ನವದೆಹಲಿ: ಭಾರತದ ಸಂಸ್ಕೃತಿ, ಕಲೆ ಜತೆಗೆ ಇಲ್ಲಿನ ಆಹಾರ ಪದ್ಧತಿಯೂ ವಿದೇಶಿಗರನ್ನು ಸೆಳೆದಿಟ್ಟುಕೊಳ್ಳುತ್ತದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಅದಕ್ಕೆ ಸಾಕ್ಷಿ, ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಷಿ ಸುಜುಕಿ ! ಪುಣೆಯಲ್ಲಿ ಪತ್ನಿಯೊಂದಿಗೆ ವಡಾಪಾವ್ ಸವಿದು ಭಾರತದ ಅಡುಗೆಗೆ ಮಾರುಹೋಗಿರುವ ಅವರ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಕೂಡ ಟ್ವಿಟರ್‌ನಲ್ಲಿ ಅವರನ್ನು ಹುರಿದುಂಬಿಸಿದ್ದಾರೆ. ವಡಾಪಾವ್ ಸವಿಯುತ್ತಿರುವ ವಿಡಿಯೋವನ್ನು ಹಿರೋಷಿ ಹಂಚಿಕೊಂಡಿದ್ದಾರೆ. “ನನಗೆ ಭಾರತದ ರಸ್ತೆಬದಿಯ ತಿನಿಸುಗಳು ಎಂದರೆ ಇಷ್ಟ, ಆದರೆ ಸ್ವಲ್ಪ ಖಾರ ಕಡಿಮೆ ಮಾಡಿ” ಎಂದು ವಿನಂತಿಸಿದ್ದಾರೆ. ಮತ್ತೂಂದು ವಿಡಿಯೋದಲ್ಲಿ ಅವರ ಪತ್ನಿ ಖಾರ ಹೆಚ್ಚಾಗಿರುವ ಮಿಸಲ್ ಪಾವ್ ತಿಂದಿದ್ದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ರಾಯಭಾರಿಗಳೇ ಭಾರತದ ವೈಶಿಷ್ಟಪೂರ್ಣ ಅಡುಗೆಯನ್ನು ನೀವು ಆಸ್ವಾದಿಸುತ್ತಿರುವುದನ್ನು ನೋಡಲು ಸಂತಸವಾಗುತ್ತಿದೆ ಎಂದಿದ್ದಾರೆ.