Advertisement

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

06:27 PM Oct 24, 2021 | Team Udayavani |

ಕಾರ್ಕಳ: ಮಂಗಳೂರಿನಿಂದ ಶಿರ್ತಾಡಿ, ಮೂಡಬಿದಿರೆ ಸಂಪರ್ಕ ರಸ್ತೆಯ ಜಂಕ್ಷನ್‌ಗೆ ಬಂದು ಸೇರುವಲ್ಲಿ ಹತ್ತಾರು ಮೂಲ ಸೌಕರ್ಯ ಸಮಸ್ಯೆಗಳು ಜನರನ್ನು ನಿತ್ಯ ಕಾಡುತ್ತಿವೆ. ಈದು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕಾರ್ಕಳ- ನಾರಾವಿ ಮಧ್ಯೆ ಇರುವ ಹೊಸ್ಮಾರು ಜಂಕ್ಷನ್‌ನಲ್ಲಿ ಚರಂಡಿ, ಸೂಕ್ತ ಬಸ್‌ ತಂಗುದಾಣ, ಸಾರ್ವಜನಿಕ ಶೌಚಾಲಯ ಇಲ್ಲದೆ ಪ್ರಯಾಣಿಕರು, ವ್ಯಾಪಾರಸ್ಥರು, ವಾಹನ ಚಾಲಕರು ನಾನಾ ಸಮಸ್ಯೆ ಅನುಭವಿಸುವಂತಾಗಿದೆ.

Advertisement

ಈ ಜಂಕ್ಷನ್‌ನಲ್ಲಿ ಹತ್ತಾರು ಅಂಗಡಿಗಳಿವೆ. ಕ್ಲಿನಿಕ್‌, ಆಯುರ್ವೇದ ಕೇಂದ್ರ,ಕೆಲ ಕಚೇರಿಗಳು ಇಲ್ಲಿವೆ. ಸುತ್ತಮುತ್ತಲಿ ನವರು ವಿವಿಧ ಕಾರಣಗಳಿಗಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಬಸ್‌ ನಿಲ್ದಾಣಶಿಸ್ತುಬದ್ದವಾಗಿಲ್ಲದ ಕಾರಣ ಬಳಕೆಗೆ ಯೋಗ್ಯವಾಗಿಲ್ಲ. ಇಲ್ಲಿ ಬಸ್‌ನಿಲ್ದಾಣ ಉಪಯೋಗಕ್ಕೆ ಇರಬೇಕಿದ್ದ ಜಾಗದಲ್ಲಿಲ್ಲ. ರಸ್ತೆಯ ಆಚೆ ಬದಿಯಲ್ಲಿ ಬಸ್‌ ನಿಲ್ದಾಣವಿದೆ. ಬಸ್‌ ಹತ್ತಲು ರಸ್ತೆ ದಾಟಿ ಬರಬೇಕು. ದಾಟುವ ವೇಳೆ ಸಮಸ್ಯೆಯಾಗುತ್ತಿದೆ. ಬಸ್‌ನಿಲ್ದಾಣಕ್ಕೆ ತೆರಳಲು ಯಾರೂ ಕೇಳುತ್ತಿಲ್ಲ. ಇದರಿಂದ ಕಾರ್ಕಳ, ಮಂಗಳೂರು, ಧರ್ಮಸ್ಥಳ ಕಡೆಗೆ ಪ್ರಯಾಣಿಸುವವರು ರಸ್ತೆ ಬದಿಯಲ್ಲೆ ಬಸ್‌ಗಾಗಿ ಕಾಯುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳು ನಿತ್ಯ ರಸ್ತೆ ಬದಿಯಲ್ಲಿ ಬಿಸಿಲು, ಮಳೆಗೆ ಮೈಯೊಡ್ಡಿ ನಿಂತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಸಣ್ಣ ಮಕ್ಕಳು ರಸ್ತೆ ಕಡೆಗೆ ಬಂದಲ್ಲಿ ಅಪಾಯವೂ ಇದೆ. ಸಾರ್ವಜನಿಕರ ಸಮಸ್ಯೆ ಅರಿತ ಜೈನ ಸಮುದಾಯದ ಶ್ರಾವಕ, ಶ್ರಾವಿಕೆಯರು ಜಂಕ್ಷನ್‌ನಲ್ಲೆ ನಾಲ್ಕೈದು ಮಂದಿ ವಿಶ್ರಾಂತಿ ಪಡೆಯುವಂತೆ ಕಟ್ಟೆಯೊಂದನ್ನು ನಿರ್ಮಿಸಿ ಸಹಕರಿಸಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ.

