ಲಕ್ನೋ/ಕಾನ್ಪುರ: “ಮಹಾಮೈತ್ರಿಯೇನಾದರೂ ಅಧಿಕಾರಕ್ಕೆ ಬಂದರೆ ವಾರದ ಒಂದೊಂದು ದಿನ ಒಬ್ಬೊಬ್ಬರು ಪ್ರಧಾನಿಯಾಗಿರುತ್ತಾರೆ. ಭಾನುವಾರ ಮಾತ್ರ ಇಡೀ ದೇಶಕ್ಕೆ ರಜೆ ಇರುತ್ತದೆ.’ ಹೀಗೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಪಕ್ಷಗಳ ಮಹಾ ಘಟಬಂಧನದ ಕುರಿತು ವ್ಯಂಗ್ಯವಾಡಿದ್ದಾರೆ. ಲಕ್ನೋ ಮತ್ತು ಕಾನ್ಪುರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿಯಾಗಿ ಅವರು ಮಾತನಾಡಿದ್ದಾರೆ. ಮಹಾಮೈತ್ರಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಪ್ರತಿಪಕ್ಷಗಳು ಮೊದಲು ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕು. ಇಲ್ಲದಿದ್ದರೆ, ಮಹಾಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸೋಮವಾರ ಮಾಯಾವತಿ ಪಿಎಂ ಆದರೆ, ಮಂಗಳವಾರ ಅಖೀಲೇಶ್, ಬುಧವಾರ ಮಮತಾ, ಗುರುವಾರ ಶರದ್ ಪವಾರ್, ಶುಕ್ರವಾರ ದೇವೇಗೌಡ, ಶನಿವಾರ ಸ್ಟಾಲಿನ್ ಪ್ರಧಾನಿ ಆಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆಯೋಗಕ್ಕೆ ದೂರು?: ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರ್ಯಾಲಿ ಬಳಿಕ ಉಂಟಾದ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿ ಟಿಎಂಸಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬಿಜೆಪಿ ತಿಳಿಸಿದೆ.
ಮಮತಾ ಸವಾಲು: ಮಮತಾ ಬ್ಯಾನರ್ಜಿ ಅವರ ಕಲಾಕೃತಿಗಳನ್ನು ಚಿಟ್‌ಫಂಡ್ ಹಗರಣದ ಆರೋಪಿಗಳು ಖರೀದಿಸಿದ್ದಾರೆ ಎಂಬ ಅಮಿತ್ ಶಾ ಹೇಳಿಕೆಗೆ ದೀದಿ ಕಿಡಿಕಾರಿದ್ದಾರೆ. ನಾನು ಕಲಾಕೃತಿ ಮಾರಿ ಒಂದೇ ಒಂದು ಪೈಸೆ ಪಡೆದಿದ್ದನ್ನು ಸಾಬೀತುಪಡಿಸಿ ಎಂದು ಮಮತಾ ಸವಾಲು ಹಾಕಿದ್ದಾರೆ.
ಅರ್ಜಿಗೆ 25 ಸಾವಿರ ರೂ: ತಮಿಳುನಾಡಿನ ಎಐಎಡಿಎಂಕೆ ಲೋಕಸಭೆ ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. 25 ಸಾವಿರ ರೂ.ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು ಎಂದು ಹೇಳಿದೆ.
ವಾಯುಪಡೆ ಮಾರಾಟ: ರಾಹುಲ್
“ರಫೇಲ್ ಒಪ್ಪಂದವನ್ನು ನವೀಕರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಪಡೆಯನ್ನು ಮಾರಾಟ ಮಾಡಿದ್ದಾರೆ ಹಾಗೂ ಯುವಕರಿಗೆ ಸಿಗಬೇಕಿದ್ದ ಉದ್ಯೋಗಾವಕಾಶವನ್ನು ತಮ್ಮ ಮಿತ್ರ ಅನಿಲ್ ಅಂಬಾನಿಯವರ ಕಂಪೆನಿಗೆ ಸಿಗುವಂತೆ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಯೂತ್ ಕಾಂಗ್ರೆಸ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಯುವ ಕ್ರಾಂತಿ ಯಾತ್ರಾ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದ ಅವರು, “ರಫೇಲ್ ಹಗರಣದ ಹಿಂದೆ ಅಡಗಿರುವ ಸತ್ಯವನ್ನು ಯಾರಿಂದಲೂ ಅದುಮಿಡಲು ಸಾಧ್ಯವಿಲ್ಲ. ಕಾಲ ಬಂದಾಗ ಅದು ತಾನೇ ತಾನಾಗಿ ಹೊರಬರುತ್ತದೆ. ಆದರೆ, ಪ್ರಧಾನಿ ಈ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ’ ಎಂದರು.