ಚಾಮರಾಜನಗರ: ವಿಧಾನಸಭೆ ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳಲಾರೆ. ಸಚಿವ ಸ್ಥಾನ ದೊರಕದಿದ್ದರೆ ಶಾಸಕನಾಗೇ ಇರುತ್ತೇನೆ ಎಂದು ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಅವರ ಸ್ವಗ್ರಾಮ ಯಳಂದೂರಿನ ಉಪ್ಪಿನಮೋಳೆಯಲ್ಲಿ ಭಾನುವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳಲಾರೆ. ಕ್ಷೇತ್ರದ ಮತದಾರರು ನನ್ನ ಬೆಂಬಲಿಗರು ಈ ಹುದ್ದೆ ಬೇಡ, ಇದನ್ನು ವಹಿಸಿಕೊಂಡರೆ ನೀವು ನಮ್ಮ ಕೈಗೆಟುಕಲ್ಲ ಎಂದಿದ್ದಾರೆ. ಅವರ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದರು.
ನಾನು ಗೆದ್ದಿರುವುದೇ ವಿಶೇಷ. ಹಿಂದುಳಿದ ಉಪ್ಪಾರ ಸಮಾಜದ ಏಕೈಕ ಶಾಸಕ. ಉಪಸಭಾಪತಿಯಾದರೆ, ಜನರನ್ನು ಸಂಪರ್ಕ ಮಾಡಲು ಸಾಧ್ಯವಾಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹೇಳಿದೆ. ಅವರು ಒಪ್ಪಿಕೋ ನಾವೆಲ್ಲ ಬೇಡ್ವಾ ಎಂದರು. ನಾನು ಜನರನ್ನು ಕೇಳುತ್ತೇನೆ. ಕ್ಷಮಿಸಿ, ಕಷ್ಟವಾಗುತ್ತದೆ ಎಂದೆ. ನಾನು ಕ್ಷೇತ್ರದಲ್ಲಿರಬೇಕು. ಉಪಸಭಾಪತಿ ಆದರೆ ಕ್ಷೇತ್ರದ ಸಂಪರ್ಕ ಕಡಿಮೆ ಆಗುತ್ತದೆ. ಬೆಂಗಳೂರಿನಲ್ಲೇ ಮೂರು ನಾಲ್ಕು ದಿನ ಇರಬೇಕಾಗುತ್ತದೆ. ನಾನೊಬ್ಬ ಶಾಸಕನಾಗಿ ಸದನ ನಡೆಯುವ ಸಂದರ್ಭ ಬಿಟ್ಟರೆ ಯಾವಾಗಲೂ ಕ್ಷೇತ್ರದಲ್ಲೇ ಇರುತ್ತೇನೆ. ಇಂಥವನಿಗೆ ಬೆಂಗಳೂರಿನಲ್ಲಿರಲು ಆಗಲ್ಲ ಎಂದರು.
ಈ ಮುಂಚೆ ನನಗೆ ಸಚಿವ ಸ್ಥಾನ ದೊರಕುವ ಭರವಸೆ ನೀಡಿದ್ದರು. ಅದಕ್ಕೇ ದೆಹಲಿಗೆ ಹೋಗಿದ್ದೆ. ದೆಹಲಿಯಿಂದ ವಾಪಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಾಗ ಇಳಿದಾಗ ಅಂದು ರಾತ್ರಿ 10.45ಕ್ಕೆ ವಿಷಯ ತಿಳಿಯಿತು. ಸಚಿವ ಸ್ಥಾನ ಕೈತಪ್ಪಿರುವುದು ಗೊತ್ತಾಯಿತು ಎಂದರು. ನನಗೆ ಉಪಸಭಾಪತಿ ಹುದ್ದೆ ಬೇಡ. ಸಚಿವ ಸ್ಥಾನ ನೀಡದಿದ್ದರೆ ಶಾಸಕನಾಗೇ ಇರುತ್ತೇನೆ ಎಂದರು.