Advertisement
ಇದು ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ. ಆದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ರಸ್ತೆ ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಪುತ್ತೂರಿನಿಂದ ಬರುವ ವಾಹನಗಳು ರಸ್ತೆ ದಾಟಿದ ಮೇಲೆ ಬಿ.ಸಿ. ರೋಡ್ ಕಡೆಯಿಂದ ಹೋಗುವ ವಾಹನಗಳು ರಸ್ತೆಗೆ
ಇಳಿಯಬೇಕಾದ ಸ್ಥಿತಿ ಇದೆ. ಎರಡೂ ಬದಿಗಳ ವಾಹನಗಳು ಒಟ್ಟಿಗೇ ಹೋಗುವಂತಿಲ್ಲ. ಹಾಗಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಸದ್ಯಕ್ಕೆ ಜಾರಿಯಲ್ಲಿಲ್ಲ.
Related Articles
Advertisement
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಾಣೆಮಂಗಳೂರು, ಮೆಲ್ಕಾರ್, ದಾಸಕೋಡಿ, ಕೈಕಂಬ, ತುಂಬೆ ಸ್ಕೂಲ್ ಸನಿಹದಲ್ಲಿ ಹೆದ್ದಾರಿ ನಿರ್ಮಾಣದ ಅವ್ಯವಸ್ಥೆಯಿಂದ ಸಂಚಾರಕ್ಕೆ ಅಡಚಣೆ ಎದುರಾಗಿದೆ. ತುಂಬೆಯಲ್ಲಿ ಮಂಗಳೂರಿಂದ ಬರುವ ತಿರುವಿನಲ್ಲಿ ಮಳೆ ನೀರು ನಿಂತು ಕೆರೆಯಾಗಿದೆ. ಇದನ್ನು ಯಾರೂ ಸರಿಪಡಿಸುತ್ತಿಲ್ಲ ಎಂಬುದು ನಾಗರಿಕರ ದೂರು.
ಪಾಣೆಮಂಗಳೂರು ಪೇಟೆಯಿಂದ ಹೆದ್ದಾರಿ ದಾಟಿ ನರಿಕೊಂಬು -ಶಂಭೂರು ಕಡೆಗೆ ತೆರಳುವ ರಸ್ತೆಯ ಪಕ್ಕ ಇಡೀ ಜಾಗ ಕೆರೆಯಂತಾಗಿದೆ. ಗುಡಿಯ ಎದುರು ಪ್ರಯಾಣಿಕರಿಗೆ ನಿಲುಗಡೆ ನೀಡಬೇಕಿದ್ದ ಬಸ್‌ಗಳು ಹೆದ್ದಾರಿಯಲ್ಲೇ ಜನರನ್ನು ಇಳಿಸುತ್ತಿವೆ. ಬದಿಗೆ ಸರಿದರೆ ಇಡೀ ಬಸ್ಸೇ ಗುಂಡಿಗೆ ಬೀಳುವ ಅಪಾಯವಿದೆ.
ಒಂದು ಬಸ್ಸು ನಿಂತರೆ ಅದರ ಹಿಂದೆ ಉಳಿದ ಬಸ್ಸುಗಳೂ ಸಾಲುಗಟ್ಟಿ ಇಲ್ಲಬೇಕಾದ ಸ್ಥಿತಿ ಇದೆ. ಇದರಿಂದ ದ್ವಿಚಕ್ರ ವಾಹನ ಸಹಿತ ಹಲವು ವಾಹನಗಳು ಇರುವ ಅಲ್ಪಸ್ವಲ್ಪ ಜಾಗದಲ್ಲೇ ಸರ್ಕಸ್ ಮಾಡಲು ಹೋಗಿ ಸಣ್ಣಪುಟ್ಟ ಅಪಘಾತಗಳಿಗೀಡಾಗುವುದು ಸರ್ವೆಸಾಮಾನ್ಯವಾಗಿದೆ. ಈ ಹಿಂದೆ ಇಲ್ಲಿದ್ದ ಮರಗಳನ್ನು ಕಡಿದು ಜಾಗ ಮಾಡಿಕೊಡಲಾಗಿತ್ತು. ಆದರೆ ಇದಾದ ಬಳಿಕ ಕೆಲಸ ಮುಂದುವರಿಯದ ಕಾರಣ ಅರ್ಧಕ್ಕೇ ಕೈಬಿಟ್ಟಿರುವುದರಿಂದ ಪ್ರಯಾಣಿಕರ ಪಡಿಪಾಟಲು ಹೇಳತೀರದು.
