ಧಾರವಾಡ: ವಾಲ್ಮೀಕಿ ರಾಮಾಯಣದ ಜೋಡಿ ಹಕ್ಕಿಗಳಿಂದ ಹಿಡಿದು ಇಂದಿನ ನವದಂಪತಿಗಳವರೆಗಿನ ಒಂದು ಹೆಜ್ಜೆಯೂ ಪಲ್ಲಟವಿರದ ದಾಂಪತ್ಯ ಸಖ್ಯದ ಗುಣ ವಿಶೇಷಗಳನ್ನು ಬೇಂದ್ರೆ ತಮ್ಮ ಸಖೀಗೀತದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ಹಿಡಿದಿಟ್ಟಿದ್ದು ಅರ್ಧನಾರೀಶ್ವರ ತತ್ವವನ್ನು ವರಕವಿಗಳು ಈ ಕಾವ್ಯದಲ್ಲಿ ನಿಚ್ಚಳವಾಗಿ ದಾಖಲಿಸಿದ್ದಾರೆ ಎಂದು ಜ್ಯೋತಿ ಗುರುಪ್ರಸಾದ ಅಭಿಪ್ರಾಯಪಟ್ಟರು.
ಇಲ್ಲಿಯ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಕವಿಪತ್ನಿ ಲಕ್ಷ್ಮೀಬಾಯಿದತ್ತಾತ್ರೇಯ ಬೇಂದ್ರೆ ಅವರ ಜನ್ಮದಿನ ಅಂಗವಾಗಿ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಖೀಗೀತ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಲುಮೆ-ಕುಲುಮೆ, ನೋವು-ನಲಿವು, ಸರಸ- ವಿರಸಗಳ ಜೀವ ಪರಿಪಾಕ ಗೊಳ್ಳುವಿಕೆಯ ಕಥನದ ಮೂಲಕ ಬೇಂದ್ರೆ ಈ ಖಂಡ ಕಾವ್ಯದಲ್ಲಿ ಕುಟುಂಬ ಸ್ನೇಹವನ್ನು ವಿಶ್ವಸ್ನೇಹದೆತ್ತರಕ್ಕೆ ಒಯ್ಯುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ಕವಿ ಪ್ರಕಾಶ ಕಡಮೆ ಮತ್ತು ಕಥೆಗಾರ್ತಿ ಸುನಂದಾ ಕಡಮೆ ದಂಪತಿಯನ್ನು ಆತ್ಮೀಯವಾಗಿಸತ್ಕರಿಸಲಾಯಿತು.
ವ್ಯಾಸ ದೇಶಪಾಂಡೆ, ಚನ್ನಪ್ಪ ಅಂಗಡಿ, ಅರುಣ ದಾನಿ, ಜಿ.ಎನ್. ಇನಾಮದಾರ್, ಶ್ರೀನಿವಾಸ ವಾಡಪ್ಪಿ, ಎಂ.ವಿ.ಕಲ್ಲೂರಮಠ, ವಸಂತ ಅಣೆಕರ, ಶ್ರೀಧರ ಕುಲಕರ್ಣಿ, ರಾಜಕುಮಾರ ಮಡಿವಾಳರ, ಡಾ|ಮಂದಾಕಿನಿ ಪುರೋಹಿತ, ಸರಸ್ವತಿ ಭೋಸಲೆ, ಭಾಗ್ಯಜ್ಯೋತಿ ಹಿರೇಮಠ, ಅನುಪಮಾಢವಳೆ ಇದ್ದರು.
ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಸವರಾಜ ಹೂಗಾರ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ನಿರೂಪಿಸಿ, ವಂದಿಸಿದರು.