Advertisement

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕೆ?  ಇಲ್ಲಿದೆ ಸರಳ ಮಾರ್ಗ

12:52 PM Jun 14, 2021 | ಆದರ್ಶ ಕೊಡಚಾದ್ರಿ |

ಜಗತ್ತಿನಲ್ಲಿ ಮನುಷ್ಯ ಒಂದು ವಿಶಿಷ್ಟ ಜೀವಿ . ಆತ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ವಿಭಿನ್ನವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ.  ಪ್ರಪಂಚದಲ್ಲಿ ಮನುಷ್ಯನಿಂದ ಅಸಾಧ್ಯವಾದ  ಕೆಲಸ ಯಾವುದೂ ಇಲ್ಲ. ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಅದನ್ನೆಲ್ಲಾ ನಿಭಾಯಿಸಲು ಮನುಷ್ಯನಿಗೆ ಸಾಧ್ಯವಾಗಲು ಬಹುಮುಖ್ಯ ಸಾಧನ ಆತನ ಬುದ್ಧಿಶಕ್ತಿ.

Advertisement

ವ್ಯಕ್ತಿಯ ಮೆದುಳಿನ ಕಾರ್ಯವಿಧಾನ  ಆತನ ನೆನಪಿನ ಶಕ್ತಿಯಿಂದಾಗಿ  ಆತ ಎಲ್ಲಾ ವಿಧವಾದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಹಾಗಾಗಿಯೇ ಪ್ರತಿಯೊಬ್ಬರೂ ತಮ್ಮ ನೆನಪಿನ ಶಕ್ತಿಯನ್ನು ಬೆಳೆಸಿಕೊಳ್ಳಲು ಸದಾ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಪ್ರತಿಯೊಬ್ಬ ಪೋಷಕರೂ ಕೂಡಾ ತಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ನಾನಾ ಆಹಾರ ಕ್ರಮಗಳ ಮೊರೆ ಹೋಗುತ್ತಾರೆ.

ಒಂದೆಲಗದ ಸೊಪ್ಪಿನಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುವ  ಅಂಶಗಳಿದ್ದು ಹಲವುರು ಒಂದಲೆಗದ ಸೊಪ್ಪಿನಿಂದ ಚಟ್ನಿ, ಕಷಾಯ ಸೇರಿದಂತೆ ಹಲವಾರು ಪದಾರ್ಥಗಳನ್ನು ತಯಾರಿಸುತ್ತಾರೆ. ಕೇವಲ ಒಂದೆಲಗ ಮಾತ್ರವಲ್ಲದೆ ನೈಸರ್ಗಿಕವಾಗಿ ಸಿಗುವ ವಿವಿಧ ವಸ್ತುಗಳಿಂದಲೂ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ದಾಳಿಂಬೆ ಹಣ್ಣಿನ ಬಳಕೆ

ದಾಳಿಂಬೆ ಹಣ್ಣಿನಲ್ಲಿ ಅತೀ ಹೆಚ್ಚಿನ ಪ್ರಮಾಣದ ಆ್ಯಂಟಿ – ಆಕ್ಸಿಡೆಂಟ್ ಅಂಶಗಳಿದ್ದು, ಇವುಗಳಿಂದಾಗಿ ನಮ್ಮ ದೇಹದಲ್ಲಿ ಹಾಗೂ ಮೆದುಳಿನ ಭಾಗದಲ್ಲಿ ಫ್ರೀ ರಾಡಿಕಲ್ ಗಳ ಸಂಬಂಧ ಹಾನಿಗೊಳಗಾಗುವ ಜೀವ ಕೋಶಗಳ ರಕ್ಷಣೆಯನ್ನು  ದಾಳಿಂಬೆ ಹಣ್ಣು ಮಾಡುತ್ತದೆ. ಹಾಗಾಗಿ ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದು ಹಾಗೂ ಈ ಹಣ್ಣನ್ನು ಜ್ಯೂಸ್ ಮಾಡಿ  ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಇದಿಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಮೆದುಳಿಗೆ ಕಾಲ ಕಾಲಕ್ಕೆ ತಕ್ಕಂತೆ ರಕ್ತ ಸಂಚಾರವನ್ನು ಪೂರೈಕೆ ಮಾಡುವುದರಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್ ಸಹಾಯ ಮಾಡುತ್ತದೆ.

Advertisement

ನೆನಪಿನ ಶಕ್ತಿಯ ಕೊರತೆಯಿಂದ  ಬಳಲುತ್ತಿರುವವರು ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಪ್ರತಿ ದಿನ ಒಂದು ಲೋಟ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.

