Advertisement

ಪಿಯು ಉಪನ್ಯಾಸಕರ ಹುದ್ದೆ ಖಾಲಿ

11:05 PM Jun 18, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ ಪದವಿಪೂರ್ವ ಶಿಕ್ಷಣ ಇಲಾಖೆ ತನ್ನ ವ್ಯಾಪ್ತಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ವಿವಿಧ ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಯನ್ನು ವಿಷಯ ಮತ್ತು ಕಾಲೇಜು ಸಹಿತವಾಗಿ ಇಲಾಖೆ ಬಿಡುಗಡೆ ಮಾಡಿದ್ದು, ಎಲ್ಲ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಉಪನ್ಯಾಸಕರೇ ಇಲಾಖೆಗೆ ಒತ್ತಡ ತರುತ್ತಿದ್ದಾರೆ.

2019ರ ಮೇ 30ರ ಇಲಾಖೆಯ ದಾಖಲೆ ಅನುಸಾರ 3,407 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಕನ್ನಡ, ಇಂಗ್ಲಿಷ್‌, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ , ರಸಾಯನಶಾಸ್ತ್ರ ಸೇರಿದಂತೆ ಯಾವೆಲ್ಲ ವಿಷಯಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಇದೆಯೋ ಅವೆಲ್ಲವನ್ನೂ ಪಟ್ಟಿ ಮಾಡಿದ್ದೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಬಳ್ಳಾರಿ, ರಾಮನಗರ, ಉಡುಪಿ, ದಕ್ಷಿಣ ಕನ್ನಡ ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಜಿನಸ್‌ ಸ್ಟಡೀಸ್‌ ವಿಷಯದ ಹುದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇವೆ.

ಇದರ ಜತೆಗೆ ಕನ್ನಡ, ಇಂಗ್ಲಿಷ್‌, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಕೆಲವು ವಿಷಯಗಳಲ್ಲೂ ಉಪನ್ಯಾಸಕರ ಕೊರತೆ ಹೆಚ್ಚಿದೆ ಎಂದು ಇಲಾಖೆ ಬಿಡುಗಡೆ ಮಾಡಿದ ಪಟ್ಟಿಯಿಂದ ತಿಳಿದು ಬಂದಿದೆ.

Advertisement

ನೇಮಕಾತಿಗೆ ಆಗ್ರಹ: ರಾಜ್ಯದ 1,220ಕ್ಕೂ ಅಧಿಕ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಅನುದಾನಿತ ಕಾಲೇಜುಗಳಲ್ಲಿ ಸುಮಾರು 19 ಸಾವಿರ ಉಪನ್ಯಾಸಕರ ಹುದ್ದೆ ಮಂಜುರಾಗಿತ್ತು. ಸದ್ಯ 12 ಸಾವಿರ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.

ಇವರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. 3 ವರ್ಷದಿಂದ 1,200 ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಖಾಲಿ ಹುದ್ದೆ ಭರ್ತಿ ಮಾಡದೆ, ಕಾಲೇಜುಗಳನ್ನೇ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ವಿಲೀನ ಮಾಡುತ್ತಿದ್ದಾರೆ.

ಅಲ್ಲದೆ, ಪಿಯು ಉಪನ್ಯಾಸಕರಿಗೆ ಹೆಚ್ಚಿನ ಕಾರ್ಯಭಾರ ನೀಡುತ್ತಿದ್ದಾರೆ. ನಿಯೋಜನೆಯ ಹೆಸರಿನಲ್ಲಿ ವಾರಕ್ಕೆ 20 ತರಗತಿಗಳನ್ನು ತೆಗೆದುಕೊಳ್ಳಬೇಕು ಎಂದು ಇಲಾಖೆ ನಿರ್ದೇಶಿಸಿದೆ. ಒಟ್ಟಾರೆಯಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದ ಸರ್ಕಾರ, ಈಗ ಇರುವ ಉಪನ್ಯಾಸಕರಿಗೆ ಹೆಚ್ಚೆಚ್ಚು ಹೊರೆ ನೀಡುತ್ತಿದೆ ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.

ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಭರ್ತಿ ಮಾಡಿಕೊಳ್ಳುವ ಯಾವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿಲ್ಲ. ಬದಲಾಗಿ ಇರುವ ಉಪನ್ಯಾಸಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡುತ್ತಿದ್ದಾರೆ. ಒಂದು ವರ್ಷದಿಂದ ಇಲಾಖೆಗೆ ಸಚಿವರನ್ನು ಕೊಟ್ಟಿಲ್ಲ. ಖಾಯಂ ನಿರ್ದೇಶಕರು ಬಂದಿಲ್ಲ. ಒಟ್ಟಿನಲ್ಲಿ ಇಲಾಖೆ ಮುಚ್ಚಲು ಬೇಕಾದ ಎಲ್ಲ ಪ್ರಯತ್ನ ನಡೆಯುತ್ತಿದೆ.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next