Advertisement
ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಳೆದ ವಾರದ ಎರಡು ಪ್ರಮುಖ ವಿಚಾರಗಳನ್ನು ನಾವಿಲ್ಲಿ ದಾಖಲಿಸಲೇಬೇಕಾದ ಅಗತ್ಯವಿದೆ. ಒಂದು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ್ದಾದರೆ ಇನ್ನೊಂದು ಭಾರತದ ರಾಜಕಾರಣಿಗಳು ವಿದೇಶದಲ್ಲಿ ದೇಶದ ಮಾನ ಹರಾಜು ಹಾಕುವ ಕಾರ್ಯದಲ್ಲಿ ತೊಡಗಿರುವುದು. ಅಭಿಪ್ರಾಯಗಳನ್ನು ಪ್ರಸ್ತಾವಿಸುವಾಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳ ವ್ಯತ್ಯಾಸ ಮತ್ತು ಮಹತ್ವದ ಬಗ್ಗೆ ಯೋಚಿಸದಿದ್ದಾಗ ಇಂಥ ಎಡವಟ್ಟುಗಳು ಆಗುತ್ತವೆ. ಭಾರತದ ರಾಜಕಾರಣಿಗಳು ಇಂಥ ಎಡವಟ್ಟುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾರೆ.
Related Articles
Advertisement
ಈ ಸಾಲಿಗೆ ಇತ್ತೀಚೆಗೆ ಸೇರಿದವರು ದೇಶವನ್ನು ಸುಮಾರು 50 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ. ಅದೂ ವಿದೇಶಿ ನೆಲದಲ್ಲಿ. ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಅವರು ಮಾತನಾಡುತ್ತಾ “ಭಾರತದಲ್ಲಿ ಭಯದ ವಾತಾವರಣವಿದೆ. ಜನರನ್ನು ವಿಭಜಿಸುವ ರಾಜಕೀಯ ನಡೆಯುತ್ತದೆ’ ಎಂದು ಹೇಳಿದ್ದಾರೆ. ಬೇರೇನೂ ಬೇಡ ಕಾಶ್ಮೀರದ ಇತಿಹಾಸವನ್ನು ಸ್ವಲ್ಪ ಓದಿದರೂ ಸಾಕು, ಅಲ್ಲಿನ ಇಂದಿನ ಸ್ಥಿತಿಗೆ ಕಾರಣರಾರು ಎಂಬುದು ಗೊತ್ತಾಗುತ್ತದೆ. ವಿಭಜನೆ ರಾಜಕೀಯ ಭಾರತದ ರಾಜಕೀಯದಲ್ಲಿ ಸೇರಿ ಸ್ವಾತಂತ್ರÂ ಲಭಿಸಿದಷ್ಟೇ ವರ್ಷವಾಯಿತು. ಅದೇನು ಇತ್ತೀಚಿನ ಬೆಳವಣಿಗೆಯಲ್ಲ. ಅದನ್ನು ಬೆಳೆಸಿ ಪೋಷಿಸಿದ್ದು ಬಹು ವರ್ಷಗಳ ಕಾಲ ನಮ್ಮನ್ನಾಳಿದವರು ಎಂದು ಇತಿಹಾಸವೇ ಹೇಳುತ್ತದೆ.
