದಲ್ಲೂ ಡಿವೈಎಸ್‌ಪಿ ಮತ್ತು ಅನುಯಾಯಿಗಳ ವೇತನ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲದಿರುವುದು ಪೊಲೀಸ್‌ ಸಿಬ್ಬಂದಿಯ ಮೊಗದಲ್ಲಿ ಮತ್ತೆ ನಿರಾಸೆ ಮೂಡಿಸಿದೆ.

ಪೊಲೀಸ್‌ ಇಲಾಖೆ ಸ್ಪಷ್ಟನೆ: ಪೊಲೀಸರ ವೇತನ ಪರಿಷ್ಕರಣೆ ಸಂಬಂಧದ ಗೊಂದಲಗಳಿಗೆ ಒಂದೆರಡು ದಿನಗಳಲ್ಲಿ ಪರಿಹಾರ ಸೂಚಿಸಲಾಗುವುದು. ಈ ಬಗ್ಗೆ ಎಲ್ಲ ಘಟಕಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಎಚ್‌ಆರ್‌ಎಂಎಸ್‌ನ ಯೋಜನಾ ನಿರ್ದೇಶಕರು ಹಣಕಾಸು ಇಲಾಖೆಗೆ ಮಾಹಿತಿ ನೀಡಿ, ಹೊಸ ವೇತನ ರಸೀದಿ (ಪೇ ಸ್ಲಿàಪ್‌) ಸಿದ್ದಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next