ಮೆಲ್ಕಾರ್ ಸಂಚಾರ ಠಾಣೆಗೆ ಹೋಗುವಲ್ಲಿ ಹಲವು ತಿಂಗಳಿಂದ ಇರುವ ದೊಡ್ಡ ಗುಂಡಿಯನ್ನು ಇನ್ನೂ ಸರಿಪಡಿಸಿಲ್ಲ. ಘನ ವಾಹನಗಳಿಗೆ ಜಾಯಿಂಟ್ ಕಟ್, ಪ್ಲೇಟ್‌ಬೆಂಡ್, ಎಕ್ಸಿಲ್ ರಾಡ್ ಬಿರುಕಿನ ಶಿಕ್ಷೆ ನೀಡಿದ ಹಲವು ಘಟನೆಗಳು ನಡೆದಿವೆ.ಬಾಳ್ತಿಲ ಗ್ರಾಮದ ದಾಸಕೋಡಿಯಲ್ಲಿ ಪ್ರತಿ ವರ್ಷವೂ ಮಳೆಗಾಲ ಮುಗಿದ ಮೇಲೆ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಮತ್ತೆ ಹೊಂಡ ಕಾಣಿಸಿಕೊಳ್ಳುತ್ತದೆ. ಇದು ವರ್ಷಂಪ್ರತಿ ಇಲಾಖೆಯಿಂದ ನಡೆಯುವ ಹೆದ್ದಾರಿ ಅಭಿವೃದ್ಧಿ ಎಂದು ನಾಗರಿಕರು ಆರೋಪಿಸುತ್ತಾರೆ. ಅವರಿಗೆ ಹೇಳಿ , ಇವರಿಗೆ ಹೇಳಿ
ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ರಸ್ತೆ ದುರವಸ್ಥೆ ಬಗ್ಗೆ ಕೇಳಿದರೆ ಅದು ನಮಗಲ್ಲ, ಹೆದ್ದಾರಿ ಇಲಾಖೆಯನ್ನು ಕೇಳಿ ಎನ್ನುತ್ತಾರೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಅದು ನಮಗಲ್ಲ ಹೆದ್ದಾರಿ ಪ್ರಾಧಿಕಾರ ಎನ್ನುತ್ತಾರೆ. ಅವರಲ್ಲಿ ಕೇಳಿದರೆ, ಘಾಟಿ ರಸ್ತೆ, ಮಾಣಿ-ಬಿ.ಸಿ.ರೋಡಿನ ಅಭಿವೃದ್ಧಿಯನ್ನು ಗುತ್ತಿಗೆ ನೀಡಲಾಗಿದೆ. ನಮ್ಮ ಸುಪರ್ದಿಯಲ್ಲಿ ಇಲ್ಲ ಎನ್ನುತ್ತಾರೆ. ಗುತ್ತಿಗೆ ತೆಗೆದುಕೊಂಡವರ್ಯಾರು ಹೇಳಿ ಎಂದು ಪ್ರಶ್ನಿಸಿದರೆ, ದೆಹಲಿ ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಮುಖ್ಯಸ್ಥರಿಗೆ ವಿಚಾರಿಸಿ ಎನ್ನುತ್ತಾ ಮೊಬೈಲ್ ಸಂಖ್ಯೆ ಹೇಳಿ ಕರೆಯನ್ನು ಕಡಿತಗೊಳಿಸಲಾಗುತ್ತದೆ ಎಂಬುದು ದೂರು ನೀಡಲು ಪ್ರಯತ್ನಿಸಿದವರ ಅನುಭವ.