ಬೆಂಗಳೂರು: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ 4,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.
14 ಮಂದಿ ಡಿಸಿಪಿ, 35 ಮಂದಿ ಎಸಿಪಿ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆಗೆ 3 ಸಾವಿರ ಹಾಗೂ ಸಂಚಾರ ನಿಯಂತ್ರಣಕ್ಕೆ 1,500 ಮಂದಿ, 50 ಕೆಎಸ್‌ಆರ್‌ಪಿ ತುಕಡಿ, 30 ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಹಾಗೇ ಅರಮನೆ ಸುತ್ತಮುತ್ತಲ ಪ್ರದೇಶಗಳಾದ ಬಳ್ಳಾರಿ ರಸ್ತೆ, ಜಯಮಹಲ ರಸ್ತೆ, ಮೇಖೀ ವೃತ್ತದಲ್ಲಿ ಅಧಿಕ ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದು, ನಗರ ಪ್ರವೇಶಿಸುವ ಪ್ರತಿ ವಾಹನವನ್ನು ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಸಂಚಾರ ಮಾರ್ಗ ಬದಲು: ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮೈಸೂರು ಮತ್ತು ತುಮಕೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮೈಸೂರು ರಸ್ತೆಯ ನಾಯಂಡಹಳ್ಳಿ-ಡಾ ರಾಜ್‌ಕುಮಾರ್ ಸಮಾಧಿ-ಗೊರಗುಂಟೆ ಪಾಳ್ಯ-ಹೆಬ್ಟಾಳ ಮೇಲ್ಸೆತ್ತುವೆ ಮಾರ್ಗದಲ್ಲಿ,
ಕನಕಪುರ ಮಾರ್ಗವಾಗಿ ಬರುವವರು ಬನಶಂಕರಿ ದೇವಾಲಯ-ಜಯನಗರ ಸೌತ್ ಎಂಡ್ ಸರ್ಕಲ್, ಟೌನ್‌ಹಾಲ್, ಮೈಸೂರು ಬ್ಯಾಂಕ್ ಮಾರ್ಗವಾಗಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿಯ ಸುರಂಗ ಮಾರ್ಗವಾಗಿ ಅರಮನೆ ಮೈದಾನ ಪ್ರವೇಶಿಸಬೇಕು. ಹೊಸೂರು ರಸ್ತೆ ಮೂಲಕ ಆಗಮಿಸುವ ಕಾರ್ಯಕರ್ತರು ಡೈರಿ ಸರ್ಕಲ್, ಲಾಲ್‌ಬಾಗ್ ಮುಖ್ಯದ್ವಾರ ಮೂಲಕ ಆಗಮಿಸಬೇಕು.
ಹಳೇ ಮದ್ರಾಸ್ ರಸ್ತೆ ಮಾರ್ಗವಾಗಿ ಬರುವವರು ಕೆ.ಆರ್.ಪುರಂ-ಹೆಣ್ಣೂರು ಜಂಕ್ಷನ್, ಹೆಬ್ಟಾಳ ಮೇಲ್ಸೆತ್ತುವೆ, ಮೇಖೀ ವೃತ್ತ ಮೂಲಕ, ಬಳ್ಳಾರಿ ರಸ್ತೆಯಿಂದ ಆಗಮಿಸುವವರು ದೇವನಹಳ್ಳಿ, ಚಿಕ್ಕಜಾಲ, ಕೊಡಗೇಹಳ್ಳಿ ಗೇಟ್, ಹೆಬ್ಟಾಳ, ಮೇಲ್ಸೆತ್ತುವೆ ಮಾರ್ಗ ಬಳಸಬೇಕು. ದೊಡ್ಡಬಳ್ಳಾಪುರ ಕಡೆಯಿಂದ ಬರುವವರು ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ಬಳ್ಳಾರಿ ರಸ್ತೆ, ಹೆಬ್ಟಾಳ ಮೇಲ್ಸೆತ್ತುವೆ ಮೂಲಕ ಆಗಮಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪಾರ್ಕಿಂಗ್ ನಿಷೇಧ: ಬಳ್ಳಾರಿ ರಸ್ತೆ, ಮೇಖೀ, ಚಾಲುಕ್ಯ ವೃತ್ತ, ರಮಣಮಹರ್ಶಿ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆ, ಸರ್ ಸಿ.ವಿ.ರಾಮನ್, ಹೆಬ್ಟಾಳ ಮೇಲ್ಸೆತ್ತುವೆ ಮೇಲೆ ಫೆ.4ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಅದೇ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರ ವಾಹನ ನಿಲ್ಲಿಸಲು ಸರ್ಕಸ್ ಮೈದಾನ, ಮಾವಿನಕಾಯಿ ಮಂಡಿ ಬಳಿ ಬಸ್‌ಗಳು ಹಾಗೂ ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳು ಸರ್ಕಸ್ ಮೈದಾನ ಪ್ರವೇಶಿಸಿ ಗೋಕಾರ್ಟಿಂಗ್ ಮೈದಾನದಲ್ಲಿ ನಿಲ್ಲಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.