ರಾಹುಲ್ ಗಾಂಧಿ ಹೇಳಿದ್ದು ಒಂದು ರೀತಿಯಲ್ಲಿ ಒಪ್ಪುವಂಥದ್ದೆ! ಇತ್ತೀಚಿನ ದಿನಗಳಲ್ಲಿ ಭಯದ ವಾತಾವರಣ ಭಾರತದಲ್ಲಿ ಬಹಳಷ್ಟು ಮಂದಿಯಲ್ಲಿ ಸೃಷ್ಟಿಯಾಗಿದೆ ನಿಜ. ದೇಶದ ಖಜಾನೆ ಕೊಳ್ಳೆ ಹೊಡೆದ ಆರೋಪ ಹೊತ್ತಿರುವ ಮಾಜಿ ಸಚಿವರು ಮತ್ತವರ ಪುತ್ರ, ಕುಟುಂಬ ವರ್ಗದವರಿಗೆ, ದೇಶದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದವರಿಗೆ, ಅವರು ನಡೆಸಿದ್ದ ವಂಚನೆಗಳಿಗೆ ನೆರವು ನೀಡಿದ ರಾಜಕೀಯ ನಾಯಕರುಗಳಿಗೆ-ಬ್ಯಾಂಕ್ ಅಧಿಕಾರಿಗಳಿಗೆ, ಹಿರಿಯ ನಾಯಕ ಡಾ| ಸುಬ್ರಮಣಿಯನ್ ಸ್ವಾಮಿ ಆರೋಪಿಸಿದಂತೆ ಪಕ್ಷದ ಮಾಲಕತ್ವದ ಪತ್ರಿಕೆಯ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದವರಿಗೆ, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಉಗ್ರ ಶಕ್ತಿಗಳಿಗೆ ಮತ್ತು ಅವುಗಳನ್ನು ಬೆಂಬಲಿಸುವ ವ್ಯಕ್ತಿಗಳಿಗೆ, ಇತ್ತೀಚೆಗೆ ಐಟಿ ದಾಳಿಗಳಿಗೊಳಗಾಗಿ ಭಾರೀ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆಯಾಗಿದ್ದು-ಅವುಗಳ ವಾರಸುದಾರರಿಗೆ ನಿಜಕ್ಕೂ ನಡುಕ ಹುಟ್ಟಿದೆ. ಭಯದ ವಾತಾವರಣ ಅವರ ಮನಸ್ಸಿನಲ್ಲಿ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿರಿಸಿ ರಾಹುಲ್‌ಗಾಂಧಿ “ದೇಶದಲ್ಲಿ ಭಯದ ವಾತಾವರಣ ಇದೆ’ ಎಂದಿದ್ದಾರೋ ಗೊತ್ತಿಲ್ಲ.
ಹಾಗೆ ನೋಡಿದರೆ ರಾಹುಲ್ ಗಾಂಧಿಗೂ ಮೊದಲು ಕೆಲವು ಚಿತ್ರನಟರು ಈ ಮಾತನ್ನು ಹೇಳಿ ಮುಖಭಂಗ ಅನುಭವಿಸಿದ್ದರು. ಇನ್ನು ಕೆಲವರು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿದ್ದರು. ಇದಕ್ಕಿಂತಲೂ ಮುಖ್ಯ ವಿಚಾರವೆಂದರೆ 10 ವರ್ಷಗಳ ಕಾಲ ದೇಶದ ಉಪ ರಾಷ್ಟ್ರಪತಿಯಾಗಿ, ಅದಕ್ಕೂ ಮುನ್ನ ರಾಯಭಾರಿಯಾಗಿ ತನಗಿರುವ ಎಲ್ಲ ಸವಲತ್ತುಗಳನ್ನು ಪೂರ್ಣವಾಗಿ ಬಳಸಿಕೊಂಡು ಸುಖ ಅನುಭವಿಸಿದ ಮೊಹಮ್ಮದ್ ಹಮೀದ್ ಅನ್ಸಾರಿ ಉಪ ರಾಷ್ಟ್ರಪತಿ ಹುದ್ದೆ ತೊರೆದ ಹೊತ್ತಿಗೆ ಹೇಳಿದ ಮಾತುಗಳು ಅತ್ಯಂತ ಗಂಭೀರವಾದದ್ದು ಮತ್ತು ಅಪಾಯಕಾರಿಯಾದದ್ದು. “ಭಾರತದಲ್ಲಿ ಅಭದ್ರತೆ ಭಾವನೆ ಕಾಡುತ್ತಿದೆ’ ಎಂಬ ಅವರ ಮಾತು ಅನುಭವದಿಂದ ಹೇಳಿದ್ದಾದರೆ ಅವರದೇ ಪಕ್ಷದ ಸರಕಾರವಿದ್ದಾಗ ಯಾಕೆ ಮೌನವಾಗಿದ್ದರು? ಅನಂತರದ ದಿನಗಳಲ್ಲಿ ಅನ್ಸಾರಿ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾದವು. ಸಾಮಾಜಿಕ ತಾಣಗಳಲ್ಲಿ ಅವರಿಗೆ ಸಂಬಂಧಪಟ್ಟ ಹಲವು ವಿಚಾರಗಳು ವೈರಲ್ ಅದವು. ಬಳಿಕ ಈ ವಿಚಾರ ತಣ್ಣಗಾಯಿತು.
ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ವಿಚಾರಗಳನ್ನು ಹರಿಯಬಿಡುವುದು ಹೊಸತೇನಲ್ಲ. ಈ ಹಿಂದೆ ಬಿಹಾರದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ “ಪ್ರಶಸ್ತಿ ವಾಪಸ್’ ಅಭಿಯಾನಕ್ಕೆ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ದೇಶದ ಹಲವಾರು ಮಂದಿ ಸಾಹಿತಿಗಳು ಕರ್ನಾಟಕದ ಹಿರಿಯ ಸಾಹಿತಿ, ಸಂಶೋಧಕ ಡಾ| ಕಲಬುರ್ಗಿ ಮತ್ತು ಇತರ ವಿಚಾರವಾದಿಗಳ ಹತ್ಯೆ ಖಂಡಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಯಾವುದೇ ವ್ಯಕ್ತಿಯ ಹತ್ಯೆ ನಡೆದಾಗ ಅದರ ತನಿಖಾ ಹೊಣೆ ರಾಜ್ಯ ಸರಕಾರದ್ದು, ಆದರೂ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ವಾಪಸ್ ಮಾಡಿರುವುದು ಯಾವ ಕಾರಣಕ್ಕೆ ಎಂಬುದು ಇನ್ನೂ ಚರ್ಚೆಗೆ ಗ್ರಾಸವಾಗಿರುವ ವಿಚಾರ. (ಪ್ರಶಸ್ತಿ ಪತ್ರ ಮಾತ್ರ ಹಿಂದಿರುಗಿಸಿದ್ದು, ಪ್ರಶಸ್ತಿ ಜೊತೆಗಿನ ಹಣ ಹಿಂತಿರುಗಿಸಿಲ್ಲ). ಆಶ್ಚರ್ಯದ ವಿಷಯವೆಂದರೆ ಬಿಹಾರ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನದಲ್ಲಿ ಈ ಅಭಿಯಾನ ಕೊನೆಗೊಂಡಿತು.
ಈಗ ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಕುಳಿತು “ಭಾರತದಲ್ಲಿ ಭಯದ ವಾತಾವರಣ ಇದೆ’ ಎಂದು ಹೇಳುವ ಮೂಲಕ ಗೊಂದಲ ನಿರ್ಮಿಸಲು ಹೊರಟಿದ್ದಾರೆ. ಕೆಲವರಿಗಂತೂ ದೇಶದಲ್ಲಿ ಭಯದ ವಾತಾವರಣ ಇದೆ ಎಂದು ಹೇಳುವುದೇ ಫ್ಯಾಶನ್ ಆಗಿಬಿಟ್ಟಿದೆ. ಇಂಥ ಮಾತುಗಳನ್ನಾಡಿದಾಗಲೇ ನಾಡಿನ ಮಾಧ್ಯಮಗಳು ಅಂಥವರ ಮೇಲೆ ಗಮನ ಕೇಂದ್ರಿಕರಿಸುತ್ತವೆ. ಆದರೆ ಇಂತಹ ಹೇಳಿಕೆಗಳು ದೇಶದ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುತ್ತವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇಂದ್ರ/ರಾಜ್ಯ ಸರಕಾರವನ್ನು ಟೀಕಿಸುವ ಸ್ವಾತಂತ್ರÂ ಎಲ್ಲರಿಗಿದೆ.
ಭಾರತದಲ್ಲಂತೂ ಈ ಸ್ವಾತಂತ್ರÂ ಸ್ವಲ್ಪ ಹೆಚ್ಚೇ ಇದೆ. ಆದರೆ ಕೇಂದ್ರ ಸರಕಾರವನ್ನು ಟೀಕಿಸುವ ಭರದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಡೆಗಣಿಸುವುದು ಅಪಾಯಕಾರಿ ಬೆಳವಣಿಗೆ. ಮಾತ್ರವಲ್ಲ ಶತಮಾನದ ಇತಿಹಾಸ ಹೊಂದಿರುವ ರಾಷ್ಟೀಯ ಪಕ್ಷದ ಪರಮೋಚ್ಚ ನಾಯಕನಿಗೆ ದೂರದೃಷ್ಟಿಯ ಕೊರತೆ ಇದೆ ಎಂದು ಜನ ಆಡಿಕೊಂಡಾರು. ಹಾಗಾಬಾರದು. ಆ ಪಕ್ಷದ ನಾಯಕರೇ ಹೇಳುವಂತೆ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರÂ ತಂದುಕೊಟ್ಟ ಪಕ್ಷ. ಇಂಥ ಪಕ್ಷದ ನಾಯಕರು ಆಡುವ ಮಾತುಗಳು ಸಾರ್ವಜನಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಪಕ್ಷಕ್ಕೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚಾಗುವುದು.
– ಎ. ವಿ. ಬಾಲಕೃಷ್ಣ ಹೊಳ್ಳ