Advertisement

ನೇಮಕವಾಗದ ನಿರ್ದೇಶಕರ ಹುದ್ದೆ, ಸಾಂಸ್ಕೃತಿಕ ಚಟುವಟಿಕೆ ಸ್ತಬ್ಧ- ರಂಗಾಯಣಗಳ ಅಂಗಳ ಭಣಭಣ

11:21 PM Dec 29, 2023 | Team Udayavani |

ಕಾರ್ಕಳ: ನಾಡಿನ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ರಾಜ್ಯದ 6 ಕಡೆ ಸರಕಾರ ಆರಂಭಿಸಿದ್ದ ರಂಗಾಯಣಗಳಿಗೆ ಇನ್ನೂ ನಿರ್ದೇಶಕರ ನೇಮಕವಾಗಿಲ್ಲ. ಜತೆಗೆ ನಿರೀಕ್ಷಿತ ಅನುದಾನವೂ ಬಿಡುಗಡೆಯಾಗದ ಕಾರಣ ರಂಗಾಯಣಗಳೆಲ್ಲಾ ಭಣಗುಡುತ್ತಿವೆ.

Advertisement

ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿ, ದಾವಣೆಗೆರೆ, ಉಡುಪಿ (ಕಾರ್ಕಳ) ಯಕ್ಷರಂಗಾಯಣ ಸೇರಿ ಆರು ಕಡೆ ರಂಗಾಯಣಗಳು ಕಾರ್ಯ ನಿರತವಾಗಿವೆ. ಹೊಸ ಸರಕಾರ ಬಂದು ಆರು ತಿಂಗಳಾಗುತ್ತಿದ್ದರೂ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಇದರ ಆಡಳಿತ ಮಂಡಳಿಯಂತಿರುವ ರಂಗಸಮಾಜಕ್ಕೂ ಸದಸ್ಯರ ನೇಮಕವಾಗಿಲ್ಲ. ಹಾಗಾಗಿ ಬಹುತೇಕ ರಂಗಾಯಣಗಳು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಬಿಜೆಪಿ ಸರಕಾರವಿದ್ದಾಗ ಐದು ಕಡೆ ನಿರ್ದೇಶಕರು ತಮ್ಮ ಅಧಿಕಾರವಧಿ ಮೂರು ವರ್ಷ ಮುಗಿದು ಹೆಚ್ಚುವರಿಯಾಗಿ 5 ತಿಂಗಳು ಕಾರ್ಯ ನಿರ್ವಹಿಸಿದ್ದರು. ಬಳಿಕ ಬಂದ ಹೊಸ ನಿಗಮ ಮಂಡಳಿಗಳ ಅಧ್ಯಕ್ಷರು, ಅಕಾಡೆಮಿ, ರಂಗಾಯಣ ಅಧ್ಯಕ್ಷರು-ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ನಿರ್ದೇಶಕರ ನೇಮಕ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ (ಕಾರ್ಕಳ) ಯಕ್ಷರಂಗಾಯಣದ ನಿರ್ದೇಶಕರ ಅವಧಿ ಒಂದೇ ವರ್ಷದಲ್ಲಿ ಕೊನೆಗೊಂಡಿತ್ತು.

ಸದ್ಯಕ್ಕೆ ರಂಗಾಯಣದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲವಾದ್ದರಿಂದ ರಂಗಶಾಲೆಯ ಕಲಾವಿದರು, ಸಿಬಂದಿಗೆ ಕೆಲಸವಿಲ್ಲದಂತಾಗಿದೆ. ಕೆಲವೆಡೆ ರಂಗಶಾಲೆಯ ಕಲಾವಿದರು ರಂಗಾಯಣದಿಂದ ಹೊರಬರುತ್ತಿದ್ದಾರೆ. ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ರಂಗಾಯಣ ದಲ್ಲಿ ಆಡಳಿತಾಧಿಕಾರಿಗಳಿದ್ದು, ತಿಂಗಳಿಗೆ ಒಂದು ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ.

ಅನುದಾನವೂ ಇಳಿಮುಖ
ಆರಂಭದಲ್ಲಿ ಪ್ರತೀ ವರ್ಷ 1 ಕೋ.ರೂ ಅನುದಾನ ರಂಗಾಯಣಕ್ಕೆ ಸಿಗುತ್ತಿತ್ತು. ಬಳಿಕ ರೂ. 75 ಲಕ್ಷ, ರೂ. 50 ಲಕ್ಷ, ರೂ. 40 ಲಕ್ಷ ರೂ. ಗೆ ಇಳಿಯಿತು. ಪ್ರಸಕ್ತ ಸಾಲಿನಲ್ಲಿ ಅದು 20 ಲಕ್ಷ ರೂ. ಗಳಿಗೆ ಮಿತಿಗೊಂಡಿದೆ. ಈ ಹಣ ಸಿಬಂದಿ ವೇತನ, ಕಲಾವಿದರ ವೇತನ, ತರಬೇತಿ ಇತ್ಯಾದಿಗೇ ಸಾಲುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

Advertisement

ಧೂಳು ತಿನ್ನುತ್ತಿವೆ ಪರಿಕರ
ಕೇಂದ್ರಗಳು ಚಟುವಟಿಕೆ ನಿಲ್ಲಿಸಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ರಂಗ ಪರಿಕರಗಳು ಧೂಳು ಹಿಡಿದಿವೆ. ರಂಗಕಲೆಗೆ ಶಕ್ತಿ ತುಂಬಲು ಆರಂಭವಾದ ರಂಗಾಯಣಗಳ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕು ಎಂಬುದು ರಂಗಾಸಕ್ತರ ಆಗ್ರಹ.

ಅಕಾಡೆಮಿಗಳಿಗೆ ನೇಮಕ
‌ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ತುಳು ಅಕಾಡೆಮಿ, ಲಲಿತಾಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಡವ ಅಕಾಡೆಮಿ, ಬ್ಯಾರಿ ಅಕಾಡೆಮಿ, ಬಯಲಾಟ ಅಕಾಡೆಮಿ, ಲಂಬಾಣಿ ಭಾಷಾ ಅಕಾಡೆಮಿಗಳಿಗೆ ನಿರ್ದೇಶಕರ ನೇಮಕವಾಗಬೇಕಿದೆ.

ಈ ಕುರಿತು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಿದ್ದು, ಒಂದು ತಿಂಗಳೊಳಗೆ ನಿರ್ದೇಶಕರ ಹೆಸರನ್ನು ಪ್ರಕಟಿಸಲಾಗುವುದು. ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ ಕುಂಠಿತವಾಗದಂತೆ ಗಮನ ಹರಿಸಲಾಗುವುದು.
– ಡಾ| ಎಸ್‌. ಮಂಜುಳಾ, ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next