ಕಲಬುರಗಿ: ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕಳೆದ 14 ತಿಂಗಳಿಂದ ಖಾಲಿ ಇದ್ದು, ವಾರದೊಳಗೆ ಬಿ.ಸತ್ಯನಾರಾಯಣ ಕುಲಪತಿಗಳಾಗಿ ನೇಮಕ ಹೊಂದಲಿದ್ದಾರೆಂದು ತಿಳಿದುಬಂದಿದೆ. ವಿವಿ ಕುಲಪತಿಗಳಾಗಿದ್ದ ಪ್ರೊ| ಎಚ್. ಎಂ ಮಹೇಶ್ವರಯ್ಯ ಕಳೆದ 2020ರ ಏಪ್ರಿಲ್ ತಿಂಗಳಲ್ಲಿಯೇ ನಿವೃತ್ತಿಯಾಗಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳವರೆಗೆ ಅವರ ಅಧಿಕಾರವಧಿ ವಿಸ್ತರಿಸಲಾಗಿತ್ತು. ತದನಂತರ ಈ ಹುದ್ದೆ ಖಾಲಿಯಾಗಿ ಒಂಭತ್ತು ತಿಂಗಳಾದರೂ ಹೊಸ ಕುಲಪತಿಗಳ ನೇಮಕವಾಗಿಲ್ಲ. ರಾಜ್ಯದ ವಿವಿಗಳಿಗೆ ವರ್ಷಾನುಗಟ್ಟಲೇ ಕುಲಪತಿ ನೇಮಕವಾಗದೇ ಪ್ರಭಾರಿಯಾಗಿ ಮುನ್ನಡೆಸಿಕೊಂಡು ಬಂದಿರುವುದನ್ನು ನೋಡಿದ್ದೇವೆ. ಆದರೆ ರಾಜ್ಯದ ಏಕೈಕ ಕೇಂದ್ರೀಯ ವಿವಿಗೂ ವರ್ಷದಿಂದ ಕುಲಪತಿ ಹುದ್ದೆ ಖಾಲಿಯಾಗಿಯೇ ಮುನ್ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.
ದೇಶದಲ್ಲೇ ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಹೆಸರು ಮಾಡಿರುವ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಹುದ್ದೆ ಅತ್ಯಂತ ಪ್ರತಿಷ್ಠತೆಯಿಂದ ಕೂಡಿದೆ. ಇದಕ್ಕಾಗಿಯೇ ಕುಲಪತಿಗಳ ಹುದ್ದೆಗೆ 430ಕಿಂತ ಹೆಚ್ಚು ಅರ್ಜಿಗಳು ಬಂದಿದ್ದವು. ಬಂದ ಅರ್ಜಿಗಳನೆಲ್ಲ 2020ರ ಸೆಪ್ಟೆಂಬರ್ 23ರಂದು ನಡೆದ ಶೋಧನಾ ಸಮಿತಿ ಸಭೆಯಲ್ಲಿ 15 ಜನರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿ ನಂತರ ಅಕ್ಟೋಬರ್ 7ರಂದು ಶೋಧನಾ ಸಮಿತಿ ಸಭೆಯಲ್ಲಿ 5 ಜನರನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಶಿಫಾರಸಿಗಿಂತ ಮೊದಲು ಕೇಂದ್ರದ ಶಿಕ್ಷಣ ಆಯುಕ್ತಾಲಯದಿಂದ ವರ್ಗವಾಗಿ ಈಗ ರಾಷ್ಟ್ರಪತಿಗಳ ಬಳಿ ಹೋಗಿದೆ ಎನ್ನಲಾಗಿದ್ದರೂ ಇಂದಿನ ದಿನದವರೆಗೂ ರಾಷ್ಟ್ರಪತಿಗಳಿಂದ ಹೆಸರೊಂದು ಅನುಮೋದನೆಯಾಗಿ ಅಂತಿಮ ಮೊಹರು ಹೊರ ಬಿದ್ದಿಲ್ಲ.
