ಬೆಂಗಳೂರು: ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ -ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಮಾದರಿಯನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಚಿಂತನೆ ಸೂಕ್ತವಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ಸಿಆರ್‌ವೈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಶಿಕ್ಷಣ ಸದನದಲ್ಲಿ ಮಂಗಳವಾರ ನಡೆದ “ಮಕ್ಕಳ ಬಾಲ್ಯಾರಂಭದ ಪೋಷಣೆ ಮತ್ತು ಶಿಕ್ಷಣ’ ಕುರಿತ ರಾಜ್ಯಮಟ್ಟದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಖಾಸಗಿ- ಸಾರ್ವಜನಿಕ ಸಹಭಾಗಿತ್ವದಡಿ ಜಾರಿಗೆ ತರಲು ಚಿಂತನೆ ನಡೆಸಿದೆ. ಒಂದು ವೇಳೆ ಈ ಅಂಶ ಜಾರಿಯಾದರೆ ಮಕ್ಕಳ ಆರಂಭಿಕ ಶಿಕ್ಷಣವೂ ಖಾಸಗಿ ಪಾಲಾಗಲಿದೆ. ಹೀಗಾಗಿ, ಕೇಂದ್ರ ಸರ್ಕಾರ ಈ ಚಿಂತನೆ ಕೈಬಿಟ್ಟು ಸರ್ಕಾರದ ಜವಾಬ್ದಾರಿಯಲ್ಲೆ ಪೂರ್ವ ಪ್ರಾಥಮಿಕ ಶಿಕ್ಷಣ ಲಭ್ಯವಾಗಬೇಕು ಎಂದು ಹೇಳಿದರು.
ಇದೇ ಶಿಕ್ಷಣ ನೀತಿಯ ಕರಡಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಜಾರಿಗೆ ತರುವ ಬಗ್ಗೆಯೂ ಹೇಳಲಾಗಿದೆ. ಪುರಾತನ ಕಾಲದಲ್ಲಿ ಭಾರತದ ಗುರುಕುಲ ಶಿಕ್ಷಣ ಪದ್ಧತಿಯು ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, 21ನೇ ಶತಮಾನದಲ್ಲಿ ಜಾತಿ, ವರ್ಗ ತಾರತಮ್ಯ ಮೀರಿದ ಸಮಾನ ಶಿಕ್ಷಣಕ್ಕೆ ಆದ್ಯತೆ ದೊರೆಯಬೇಕು. ಜತೆಗೆ ದೇಶದಲ್ಲಿ ಒಂದು ಮಗುವು ಶಾಲೆಯಿಂದ ಹೊರಗುಳಿಯದಂತಹ ಗುಣಾತ್ಮಕ ಹಾಗೂ ಪರಿಣಾತ್ಮಕ ಅಂಶಗಳನ್ನು ನೀತಿಯಲ್ಲಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ತಿದ್ದುಪಡಿ ಅಗತ್ಯವಿದೆ ಎಂದು ತಿಳಿಸಿದರು.
ರಾಜಧಾನಿ ಬೆಂಗಳೂರಿಗೆ 6 ಸಾವಿರ ಅಂಗನವಾಡಿ ಕೇಂದ್ರಗಳ ಅಗತ್ಯವಿದ್ದು, ಸದ್ಯ 2 ಸಾವಿರ ಅಂಗನವಾಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕು. ಇನ್ನು ಗರ್ಭಾವಸ್ಥೆಯಲ್ಲೇ ಮಕ್ಕಳ ಲಾಲನೆ, ಪಾಲನೆ ಅವಶ್ಯಕ. ಮಗು ಜನಿಸಿದ ಮೊದಲು ನಾಲ್ಕೈದು ವರ್ಷಗಳಲ್ಲಿ ಪೋಷಕರು ಕಲ್ಪಸಿಕೊಡುವ ವಾತಾವಣ ಹಾಗೂ ಶಿಕ್ಷಣ ಮಗುವಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ಅಪೌಷ್ಠಿಕತೆಯೂ ಕೂಡಾ ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿವರಿಸಿದರು.
ನವದೆಹಲಿ ಮೊಬೈಲ್ ಕ್ರೆಚಸ್ ಸಂಸ್ಥೆ ವಕಾಲತ್ತು ವಿಭಾಗದ ಮುಖ್ಯಸ್ಥೆ ಡಾ.ವರ್ಷ ಶರ್ಮಾ ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಅಂಗನವಾಡಿಗಳನ್ನು ಬಲಪಡಿಸುವ ಯೋಜನೆ ಹೊಂದಿದೆ. ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಬಗ್ಗೆಯೂ ಉಲ್ಲೇಖೀಸಲಾಗಿದೆ. ಆದರೆ, ಈ ವಿಷಯಗಳು ಸಾಕಷ್ಟು ಗೊಂದಲಮಯವಾಗಿದ್ದು, ವಿವರವಾದ ಮಾಹಿತಿಯಿಲ್ಲ. ಈ ಅಂಶಗಳನ್ನು ಸರಿಪಡಿಸಿ ಮತ್ತೂಂದು ಸುತ್ತಿನ ಅಭಿಪ್ರಾಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಪರಿವರ್ತನ ಜನಾಂದೋಲನದ ಅಂಬಣ್ಣ ಆರೋಲಿಕರ್, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ, ಸಿಆರ್‌ವೈ ಕಾರ್ಯಕ್ರಮ ಮುಖ್ಯಸ್ಥ ಜಾನ್ ರಾಬರ್ಟ್ಸ್ ಉಪಸ್ಥಿತರಿದ್ದರು.