ಸಾರ್ವಜನಿಕ ಶೌಚಾಲಯವಿಲ್ಲ
ಜಂಕ್ಷನ್‌ನಲ್ಲಿ ಸಾರ್ವಜನಿಕರ ಬಳಕೆಗೆ ಸೂಕ್ತ ಸಾರ್ವಜನಿಕ ಶೌಚಾಲಯವಿಲ್ಲ. ಇಲ್ಲಿಂದ ಸುಮಾರು 200 ಮೀ. ದೂರದಲ್ಲಿ ಖಾಸಗಿ ಸಂಸ್ಥೆ ನಿರ್ಮಿಸಿದ ಶೌಚಾಲಯವಿದ್ದು. ಅದು ತುಸು ದೂರದಲ್ಲಿದೆ. ಜಂಕ್ಷನ್‌ಗೆ ಬರುವವರಿಗೆ ಅದು ಉಪಯುಕ್ತವಾಗಿಲ್ಲ. ಬಸ್‌ಗಾಗಿ ಕಾಯುವವರು ಪಕ್ಕದಲ್ಲಿರುವ ಕಟ್ಟಡ, ಅಂಗಡಿಗಳ ಹಿಂದಿನ ನಿರ್ಜನ ಪ್ರದೇಶಗಳಿಗೆ ತೆರಳುತ್ತಾರೆ. ಮಹಿಳೆಯರು, ಶಾಲಾ ಮಕ್ಕಳು ಮುಜುಗರ ಅನುಭವಿಸುತ್ತಾರೆ. ಪಿಡಬ್ಲ್ಯುಡಿ ಇಲಾಖೆಯಿಂದ ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೂ ಆಗಿಲ್ಲ. ಎರಡೂ ಜಿಲ್ಲೆಗೆ ಹಂಚಿಕೊಂಡಿದೆ ಜಂಕ್ಷನ್‌ ಬಳಕೆ ದ.ಕ., ಉಡುಪಿ ಜಿಲ್ಲೆಗಳ ಕೆಲ ಗ್ರಾಮಗಳಿಗೆ ಹಂಚಿಕೊಂಡಿದೆ. ದ.ಕ. ಜಿಲ್ಲೆಯ ಮಾಂಟ್ರಾಡಿ, ಬೋರುಗುಡ್ಡೆ, ನಾರಾವಿ, ಅಲಿಯೂರು, ನೆಲ್ಲಿಕಾರು,
ಉಡುಪಿ ಜಿಲ್ಲೆಗೆ ಸೇರಿದ ಈದು, ನೂರಾಲ್‌ ಬೆಟ್ಟು ಆಸುಪಾಸಿನವರಿಗೆಇದು ಅನುಕೂಲವಾಗಿದೆ.

ಇದನ್ನೂ ಓದಿ:ಎಂ.ಎ.ಹೆಗಡೆ ಅವರಿಗೆ‌ ಮರಣೋತ್ತರ ಚಂದುಬಾಬು‌ ಪ್ರಶಸ್ತಿ ಪ್ರದಾನ‌

ಶಿಥಿಲಗೊಂಡ ಬಸ್‌ ನಿಲ್ದಾಣ
ಇದ್ದ ಬಸ್‌ನಿಲ್ದಾಣ ಕೂಡ ಶಿಥಿಲಾವಸ್ಥೆಯಲ್ಲಿದ್ದು ಕುಡುಕರ ತಾಣದಂತಿದೆ. ಇಲ್ಲಿಯ ಮೇಲ್ಛಾವಣಿ, ಪೀಠೊಪಕರಣಗಳು ಮುರಿದು ನೇತಾಡಿಕೊಂಡು ಧರೆಗೆ ಬೀಳುವುದರಲ್ಲಿದೆ. ಮಳೆಗೆ ನೀರು ಒಳಗೆ ಬರದಂತೆ ಪ್ಲಾಸ್ಟಿಕ್‌ ಹೊದಿಸಲಾಗಿದೆ. ಬಸ್‌ನಿಲ್ದಾಣದ ಒಳಗೆ ಬೀಡಿ, ಗುಟ್ಕ ಇನ್ನಿತರ ತ್ಯಾಜ್ಯ ವಸ್ತುಗಳು ತುಂಬಿ ಹೋಗಿದ್ದು, ದನದ ದೊಡ್ಡಿಯಂತಿದೆ. ಇಲ್ಲಿ ಕುಡುಕರು ಬಿಡಾರ ಹೂಡುತ್ತಿದ್ದು, ಇದರೊಳಗೆ ನಾಗರಿಕರು ತೆರಳುವಂತಿಲ್ಲ.

Advertisement

ಫ‌ಂಡ್‌ ಮೀಸಲಿರಿಸಲಾಗಿದೆ
ಸಾರ್ವಜನಿಕ ಶೌಚಾಲಯ ಇದೆ. ಅದು ಸ್ವಲ್ಪ ದೂರದಲ್ಲಿದೆ. ಜಂಕ್ಷನ್‌ನಲ್ಲೆ ಜನರಿಗೆ ಅನುಕೂಲವಾಗಲೆಂದು ಶೌಚಾಲಯ ತೆರೆಯಲು ಫ‌ಂಡ್‌ ಮೀಸಲಿರಿಸಲಾಗಿದೆ. ಇತರ ಸೌಕರ್ಯ ಕಲ್ಪಿಸಲು ಖಾಸಗಿ ಜಾಗದ ಸಮಸ್ಯೆಯೂ ಇದೆ.
-ಎನ್‌. ವಿಜಯಕುಮಾರ ಜೈನ್‌, ಉಪಾಧ್ಯಕ್ಷ , ಗ್ರಾ.ಪಂ. ಈದು

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next