Advertisement

ಪರಾರಿಯಾಗಿದ್ದ ಕೈದಿ ಶಂಕರ ಮತ್ತೆ ಸೆರೆಮನೆಗೆ

11:32 AM May 21, 2017 | |

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಪಟ್ಟು ನಾಲ್ಕು ವರ್ಷಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಶಂಕರ್‌ ಅಲಿಯಾಸ್‌ ಎಸ್ಕೇಪ್‌ ಶಂಕರ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.

Advertisement

ಮಾರು ವೇಷದಲ್ಲಿ ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ಗೆ ಬಂದಿದ್ದ ಕಬ್ಬನ್‌ಪೇಟೆ ನಿವಾಸಿ ಶಂಕರ್‌ನನ್ನು ಪರಪ್ಪನ ಅಗ್ರಹಾರ, ಆರ್‌.ಆರ್‌.ನಗರ ಮತ್ತು ಬ್ಯಾಟರಾಯನಪುರ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿ, ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

2000ರಲ್ಲಿ ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಶಂಕರಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2011ರಲ್ಲಿ ಪೆರೋಲ್‌ ಮೇಲೆ ಬಂದ ಆರೋಪಿ ನಾಪತ್ತೆಯಾಗಿದ್ದು, ಮತ್ತೆ ಬಂಧಿಸಲಾಯಿತು. ಬಳಿಕ 2013 ಜ.2ರಂದು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ವೇಳೆ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಅಲ್ಲಿಂದ ಪರಾರಿಯಾಗಿದ್ದ. ಈತನ ಹುಡುಕಾಟ ನಡೆಸಿದ ಪೊಲೀಸರು ಬಂಧಿಸುವಲ್ಲಿ ವಿಫ‌ಲರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ಕಾರ್ಯಾಚರಣೆ ಹೇಗೆ?: ಸಿವಿಲ್‌ ಎಂಜಿನಿಯರ್‌ ಆಗಿರುವ ಶಂಕರ್‌ ನೆರೆ ರಾಜ್ಯ ಮತ್ತು ನಗರದಲ್ಲಿ ಫೀಲ್ಡ್‌ ವರ್ಕ್‌ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಲ್ಲದೇ ಶುಕ್ರವಾರ ಸಂಜೆ ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ನ ಮ್ಯಾಕ್‌ ಡೊನಾಲ್ಡ್‌ಗೆ ಬಂದಿರುವ ಬಗ್ಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿ ಕೃಷ್ಣಕುಮಾರ್‌ಗೆ ಖಚಿತ ಮಾಹಿತಿ ಬಂದಿತ್ತು.

ಕೂಡಲೇ ಕೃಷ್ಣಕುಮಾರ್‌ ಆರ್‌.ಆರ್‌.ನಗರ ಮತ್ತು ಬ್ಯಾಟರಾಯನಪುರ ಮತ್ತು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಸುಮಾರು 20 ಮಂದಿಯ ತಂಡ ಗೋಪಾಲನ್‌ಮಾಲ್‌ನ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಸಿತು.

Advertisement

ಈ ವೇಳೆ ಮ್ಯಾಕ್‌ ಡೋನಾಲ್ಡ್‌ನಲ್ಲಿ ಜೀನ್ಸ್‌ ಪ್ಯಾಂಟ್‌, ಪೂರ್ಣ ತೋಳಿನ ಶರ್ಟ್‌, ಐಷಾರಾಮಿ ಕನ್ನಡಕ ಧರಿಸಿ ಜಂಟಲ್‌ಮಾÂನ್‌ ರೀತಿ ನಿಂತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಸಿಬ್ಬಂದಿಯೊಬ್ಬರು ದೂರದಲ್ಲೇ ನಿಂತು ಫೋಟೋ ತೆಗೆದು ಜೈಲು ಅಧಿಕಾರಿ ಕೃಷ್ಣಕುಮಾರ್‌ಗೆ ವ್ಯಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು. ನಂತರ ಬ್ಯಾಟರಾಯನಪುರ ಮತ್ತು ಆರ್‌.ಆರ್‌.ನಗರ ಠಾಣೆಗಳಲ್ಲಿದ್ದ ಫೋಟೋಗಳನ್ನು ತರಿಸಿಕೊಳ್ಳಲಾಯಿತು.

ಈತನೇ ಆರೋಪಿ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸುತ್ತಿದ್ದಂತೆ ಹಿರಿಯ ಅಧಿಕಾರಿಯೊಬ್ಬರು ಮಫ್ತಿಯಲ್ಲಿ ಆತನ ಬಳಿ ಹೋಗಿ ವಿಳಾಸ ಕೇಳುವ ನೆಪದಲ್ಲಿ ಮಾತಿಗೆಳೆದಿದ್ದಾರೆ. ಭಾಷೆ ಗೊತ್ತಿಲ್ಲದೇ ಸನ್ನೆ ಮೂಲಕ ಉತ್ತರಿಸುತ್ತಿದ್ದ ಶಂಕರ್‌, ಮಾತನಾಡಿಸುತ್ತಿರುವುದು ಪೊಲೀಸರು ಎಂದು ತಿಳಿಯುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ.

ಅಷ್ಟರಲ್ಲಾಗಲೇ 20 ಮಂದಿ ಸಿಬ್ಬಂದಿ ಆರೋಪಿಯನ್ನು ಸುತ್ತವರಿದು ಬಂಧಿಸಿದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ಕೊಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಪ್ರಕರಣ ವಿವಿಪುರಂ ಠಾಣೆಯಲ್ಲಿ ದಾಖಲಾಗಿದೆ

2013ರಿಂದ ಆರೋಪಿ ತಲೆಮರೆಸಿಕೊಂಡಿದ್ದ. ಶುಕ್ರವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಮೂರು ಠಾಣೆಗಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಮೈಸೂರು ರಸ್ತೆಯ ಗೋಪಾಲ್‌ನ್‌ ಮಾಲ್‌ನಲ್ಲಿ ಎಸ್ಕೇಪ್‌ ಶಂಕರನನ್ನು ಬಂಧಿಸಲಾಗಿದೆ.
-ಕೃಷ್ಣಕುಮಾರ್‌, ಪರಪ್ಪನ ಅಗ್ರಹಾರ ಕಾರಾಗೃಹದ ಜೈಲು ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next