Advertisement
ಅಟಲ್‌ಜಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಮಾನುಲ್ಲಾ, ಸಾಕಷ್ಟು ದೂರು ಬಂದಿದೆ. ಏನ್ ಮಾಡ್ತೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅರುಣಾ ವೆರ್ಣೇಕರ್, ಯಾರು ಕೊಟ್ಟಿದ್ದಾರೆ ಹೇಳಿ. ನಾನು ಒಂದು ರೂಪಾಯಿ ತಗೊಂಡಿಲ್ಲ. ನೀವೇ 14 ಸಾವಿರ ರೂ. ತಗೋಂಡಿದೀರಿ ಎಂದು ಗುತ್ತಿಗೆದಾರರು ಹೇಳ್ತಾರಲ್ಲ ಎಂದು ಮರು ಸವಾಲು ಹಾಕಿದರು. ಮಧ್ಯೆ ಮಾತನಾಡಿದ ಶ್ರೀಕಾಂತ ತಾರೀಬಾಗಿಲು, ನಗರಸಭೆ ಮಾನ ಹರಾಜು ಹಾಕಬೇಡಿ, ಮೊದಲೇ ಮರ್ಯಾದೆ ಹೋಗುತ್ತಿದೆ, ಇನ್ನೂ ಕಳಿಬೇಡಿ, ವಿಷಯ ಮುಂದೆ ತಗೊಳ್ಳಿ ಎಂದು ಸೂಚಿಸಿದರು. ಇದಕ್ಕೂ ನಿಲ್ಲದೇ ಅಮಾನುಲ್ಲಾ ಆರು ವಾಡ್ ಗೆ ಮಾತ್ರ ಕಾಮಗಾರಿ ಹಾಕಿದ್ದು ಯಾಕೆ ಎಂದು ಕೇಳಿದಾಗ, ಖಡಕ್ ಆಗಿಯೇ ಉತ್ತರಿಸಿದ ವೆರ್ಣೇಕರ್ ಹೌದ್ರಿ, ಹಾಕಿದ್ದೇನೆ ಏನೀಗ? ಇನ್ನೂ ಉತ್ತರ ಬೇಕು ಎಂದರೆ ಹೊರಗಡೆ ಬನ್ನಿ ಎಂದರು.
ಮಾರುಕಟ್ಟೆ ಪ್ರಸ್ತಾವನೆಗೆ ಅನುಮೋದನೆ ಇತ್ತು. ಇನ್ನೂ ಪತ್ರ ವ್ಯವಹಾರ ಆಗಿಲ್ಲ. ಹಣ ವಾಪಸ್ ಹೋಗಬಹುದು. ತಕ್ಷಣ ಏನೂ
ಅಂತ ಆಗಬೇಕು. ನಗರಕ್ಕೆ ಬಂದ ಅನುದಾನ ಹಿಂದೆ ಹೋಗಬಾರದು ಎಂದು ಶ್ರೀಕಾಂತ ತಾರೀಬಾಗಿಲು ಹೇಳಿದರು. ಮೀನು ಮಾರುಕಟ್ಟೆ ಆಗಿದ್ದರೆ ಸಮಸ್ಯೆ ಇರ್ತಿರಲಿಲ್ಲ ಎಂದು ಅಧ್ಯಕ್ಷರೇ ಹೇಳಿದಾಗ, ಆ ವಿಷಯ ಮುಗಿದಿದೆ. ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ತಾರೀಬಾಗಿಲು ಗರಂ ಆಗಿಯೇ ಹೇಳಿದರು. ಅರುಣ ಪ್ರಭು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಹಣ ವಾಪಸ್ಸು ಹೋಗದಂತೆ ಮನವಿ ಮಾಡಿಕೊಳ್ಳೋಣ ಎಂದೂ ಹೇಳಿದರು. ಅರ್ಜಿ ನಮೂನೆ 3ರ ಕುರಿತು ಸಭೆಯ ಆರಂಭದಲ್ಲೇ ಅನೇಕ ಪ್ರಶ್ನೆಗಳನ್ನು ಪಕ್ಷ, ಪ್ರತಿ ಪಕ್ಷದ ಸದಸ್ಯರು ಪಟ್ಟು ಹಿಡಿದು ಕೇಳಿದರು.
ಕಳೆದ ಐದಾರು ತಿಂಗಳಿಂದ ಅಲೆದಾಟ ಮಾಡುತ್ತಿದ್ದಾರೆ. ಅವರಿಗೆ ಸಿಗದೇ ಇದ್ದ ಪರವಾನಗಿ ಏಜೆಂಟರ ಮೂಲಕ ಬಂದರೆ
ಆಗುತ್ತದೆ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ದೂರಿದರು. ಯಾರು ಅಂತ ಹೇಳಿ, ಅವರಿಗೆ ಪ್ರವೇಶ ಇಲ್ಲ ಎಂದು ಫಲಕ ಹಾಕುತ್ತೇವೆ
ಎಂದು ಪೌರಾಯುಕ್ತ ಮಹೇಂದ್ರಕುಮಾರ ಹೇಳಿದರು. ಇದು ಇಲ್ಲಿಯ ಸಮಸ್ಯೆ ಅಲ್ಲ, ಇಡೀ ರಾಜ್ಯದ್ದು, ಕಂಪ್ಯೂಟರಲ್ಲೇ ತಗೋತಿಲ್ಲ ಎಂದು ಪೌರಾಯುಕ್ತರು ಹೇಳಿದರು. ನಾವು ಮರ್ಯಾದೆ ಇಟ್ಟುಕೊಳ್ಳೂವಂತೆ ಕೂಡ ಇಲ್ಲದಂತಾಗಿದೆ ಎಂದು ಸದಸ್ಯರು ಅಲವತ್ತುಕೊಂಡರು. ನಗರಸಭೆ ಮಾಲೀಕತ್ವದ ಅಂಗಡಿಗಳ ಬಾಡಗೆ ವಿಚಾರ, ವಿವಿಧ ಗಟಾರ ಕಾಮಗಾರಿಗಳು, ರಸ್ತೆ ಹೊಂಡ, ಅತಿಕ್ರಮಣ ಸೇರಿದಂತೆ ಅನೇಕ ಪ್ರಶ್ನೆಗಳು ಕೇಳಿಬಂದವು. ರಾಚಪ್ಪ ಜೋಗಳೇಕರ್, ರವಿ ಚಂದಾವರ್, ಜ್ಯೋತಿ ಗೌಡ, ರಾಕೇಶ ತಿರುಮಲೆ ಸೇರಿದಂತೆ ಇತರರು ಚರ್ಚೆಯಲ್ಲಿ ಪಾಲ್ಗೊಂಡರು.