Advertisement

ಇಂದಿರಾ ಎಂಬ ಜನಪ್ರಿಯತೆಯ ಶಕ್ತಿ 

12:28 PM Mar 01, 2018 | Team Udayavani |

ಮಂಗಳೂರು ಕೇಂದ್ರವಾಗಿ ಅವಿಭಜಿತ ದ.ಕ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರದ್ದು ವಿಶಿಷ್ಟ ಅಧ್ಯಾಯ. ಈ ಭಾಗವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಅವರು ಚುನಾವಣೆ ಸಂದರ್ಭ ಮಾತ್ರವಲ್ಲದೆ ಇತರ ಯೋಜನೆಗಳ ಉದ್ಘಾಟನೆಗೂ ಬಂದವರಾಗಿದ್ದರು.

Advertisement

ಇಂದಿರಾ ಅವರ ಸಾರ್ವಜನಿಕ ಸಭೆಗಳು ವಸ್ತುಶಃ ಬೃಹತ್‌ ಸಮಾವೇಶಗಳೇ ಆಗಿರುತ್ತಿದ್ದವು. ಅವರಿಗೆ ರಾಜಕೀಯ ‘ಪುನರ್ಜನ್ಮ’ ನೀಡಿದ್ದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಅಲ್ಲಿ ಅವರು ತುರ್ತು ಪರಿಸ್ಥಿತಿಯ ಬಳಿಕದ ಉಪಚುನಾವಣೆಯಲ್ಲಿ ಗೆದ್ದರು. ಬಳಿಕ ಪ್ರಧಾನಿಯೂ ಆದರು. ಆ ಕಾಲಕ್ಕೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಯಾಗಿದ್ದವು.

ಇಂದಿರಾ ಅವರ ಕಂಚಿನ ಕಂಠ, ಸಕಾಲಿಕ ವಿಚಾರಗಳ ಮೇಲಿನ ಪರಿಜ್ಞಾನ, ಉಡುಗೆ, ವೇಗದ ನಡಿಗೆ, ವಿಪಕ್ಷಗಳ ಮೇಲಿನ ವಾಗ್ಧಾಳಿ, ಅತ್ಯಂತ ಎಂದು ವರ್ಣಿಸಬಹುದಾದ ಆತ್ಮವಿಶ್ವಾಸಗಳು ಆಕೆಗೆ ರಾಜಕೀಯ-ಆಡಳಿತಾತ್ಮಕ ಹಿಡಿತ ನೀಡಿದ್ದವು. ತಮ್ಮ ಸಂಪುಟದಲ್ಲಿ ಅವರು ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಬಿ. ಜನಾರ್ದನ ಪೂಜಾರಿ ಅವರಿಗೆ ವಿತ್ತ ಖಾತೆಯ ಸಹಾಯಕ ಸಚಿವರ ಸ್ಥಾನ ನೀಡಿದ್ದರು. ಆಸ್ಕರ್‌ ಫೆರ್ನಾಂಡಿಸ್‌, ಎಂ. ವೀರಪ್ಪ ಮೊಯಿಲಿ ಅವರಂತಹ ನಾಯಕರನ್ನೂ ಬೆಂಬಲಿಸಿದ್ದರು.

ಇಂದಿರಾ ಅವರದ್ದು ಅಪರೂಪದ ಬ್ಲಿಡ್‌ ಗ್ರೂಪ್‌ ಆಗಿತ್ತು. ಪ್ರಧಾನಿಯಂತಹ ರಾಷ್ಟ್ರೀಯ ನಾಯಕರು ಪ್ರವಾಸ ತೆರಳುವಾಗಲೆಲ್ಲ ಆಯಾಯ ಪ್ರದೇಶದಲ್ಲಿ ಅದೇ ರಕ್ತ ವಿಭಾಗದ ಇಬ್ಬರು ಸ್ಥಳೀಯರನ್ನು ಇಲಾಖೆಗಳವರು ತಮ್ಮ ಜತೆಯಲ್ಲಿ ಕರೆದೊಯ್ಯುತ್ತಿದ್ದರು. ಪ್ರಧಾನಿಯ ಪ್ರವಾಸ ಪೂರ್ತಿ ಅವರು ಜತೆಯಲ್ಲಿ ಇರಬೇಕಾಗಿತ್ತು. ಹಾಗಾಗಿ ಮಂಗಳೂರಿನ ಓರ್ವ ಸಿಹಿತಿಂಡಿ ಉದ್ಯಮಿ (ಈಗ ದಿವಂಗತರು) ಹಾಗೂ ಬಂಟ್ವಾಳ ತಾಲೂಕಿನ ಓರ್ವ ಬ್ಯಾಂಕ್‌ ಉದ್ಯೋಗಿಗೆ (ಈಗ ನಿವೃತ್ತರು) ಇಂದಿರಾ ಪ್ರವಾಸದ ಸಂದರ್ಭದಲ್ಲಿ ಬುಲಾವ್‌ ಬರುತ್ತಿತ್ತು.

ಇಂದಿರಾಗೆ ಮಂಗಳೂರಿನ ಹಲ್ವಾ ಮತ್ತು ಮಸಾಲಾ ಗೇರುಬೀಜ ಅತೀ ಮೆಚ್ಚಿನ ತಿನಿಸು ಆಗಿತ್ತು. ಅವರು ಜನತೆಯ ಬಳಿ ಸಾರಿ ಹಸ್ತಲಾಘವ ಮಾಡುತ್ತಿದ್ದರು; ವಿಪರ್ಯಾಸವೆಂದರೆ 31-10-1984 ಹೊಸದಿಲ್ಲಿಯಲ್ಲಿ ಅಂಗರಕ್ಷಕರಿಂದಲೇ ಅವರು ಹತ್ಯೆಯಾದರು. ಮುಂದೆ ಪ್ರಧಾನಿಗಳಿಗೆ ಗರಿಷ್ಠ ಭದ್ರತೆಯನ್ನು ಒದಗಿಸಲು ಈ ದುರ್ಘ‌ಟನೆ ಕಾರಣವಾಯಿತು.

Advertisement

ಪೆತ್ತಕಂಜಿ…!
ಇಂದಿರಾ ಆಡಳಿತದ ಕೊನೆಯ ಹಂತದಲ್ಲಿ ಕಾಂಗ್ರೆಸ್‌ಗೆ ‘ಕೈ’ ಚಿಹ್ನೆ ಲಭ್ಯವಾಗಿತ್ತು. ಅದಕ್ಕೆ ಮೊದಲು ಕಾಂಗ್ರೆಸ್‌ಗೆ ‘ದನ-ಕರು’ ಚಿಹ್ನೆ ಇತ್ತು. ಆಗಿನ ಕಾಂಗ್ರೆಸ್‌ನ ಜನಪ್ರಿಯ ಘೋಷಣೆ:
ಪೆತ್ತಕಂಜಿ ದುಂಬುದ;
ಅವೆನ್‌ ಎಂಕ್ಲ್ ನಂಬುದ!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next