ಬಿಟ್ರೋಟ್ ಬಳಕೆ

ಕೇವಲ ಹಣ್ಣುಗಳಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ತರಕಾರಿಗಳಲ್ಲೂ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿರುತ್ತದೆ. ಸಾಧಾರಣವಾಗಿ ನಾವು ಬಳಕೆ ಮಾಡುವ ಎಲ್ಲಾ ತರಕಾರಿಗಳಲ್ಲಿ ಬಿಟ್ರೋಟ್ ಕೂಡಾ ಒಂದು . ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಸಾಕಷ್ಟು ಬಗೆಯ ಖನಿಜಾಂಶಗಳು, ವಿಟಮಿನ್ ಅಂಶಗಳು, ಆ್ಯಂಟಿ – ಆಕ್ಸಿಡೆಂಟ್ ಅಂಶಗಳು ಮತ್ತು ನಾರಿನ ಅಂಶಗಳು ನಮಗೆ ನೈಸರ್ಗಿಕವಾಗಿ ಬೀಟ್ರೂಟ್ ಜ್ಯೂಸ್ ನಲ್ಲಿ ಸಿಗುತ್ತವೆ ಮತ್ತು ಇದರಿಂದ ನಮ್ಮ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಮಾನಸಿಕ ಆರೋಗ್ಯ ಕೂಡ ವೃದ್ಧಿ ಆಗುತ್ತದೆ. ಬೀಟ್ರೂಟ್ ಜ್ಯೂಸ್ ನಲ್ಲಿ ನೈಟ್ರಿಕ್ ಆಸಿಡ್ ಎಂಬ ಅಂಶ ಹೆಚ್ಚಾಗಿದ್ದು, ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಇದು ಹೆಚ್ಚು ಮಾಡುವುದರ ಜೊತೆಗೆ ನೆನಪಿನ ಶಕ್ತಿಯ ಸಮಸ್ಯೆ ಉಂಟಾದಾಗ ಮೆದುಳಿಗೆ ನೇರವಾಗಿ ರಕ್ತವನ್ನು ಹರಿ ಬಿಡುವುದರ ಮೂಲಕ ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಹಾಲಿನ ಸೇವನೆ

ಪ್ರತಿನಿತ್ಯ ಹಾಲನ್ನು ಸೇವನೆ ಮಾಡುವುದರಿಂದ ಹಲವು ರೀತಿಯ ಉಪಯೋಗಗಳನ್ನು ಕಾಣಬಹುದಾಗಿದೆ.  ಹಾಲಿನಲ್ಲಿ ಒಂದು ವಿಶೇಷವಾದ ಗುಣ ಇದೆ. ಅದೇನೆಂದರೆ ‘ ಟ್ರಿಪ್ಟೊಫಾನ್ ‘ ಎಂಬುವ ಸಂಯುಕ್ತ ಹಾಲಿನಲ್ಲಿ ಅಡಗಿದ್ದು, ಇದು ನಮ್ಮ ಮೆದುಳಿನ ಭಾಗದಿಂದ ‘ ಸೆರಟೋನಿನ್ ‘ ಎಂಬ ಹಾರ್ಮೋನ್ ಬಿಡುಗಡೆ ಆಗುವಂತೆ ಮಾಡುತ್ತದೆ. ಸೆರಟೋನಿನ್ ಹಾರ್ಮೋನ್ ನಮ್ಮ ಮೆದುಳಿನಿಂದ ಬಿಡುಗಡೆ ಆಗುವ ಕಾರಣದಿಂದ ನಮಗೆ ದೇಹದ ಆಯಾಸ ಕಡಿಮೆ ಆಗಿ ಒಳ್ಳೆಯ ನಿದ್ರೆ ಬರುತ್ತದೆ. ಇದರ ಜೊತೆಗೆ ನಮ್ಮ ನರಮಂಡಲ ಶಾಂತವಾಗಿ ಆರೋಗ್ಯಕರವಾದ ಮಾನಸಿಕ ವ್ಯವಸ್ಥೆ ನಮ್ಮದಾಗುತ್ತದೆ.

ಬೆರ್ರಿ ಹಣ್ಣುಗಳ ಬಳಕೆ

ನೈಸರ್ಗಿಕವಾಗಿ ಸಿಗುವ ಬೆರ್ರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ. ಬೆರ್ರಿ ಹಣ್ಣುಗಳನ್ನು ಮಿಶ್ರಣ ಮಾಡಿ ಮಿಲ್ಕ್ ಶೇಕ್  ಮಾಡಿ ಸೇವನೆ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ನಮ್ಮ ದೈಹಿಕ ಆರೋಗ್ಯ ಕೂಡ ಪ್ರಬಲಗೊಳ್ಳುತ್ತದೆ.

ಅಕಾಯ್ ಬೆರ್ರಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ – ಆಕ್ಸಿಡೆಂಟ್ ಅಂಶಗಳು ಇದ್ದು, ನಮ್ಮ ಜೀವ ಕೋಶಗಳನ್ನು ಫ್ರೀ ರಾಡಿಕಲ್ ಗಳ ಕಾರಣದಿಂದ ಉಂಟಾಗುವ ಹಾನಿಯಿಂದ ತಪ್ಪಿಸುತ್ತದೆ. ಇದರ ಜೊತೆಗೆ ಅಕಾಯ್ ಬೆರ್ರಿ ನಮ್ಮ ಮೆದುಳಿನ ಕಾರ್ಯ ಕ್ಷಮತೆಯನ್ನು ಉತ್ತೇಜಿಸುವ ಒಂದು ಆಹಾರ ಆಗಿದ್ದು, ನಮ್ಮ ಮೆದುಳಿಗೆ ನಮ್ಮ ಹೃದಯದಿಂದ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ.ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯ ಆಗದೆ ಇರುವವರು ಅಕಾಯ್ ಬೆರ್ರಿ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಪ್ರಮಾಣ ಕಡಿಮೆ ಆಗುತ್ತದೆ. ಮೆದುಳಿನ ಆರೋಗ್ಯವನ್ನು ಉತ್ತಮಗೊಳಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಅಕಾಯ್ ಬೆರ್ರಿ ಮತ್ತು ಹಾಲಿನ ಮಿಶ್ರಣ ಹೆಚ್ಚು ಪ್ರಯೋಜನಕಾರಿ.

Advertisement

Udayavani is now on Telegram. Click here to join our channel and stay updated with the latest news.

Next