Advertisement

ತ್ಯಾಜ್ಯ ಸಮಸ್ಯೆಗೆ ಇಂಧನ ಉತ್ಪಾದನೆ ಮದ್ದು

12:15 PM Mar 18, 2017 | Team Udayavani |

ವಿಧಾನ ಪರಿಷತ್‌: ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಅದರ ಸಮರ್ಪಕ ಮರುಬಳಿಕೆಗೆ ಶಾಶ್ವತ ಪರಿಹಾರ ಕಂಡಕೊಳ್ಳಲು ಗ್ರಾಮ ಅಥವಾ ಗ್ರಾಮ ಪಂಚಾಯಿತಿಯನ್ನು ಕ್ಲಸ್ಟರ್‌ ಮಾಡಿಕೊಂಡು ತ್ಯಾಜದಿಂದ ಇಂಧನ ಉತ್ಪಾದಿಸುವ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಸ್ವತ್ಛ ಭಾರತ್‌ ಯೋಜನೆಯಡಿ ಶೌಚಾಲಯಗಳ ನಿರ್ಮಾಣಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ಆದೇ ರೀತಿ ಗ್ರಾಮೀಣ ಪ್ರದೇಶಗಳ ತ್ಯಾಜ್ಯ ವಿಲೇವಾರಿಗೂ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಅಭಿಯಾನ ನಡೆಸಬೇಕು.

ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರವೂ ಒತ್ತು ನೀಡಬೇಕು ಎಂದು ಹೇಳಿದರು. ಸ್ವತ್ಛ ಭಾರತ ಯೋಜನೆಯಡಿ 500ಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮ ಪಂಚಾಯಿತಿಗಳಿಗೆ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯದ 60:40 ಅನುಪಾತದಲ್ಲಿ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ರಾಜ್ಯದ 6,022 ಗ್ರಾಪಂಗಳ ಪೈಕಿ 2013-14ರಿಂದ 2017ರ ಫೆಬ್ರವರಿವರೆಗೆ 405 ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ.

ಈವರೆಗೆ 63 ಘಟಕಗಳನ್ನು ನಿರ್ಮಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಜಾಗ ಗುರುತಿಸಿ, ಗ್ರಾಮ ಸಭೆಯಲ್ಲಿ ಅದಕ್ಕೆ ಅನುಮೋದನೆ ಪಡೆದುಕೊಂಡು ಇಲಾಖೆಗೆ ಮಾಹಿತಿ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಹಳ್ಳಿ ಸಂತೆ “ವರ್ಗೀಕರಣ’ 
ಗ್ರಾಮ ಪಂಚಾಯಿತಿಗಳಲ್ಲಿ ನಡೆಸುತ್ತಿರುವ ಹಳ್ಳಿ ಸಂತೆಗಳಿಗೆ ದೊಡ್ಡ ಹಾಗೂ ಸಣ್ಣ ಗ್ರಾಮ ಪಂಚಾಯಿತಿಗಳಿಗೂ ಅಷ್ಟೇ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದರಲ್ಲಿ ಬದಲಾವಣೆ ತರುವಂತೆ ಬಿಜೆಪಿಯ ಭಾನುಪ್ರಕಾಶ್‌ ನೀಡಿದ ಸಲಹೆಗೆ ಸ್ಪಂದಿಸಿದ ಸಚಿವರು, ರಾಜ್ಯದ 45 ಗ್ರಾಮ ಪಂಚಾಯಿತಿಗಳಲ್ಲಿ “ಹಳ್ಳಿ ಸಂತೆ’ ಯೋಜನೆಯಡಿ ಮಾರುಕಟ್ಟೆ ಕಟ್ಟಡ ಹಾಗೂ ಪ್ರಾಂಗಣ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ 12.50 ಕೋಟಿ ರೂ. ಅನುದಾನ ನೀಡಲಾಗಿದೆ.

Advertisement

ಇನ್ನು ಮುಂದೆ ಎ ಮತ್ತು ಬಿ ಕೆಟಗರಿ ಎಂದು ಗುರುತಿಸಿ 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಪಂಗಳ ಹಳ್ಳಿ ಸಂತೆಗೆ ಎ ಕೆಟಗರಿಯಲ್ಲಿ ಪರಿಗಣಿಸಿ ಹೆಚ್ಚು ಅನುದಾನ ನೀಡಲಾಗುವುದು. ಸಣ್ಣ ಗ್ರಾ.ಪಂ.ಗಳನ್ನು ಬಿ ಕೆಟಗರಿ ಎಂದು ಪರಿಗಣಿಸಿ ಅಲ್ಲಿಗೆ ಬೇಕಾಗುವಷ್ಟು ಅನುದಾನ ನೀಡಲಾಗುವುದು. ಹಳ್ಳಿ ಸಂತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು 45 ಲಕ್ಷ ರೂ. ಒದಗಿಸಲಾಗುತ್ತಿದ್ದು, ಈ ಹಣ ಬಳಸಿಕೊಂಡು ಸಂಬಂಧಪಟ್ಟ ಗ್ರಾಪಂಗಳೇ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next