ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಆಗಸ್ಟ್ ತಿಂಗಳು ಪೂರ್ತಿ ಭಾರತವೇ ಅಧ್ಯಕ್ಷ ಸ್ಥಾನದಲ್ಲಿರಲಿದ್ದು, ಆ.9ರಂದು ನಡೆಯಲಿರುವ ಸಭೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿಕೊಳ್ಳಲಿದ್ದಾರೆ. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಭದ್ರತಾ ಮಂಡಳಿ ಸಭೆಯ ನೇತೃತ್ವ ವಹಿಸುತ್ತಿರುವುದು ವಿಶೇಷ. ಅಂದು ವಚ್ಯುìವಲ್ ಮೂಲಕ ನಡೆಯಲಿರುವ ಸಭೆಯಲ್ಲಿ ಪ್ರಧಾನಿ ಜತೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಕೂಡ ಭಾಗಿಯಾಗಲಿದ್ದಾರೆ.
ಜುಲೈ ತಿಂಗಳಿನಲ್ಲಿ ಫ್ರಾನ್ಸ್ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿತ್ತು. ಫ್ರಾನ್ಸ್‌ನಿಂದ ಈಗ ಅಧಿಕಾರ ಹಸ್ತಾಂತರವಾಗಿದೆ. ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ಫ್ರಾನ್ಸ್‌ಗೆ ಧನ್ಯವಾದ ಹೇಳಿ, ಸೋಮವಾರವೇ ಅಧಿಕಾರ ವಹಿಸಿಕೊಂಡಿದ್ದಾರೆ.
ಸದ್ಯ ಜಾಗತಿಕವಾಗಿ ಹಲವಾರು ಸವಾಲುಗಳು ಎದುರಾಗಿದ್ದು, ಇಂಥ ಸಂದರ್ಭದಲ್ಲಿ ಭಾರತಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸದವಕಾಶದಂತಾಗಿದೆ. ಅತ್ತ ಆಫ್ಘಾನಿಸ್ಥಾನದ ವಿಚಾರದಲ್ಲಿ ಪಾಕಿಸ್ಥಾನದ ಇಬ್ಬಗೆ ಧೋರಣೆ, ಚೀನದಿಂದ ತಾಲಿಬಾನ್ ಉಗ್ರರಿಗೆ ಪರೋಕ್ಷ ಸಹಕಾರದ ಬಗ್ಗೆಯೂ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತುವ ಸಂದರ್ಭವೂ ಬಂದಿದೆ.
ಅಲ್ಲದೆ ಪ್ರಮುಖವಾಗಿ ಭಾರತ ಸಾಗರದಲ್ಲಿನ ಭದ್ರತೆ, ಜಾಗತಿಕವಾಗಿ ಶಾಂತಿ ಕಾಪಾಡಿಕೊಳ್ಳುವಿಕೆ, ಭಯೋತ್ಪಾದನೆ ನಿಯಂತ್ರಣದಂಥ ವಿಷಯಗಳ ಮೇಲೆ ಆದ್ಯತೆ ನೀಡಬೇಕಾಗಿದೆ. ಹಾಗೆಯೇ ಸಿರಿಯಾ, ಇರಾಕ್, ಸೋಮಾಲಿಯಾ, ಯೆಮೆನ್ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಈ ಒಂದು ತಿಂಗಳು ನಡೆಯಲಿರುವ ಪ್ರಮುಖ ಸಭೆಗಳಲ್ಲಿ ಗಮನ ನೀಡಬೇಕಾಗಿದೆ.
2021-22ರ ಅವಧಿಯಲ್ಲಿ ಮೊದಲ ಬಾರಿಗೆ ಭಾರತ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಈಗಾಗಲೇ ಜ.1ರಿಂದ ಎರಡು ವರ್ಷಗಳ ವರೆಗೆ ಭಾರತ ಶಾಶ್ವತವಲ್ಲದ ಸದಸ್ಯ ಸ್ಥಾನದಲ್ಲಿರಲಿದೆ. ಆ.9ರಂದು ನಡೆಯಲಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕವಾಗಿ ಎದುರಿಸುತ್ತಿರುವ ನಾನಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇದೊಂದು ಐತಿಹಾಸಿಕ ಸಭೆಯಾಗಲಿದೆ ಎಂದು ತಿರುಮೂರ್ತಿ ಹೇಳಿದ್ದಾರೆ. 1992ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು, ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದು, ಇದುವರೆಗಿನ ದಾಖಲೆಯಾಗಿದೆ.
ಈಗ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಒಳ್ಳೆಯದೇ ಆಗಿದೆ. ಭಾರತ ಜಾಗತಿಕ ನಾಯಕನ ಸ್ಥಾನದಲ್ಲಿ ನಿಂತು, ನಾನಾ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಯತ್ನಿಸಬೇಕಿದೆ. ಹಾಗೆಯೇ, ಪಾಕಿಸ್ಥಾನದ ಭಯೋತ್ಪಾದಕತೆ ಬಗ್ಗೆ ಇಡೀ ಜಗತ್ತಿಗೇ ತಿಳಿಸಬೇಕಾಗಿದೆ. ಇದರ ಜತೆಯಲ್ಲಿ ಪಾಕಿಸ್ಥಾನ ಮತ್ತು ಈಗ ಚೀನ ತಾಲಿಬಾನ್ ಉಗ್ರರಿಗೆ ನೀಡುತ್ತಿರುವ ನೆರವಿನ ಬಗ್ಗೆಯೂ ಪ್ರಸ್ತಾವಿಸಬೇಕಿದೆ.
ಇಷ್ಟೆಲ್ಲ ಕೆಲಸಗಳ ಜತೆಯಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಗಾಗಿಯೂ ಭಾರತ ಯತ್ನಿಸಬೇಕಾಗಿದೆ. ಇದಕ್ಕಾಗಿ ತನ್ನ ಜತೆಯಲ್ಲಿರುವ ಜಪಾನ್, ಬ್ರೆಜಿಲ್‌ನಂಥ ದೇಶಗಳನ್ನು ಸೇರಿಸಿಕೊಂಡು ಅದಕ್ಕೂ ಈ ಸಂದರ್ಭದಲ್ಲೇ ಹೋರಾಟ ನಡೆಸಬೇಕು.