ಬಲ್ಲ ಮಾಹಿತಿಗಳ ಪ್ರಕಾರ ಈಗ ವಾರ ಇಲ್ಲವೇ ಹತ್ತು ದಿನದೊಳಗೆ ಇಲ್ಲಿನ ಕರ್ನಾಟಕ ಕೇಂದ್ರೀಯ ವಿವಿಗೆ ಹೊಸ ಕುಲಪತಿಗಳು ಬರಲಿದ್ದಾರೆ ಎನ್ನಲಾಗುತ್ತಿದೆ. ಪಟ್ಟಿಯಲ್ಲಿ ಯಾರ್ಯಾರು: ಸತ್ಯ ಶೋಧನಾ ಸಮಿತಿ ಶಿಫಾರಸು ಮಾಡಿರುವ ಐವರು ಹೆಸರುಗಳಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ| ನಿರಂಜನ ವಾನಳ್ಳಿ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಅರ್ಥಶಾಸ್ತ ವಿಭಾಗದ ಪ್ರೊ| ಪುಷ್ಪ ಮ. ಸವದತ್ತಿ, ವಿಟಿಯು ಕಲಬುರ್ಗಿ ಪ್ರಾದೇಶಿಕ ಕೇಂದ್ರದ ವಿಶೇಷ ಅ ಧಿಕಾರಿ ಪ್ರೊ| ಬಸವರಾಜ ಗಾದಗೆ, ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರೊ|ಮೀನಾ ಹರಿಹರನ್, ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರೊ|ಬಿ. ಸತ್ಯನಾರಾಯಣ ಸೇರಿದ್ದಾರೆ. ಐವರಲ್ಲಿ ಮೂವರು ಕರ್ನಾಟದವರೇ ಆಗಿದ್ದಾರೆ.
ಬಿ.ಸತ್ಯನಾರಾಯಣ ನೇಮಕ?: 2009- 10ರಲ್ಲಿ ಆರಂಭಗೊಂಡಿರುವ ಕರ್ನಾಟಕ ಕೇಂದ್ರೀಯ ವಿವಿಗೆ ಪ್ರೊ| ಎ.ಎಂ. ಪಠಾಣ ಮೊದಲ ಕುಲಪತಿಗಳಾಗಿದ್ದರು. ತದನಂತರ ಎರಡನೇ ಕುಲಪತಿಗಳಾಗಿದ್ದವರು ಎಸ್. ಎಸ್.ಮೂರ್ತಿ, ತದನಂತರ ಪ್ರೊ| ಎಚ್. ಎಂ. ಮಹೇಶ್ವರಯ್ಯ ಐದು ವರ್ಷಗಳ ಕಾಲ ಕುಲಪತಿಗಳಾಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಿಯಾಗಿದ್ದಲ್ಲದೇ ಕಳೆದ ತಿಂಗಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಈಗ ನೇಮಕವಾಗುವ ನಾಲ್ಕನೇ ಕುಲಪತಿ ಯಾರು? ಎನ್ನುವ ಕುತೂಹಲ ಮೂಡಿದೆ. ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರೊ| ಬಿ. ಸತ್ಯನಾರಾಯಣ ಅವರೇ ಕರ್ನಾಟಕ ಕೇಂದ್ರೀಯ ಈಗ ಹೊಸದಾಗಿ ಕುಲಪತಿಗಳಾಗಿ ನೇಮಕವಾಗಲಿದ್ದಾರೆ ಎನ್ನ ಲಾಗುತ್ತಿದೆ. ಬಿ.ಸತ್ಯನಾರಾಯಣ ಸಿಯುಕೆ ಕುಲಪತಿ ಗಳಾಗಿ ನೇಮಕ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ 14 ತಿಂಗಳಿನಿಂದ ಖಾಲಿ ಇರುವ ಸಿಯುಕೆಗೆ ವಾರದೊಳಗೆ ಹೊಸ ಕುಲಪತಿಗಳು ಬರುವುದಂತೂ ನಿಶ್ಚಿತ