Advertisement

ಸ್ವಾತಂತ್ರ್ಯ ಪೂರ್ವ ವ್ಯವಸ್ಥೆ ಮರುಕಳಿಸುತ್ತಿದೆ

12:12 PM Jul 09, 2018 | |

ಬೆಂಗಳೂರು: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಬಲರು ಮತ್ತು ದುರ್ಬಲರ ನಡುವಿನ ಅಂತರ ಹೆಚ್ಚುತ್ತಿದ್ದು, ಸ್ವಾತಂತ್ರ್ಯ ಪೂರ್ವ ವ್ಯವಸ್ಥೆ ಮರುಕಳಿಸುತ್ತಿದೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. 

Advertisement

ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ “ದಾದಾ-ಮೋಲ ಬಂಜಾರ ಕಲಾಮೇಳ’ದಲ್ಲಿ ಪಾಲ್ಗೊಂಡು  ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಗುರಿ ಸಾಧನೆಯಲ್ಲಿ ಶ್ರಮಿಕ ವರ್ಗದ ತ್ಯಾಗ ದೊಡ್ಡದು.

ಅವರೆಲ್ಲರೂ ಸ್ವಾತಂತ್ರಾನಂತರ ತಮ್ಮ ಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇಂದು ದುರ್ಬಲರು ದುರ್ಬಲರಾಗಿ ಹಾಗೂ ಪ್ರಬಲರು ಪ್ರಬಲರಾಗಿಯೇ ಮುಂದುವರಿದಿದ್ದು, ಸ್ವಾತಂತ್ರ್ಯಪೂರ್ವ ವ್ಯವಸ್ಥೆ ಮರುಕಳಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಮೇಲ್ವರ್ಗಕ್ಕೆ ಇರುವ ಅವಕಾಶಗಳನ್ನು ಕಡಿಮೆ ಮಾಡಿ, ಕೆಳ ವರ್ಗಗಳಿಗೆ ಅವಕಾಶಗಳನ್ನು ನೀಡುವುದರಲ್ಲಿ ಪ್ರಜಾಪ್ರಭುತ್ವದ ಸಾರ್ಥಕತೆ ಅಡಗಿದೆ. ಆದ್ದರಿಂದ ಸರ್ಕಾರಗಳು ಈ ಶೋಷಿತ, ಅಸಹಾಯಕ ವರ್ಗಗಳಗಳ ಏಳಿಗೆಗೆ ಶ್ರಮಿಸಬೇಕು ಎಂದ ಅವರು, ಶೋಷಿತ ವರ್ಗಗಳು ಕೂಡ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ.

ಮೇಲ್ವರ್ಗಗಳಲ್ಲಿ ಎಷ್ಟೇ ಒಡಕುಗಳಿದ್ದರೂ, ನಿರ್ಣಾಯಕ ಸಂದರ್ಭಗಳಲ್ಲಿ ಒಗ್ಗೂಡುತ್ತವೆ. ಇದು ನಮಗೆ ಮಾದರಿ ಆಗಬೇಕು ಎಂದು ಸೂಚ್ಯವಾಗಿ ಹೇಳಿದರು. ಮಾಜಿ ಸಚಿವೆ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿ,

Advertisement

ಲಂಬಾಣಿ ತಾಂಡಾಗಳನ್ನು ಸುವರ್ಣ ಗ್ರಾಮಗಳಿಗೆ ಸೇರಿಸುವುದಾಗಿ ಈ ಹಿಂದೆ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದರು. ಇದು ಅತ್ಯುತ್ತಮ ಚಿಂತನೆ ಆಗಿದ್ದು, ವರ್ಷದಲಿ ಎರಡು-ಮೂರು ಬಾರಿ ವಲಸೆ ಹೋಗುವ ಈ ಸಮುದಾಯಕ್ಕೆ ಭದ್ರತೆ ಸಿಕ್ಕಂತಾಗುತ್ತದೆ ಎಂದರು.  ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ, ಶಿವಪ್ರಸಾದ್‌ ಸ್ವಾಮೀಜಿ ಮತ್ತಿತರರು ಇದ್ದರು. 

ಗುರುವಿನ ಕೊರತೆ; ಹೇಳಿಕೆಗೆ ಆಕ್ಷೇಪ: “ಸಮುದಾಯಕ್ಕೆ ಸಮರ್ಥ ಗುರುಗಳಿಲ್ಲ’ ಎಂಬ ಬಿ.ಟಿ.ಲಲಿತಾ ನಾಯಕ್‌ ಹೇಳಿಕೆಯು ವೇದಿಕೆಯಲ್ಲಿದ್ದ ಶಿವಪ್ರಸಾದ್‌ ಸ್ವಾಮೀಜಿಯ ಅಸಮಾಧಾನಕ್ಕೆ ಕಾರಣವಾಯಿತು. ಪ್ರಾಸ್ತಾವಿಕ ಮಾತನಾಡಿದ ಲಲಿತಾ ನಾಯಕ್‌, ಸಮುದಾಯಕ್ಕೆ ಒಬ್ಬ ಸಮರ್ಥ ಗುರುಗಳಿಲ್ಲದಿರುವುದು ಬೇಸರ ತಂದಿದೆ ಎಂದರು. ಇದು ಶಿವಪ್ರಸಾದ ಸ್ವಾಮೀಜಿ ಅವರನ್ನು ಕೆರಳಿಸಿತು. ಭಾಷಣ ಮಧ್ಯೆಯೇ ಸ್ವಾಮೀಜಿ ಎದ್ದುನಿಂತು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ತದನಂತರ ಸಮುದಾಯದ ಮುಖಂಡರು ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next