ಸಾಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾ ರಂಗಗಳು ಪ್ರಜೆಗಳನ್ನು ಮಾಲಕರನ್ನಾಗಿ ನೋಡಿ ಪರಿಪೂರ್ಣ ಸೇವೆ ಅವರಿಗೆ ಲಭಿಸುವಂತೆ ಮಾಡಬೇಕಿತ್ತು. ಸಾಕಷ್ಟು ನ್ಯೂನತೆಗಳನ್ನು ಹೊಂದಿದ್ದರೂ ಇವತ್ತಿಗೂ ಮುದ್ರಣ ಮಾಧ್ಯಮ ಹೆಚ್ಚು ಪ್ರಭಾವಯುತವಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬ್ರಾಸಂ ಸಭಾಭವನದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತದಲ್ಲಿನ ಪ್ರಮುಖ ಅಧಿಕಾರಿಗಳಿಗೆ “ಕಾಲು ಸಂಕ’ ಎಂದರೆ ಏನೆಂಬುದು ಗೊತ್ತಿಲ್ಲದ ಸ್ಥಿತಿಯಲ್ಲಿ ಪತ್ರಿಕೆಗಳು ಪ್ರತಿ ದಿನ ಕಾಲುಸಂಕಗಳ ಚಿತ್ರಣವನ್ನು ನೀಡಿದ್ದರಿಂದ ಮಳೆಗಾಲದ ಅವುಗಳ ಅಪಾಯ ಸರ್ಕಾರಕ್ಕೆ ಮನವರಿಕೆ ಆಯಿತು. ಇಂತಹ ಕಾಲುಸಂಕಗಳ ನಿರ್ಮಾಣಕ್ಕಾಗಿಯೇ ಹೊಸ ಯೋಜನೆಯೊಂದು ಸಾಕಾರಗೊಳ್ಳಲು ಕಾರಣವಾಗಿದೆ ಎಂದರು.
ಹೊಸ ಯೋಜನೆಯ ಅನ್ವಯ ಸರ್ಕಾರದಿಂದ ಹಣ ಲಭ್ಯವಾದರೆ ಮಲೆನಾಡಿನ ಆರೇಳು ತಾಲೂಕುಗಳಲ್ಲಿ 500 ಕಾಲುಸಂಕಗಳ ನಿರ್ಮಾಣವಾಗುತ್ತದೆ. ಆದರೆ ಯೋಜನೆಯೊಂದು ಬಂದಿದೆ ಎಂದ ತಕ್ಷಣ ಏಕಾಏಕಿ ಹೊಸನಗರ ತಾಲೂಕಿನಿಂದ 225 ಕಾಲುಸಂಕದ ಬೇಡಿಕೆ ಬರುತ್ತದೆ ಎಂಬುದು ಸಹನೀಯವಲ್ಲ. ಅಗತ್ಯವನ್ನು ಮನದಟ್ಟು ಮಾಡಿ ಪಟ್ಟಿ ಮಾಡಲು ಹೊರಟಾಗ ಹೊಸನಗರದ ಅಗತ್ಯ ಕಾಲುಸಂಕಗಳ ಸಂಖ್ಯೆ 13ಕ್ಕೆ ಇಳಿದಿದೆ. ಇದನ್ನು ಸಾಕಾರಗೊಳಿಸಿದ ಕೀರ್ತಿ ಪತ್ರಿಕೆಗಳಿಗೆ ಸಲ್ಲಬೇಕು. ಕೆಲವು ವೈಪರೀತ್ಯ ಪತ್ರಿಕಾ ಕ್ಷೇತ್ರ ಹಾಗೂ ಪತ್ರಕರ್ತರಲ್ಲಿ ಇದ್ದರೂ ಪತ್ರಿಕಾ ರಂಗ ಮಾತ್ರ ಅತ್ಯಂತ ದಿಟ್ಟವಾಗಿ ಮುನ್ನಡೆಯುತ್ತಿದೆ. ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ| ಬಂಜಗೆರೆ ಜಯಪ್ರಕಾಶ್ “ಮಾಧ್ಯಮ ಆ ಮುಖ-ಈ ಮುಖ’ ವಿಷಯ ಕುರಿತು ಉಪನ್ಯಾಸ ನೀಡಿ, ಪತ್ರಕರ್ತ ಮಹಾಭಾರತದ ಸಂಜಯ ಧೃತರಾಷ್ಟ್ರನಿಗೆ ಯುದ್ಧದ ವರದಿ ನೀಡಿದಂತಿರಬೇಕು. ಪತ್ರಿಕಾ ವರದಿ ನಿಜ ಎನ್ನುವುದಕ್ಕೆ ಇನ್ನೊಂದು ಮಾತು ಎಂಬ ಕಾಲವಿತ್ತು. ಒಬ್ಬ ನಿಷ್ಠ ನ್ಯಾಯಾಧಿಧೀಶರ ಮನಃ ಸ್ಥಿತಿಯನ್ನು ಪತ್ರಕರ್ತ ಅಳವಡಿಸಿಕೊಂಡರೆ ಆತನ ಸತ್ಯಶೋಧ ತಾಕತ್ತು ಉಳಿಯುತ್ತದೆ. ಪತ್ರಕರ್ತರಿಗೆ ನೀಡುವ ಉಡುಗೊರೆ, ಸೌಕರ್ಯಗಳು ಒಪ್ಪಿತ ರಿವಾಜು ಎಂಬಲ್ಲಿಗೆ ಬಂದರೆ ಸಮಾಜ ಕೆಟ್ಟ ಸಂಸ್ಕೃತಿಯನ್ನು ಪ್ರತಿಪಾದಿಸಿದಂತಾಗುತ್ತದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ, ಬೇರೆಬೇರೆ ಮಾಧ್ಯಮಗಳ ನಡುವೆಯೂ ಪತ್ರಿಕಾ ಮಾಧ್ಯಮ ಗುಣಾತ್ಮಕವಾಗಿ ಬೆಳವಣಿಗೆಯಾಗುತ್ತಿದೆಯೆ ಎನ್ನುವ ಆತ್ಮಾವಲೋಕನ ಅಗತ್ಯ ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಾದ ಸಾಕ್ಷಿ ಸಾಗರ್, ಪ್ರಥಮ ಆರ್ ನಾಯ್ಡು, ಶಿವಾನಿ ಎಲ್., ಭೂಮಿ ಆರ್.ಪಿ., ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸೂರಜ್ ಆರ್. ನಾಯರ್, ಚಂದ್ರಶೇಖರ್ ಎನ್ ಅವರನ್ನು ಪುರಸ್ಕರಿಸಲಾಯಿತು. ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್, ಉಪಾಧ್ಯಕ್ಷೆ ಗ್ರೇಸಿ ಡಯಾಸ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಎಸ್.ವಿ. ಹಿತಕರ ಜೈನ್ ಇದ್ದರು. ವಿ. ಶಂಕರ್ ಪ್ರಾರ್ಥಿಸಿದರು. ಗಣಪತಿ ಶಿರಳಗಿ ಸ್ವಾಗತಿಸಿದರು. ರಾಜೇಶ್ ಬಡ್ತಿ ವಂದಿಸಿದರು. ಜಿ. ನಾಗೇಶ್ ನಿರೂಪಿಸಿದರು.