Advertisement

ಜಲ ರಕ್ಷಣೆಗಿರಲಿ ಜನಬಲ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ

12:39 AM Jan 06, 2023 | Team Udayavani |

ಹೊಸದಿಲ್ಲಿ: ನೀರಿನ ಸಂರಕ್ಷಣೆಯಲ್ಲಿ ಸರ್ಕಾರದ ಕ್ರಮವೊಂದೇ ಸಾಕಾಗುವುದಿಲ್ಲ, ನಾಗರಿಕರು ಸಕ್ರಿಯ ವಾಗಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

Advertisement

ಭೋಪಾಲದಲ್ಲಿ ಆಯೋಜನೆಯಾಗಿದ್ದ ರಾಜ್ಯಗಳ ಜಲಸಂಪನ್ಮೂಲ ಸಚಿವರ ಮೊದಲ ಸಭೆಯಲ್ಲಿ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಕೂಡ ನೀರಿನ ಸಂರಕ್ಷಣೆಯ ಬಗ್ಗೆ ಹೊಣೆಯನ್ನು ಅರಿತುಕೊಂಡು ಭಾಗಿಯಾದಾಗ, ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.

“ನೀರು ಎನ್ನುವುದು ರಾಜ್ಯಗಳ ನಡುವೆ ಸಹಕಾರ (ಕೋ-ಆಪರೇಷನ್‌), ಸಹಯೋಗ (ಕೊಲಾಬೊ ರೇಷನ್‌), ಮತ್ತು ಸಮನ್ವಯ (ಕೊಆರ್ಡಿನೇಷನ್‌) ತತ್ವದ ಅಡಿ ಸಾಕಾರವಾಗಲು ಆದ್ಯತೆಯಾಗಬೇಕು. ಅತ್ಯಂತ ವೇಗವಾಗಿ ನಗರಗಳು ಬೆಳೆಯುತ್ತಿರುವುದ ರಿಂದ ದೂರದೃಷ್ಟಿಯಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು. ನೀರಿನ ಸಂರಕ್ಷಣೆ ಸಾಂವಿಧಾನಿಕವಾಗಿ ರಾಜ್ಯಗಳ ಅಧೀನದಲ್ಲಿ ಬರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ದೇಶದ ಹಲವು ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಮತ್ತು ನ್ಯಾಯಮಂಡಳಿಗಳಲ್ಲಿ ವ್ಯಾಜ್ಯಗಳ ವಿಚಾರಣೆ ವಿವಿಧ ಹಂತಗಳಲ್ಲಿ ಇರುವ ಸಂದರ್ಭದಲ್ಲಿಯೇ ನರೇಂದ್ರ ಮೋದಿಯವರ ಮಾತುಗಳು ಮಹತ್ವ ಪಡೆದಿವೆ.

75 ಅಮೃತ ಸರೋವರ: ನೀರಿನ ಸಂರಕ್ಷಣೆ ವಿಚಾರದಲ್ಲಿ ದೇಶವಾಸಿಗಳಿಗೆ ಮತ್ತಷ್ಟು ಅರಿವು ಮೂಡಿಸಬೇಕಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ಸ್ಥಳೀಯ ಮಟ್ಟದಲ್ಲಿ ನಡೆಯುವ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲು ಅವಕಾಶ ಉಂಟು ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ “75 ಅಮೃತ ಸರೋವರ ನಿರ್ಮಾಣ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ 25 ಸಾವಿರ ಸರೋವರಗಳನ್ನು ನಿರ್ಮಿಸ ಲಾಗಿದೆ ಎಂದರು ಪ್ರಧಾನಿ. ಪ್ರತಿ ಜಿಲ್ಲೆಯಲ್ಲಿ ಇರುವ 75 ನೀರಿನ ಮೂಲಗಳನ್ನು ಅಭಿವೃದ್ಧಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಕ್ಯಾಚ್‌ ದ ರೈನ್‌: ಮಳೆ ನೀರು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಶುರು ಮಾಡಲಾಗಿರುವ “ಕ್ಯಾಚ್‌ ದ ರೈನ್‌’ ಅಭಿಯಾನ ರಾಜ್ಯಗಳ ಅಗತ್ಯ ಯೋಜನೆಗಳ ಭಾಗವಾಗಿ ಇರಬೇಕು ಎಂದರು. ನಮ್ಮ ನದಿಗಳು, ನೀರಿನ ಮೂಲಗಳು ಜೀವನ ಭಾಗವೇ ಆಗಿದೆ ಎಂದರು ಪ್ರಧಾನಿ. ದೇಶದ ಪ್ರತಿ ನಿವಾಸಿಗಳ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿವ ನೀರು ಒದಗಿಸುವ “ಜಲ ಜೀವನ್‌ ಮಿಷನ್‌’ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ ಎಂದರು ಮೋದಿ. ಈ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂ. ಆನ್‌ಲೈನ್‌ ಮೂಲಕ ಸಾಧನೆಯ ವಿವರಗಳನ್ನು ಸಲ್ಲಿಸಬೇಕು ಎಂದರು.

ಮಹತ್ವದ್ದು: “2047ರ ಜಲನೋಟ’ ಬಹಳ ಮಹತ್ವದ್ದು. ಮುಂದಿನ 25 ವರ್ಷಗಳ ಅವಧಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನೀರಿಗೆ ಸಂಬಂಧಿಸಿದಂತೆ ಗರಿಷ್ಠ ಕೆಲಸಗಳನ್ನು ಮಾಡಬೇಕು. ಜನರೂ ಈ ಯೋಜನೆಗಳ ಬಗ್ಗೆ ಆಸ್ಥೆ ವಹಿಸಬೇಕು. ಜನರ ಹೊಣೆ ಜಾಸ್ತಿಯಾಗಿದೆ ಎಂದರೆ ಸರ್ಕಾರದ ಹೊಣೆ ಕಡಿಮೆಯಾಗುತ್ತದೆ ಎಂದಲ್ಲ ಎಂದೂ ಮೋದಿ ಹೇಳಿದ್ದಾರೆ.

“ನಮಾಮಿ ಗಂಗೆ’ ಮಾದರಿ ಯೋಜನೆ
ಗಂಗಾ ನದಿಯನ್ನು ಶುದ್ಧೀಕರಿಸುವ ಯೋಜನೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಆಧಾರವಾಗಿ ಇರಿಸಿಕೊಂಡು ವಿವಿಧ ರಾಜ್ಯಗಳಲ್ಲಿ ಕಲುಷಿತಗೊಂಡಿರುವ ನದಿಗಳನ್ನು ಶುದ್ಧೀಕರಿಸಿ, ಅವುಗಳನ್ನು ಸಂರಕ್ಷಿಸುವ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದರು. ಅದು ಪ್ರತಿ ರಾಜ್ಯದ ಹೊಣೆಯೂ ಹೌದು ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next