ಹುಣಸೂರು: ಅಪರಿಚಿತ ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗನ್ನು ಪತ್ತೆಮಾಡಿ 3.5 ಲಕ್ಷರೂ ಬೆಲೆಬಾಳುವ ಆಭರಣವನ್ನು ಕಳೆದುಕೊಂಡಿದ್ದ ಮಾಲಿಕರಿಗೆ ನಗರ ಠಾಣೆ ಪೊಲೀಸರು ಒಪ್ಪಿಸಿದ್ದಾರೆ.
ಹುಣಸೂರು ನಗರದ ಶಬ್ಬೀರ್‌ನಗರದ ಸಫೀರ್ ಅಹಮದ್, ರಜಿಯಾ ಬೇಗಂ ಚಿನ್ನಾಭರಣದ ಬ್ಯಾಗ್ ಕಳೆದುಕೊಂಡಿದ್ದವರು.
ಶಬ್ಬೀರ್‌ನಗರದ ಸಫೀರ್ ಅಹಮದ್ ಮತ್ತವರ ಪತ್ನಿ ರಜಿಯಾಬೇಗಂ ತಮ್ಮ ಮನೆಯ ಬಳಿಯಿಂದ ಶನಿವಾರ ಸಂಜೆ 6 ಗಂಟೆ ವೇಳೆಯಲ್ಲಿ ಆಟೋ ಹತ್ತಿ ನಗರದ ಬಸ್ ನಿಲ್ದಾಣಕ್ಕೆ ಬಂದು ಕೆ.ಆರ್.ನಗರ ಕಡೆಗೆ ತೆರಳುವ ಬಸ್ ಹತ್ತಿ ಹಾಸನದತ್ತ ಪ್ರಯಾಣ ಬೆಳೆಸಿದ್ದರು, ಹಾಸನಕ್ಕೆ ಹೋಗುವ ವೇಳೆ ಚಿನ್ನಾಭರಣವಿದ್ದ ಬ್ಯಾಕ್ ಕಾಣೆಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ವಾಪಸ್ ಮರಳಿ ಮನೆಯಲ್ಲಿ ಹುಡುಕಾಡಿ ನಂತರ ರಾತ್ರಿ ಠಾಣೆಗೆ ಬಂದು ರಾತ್ರಿ 10 ರ ವೇಳೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆಟೋ ಪತ್ತೆಗೆ ಕ್ರಮ
ದೂರು ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಇನ್ಸ್ಪೆಕ್ಟರ್ ದೇವೇಂದ್ರರ ನೇತೃತ್ವದಲ್ಲಿ ಎ.ಎಸ್.ಐ.ರವಿ ಹಾಗೂ ಸಿಬ್ಬಂದಿಗಳು ನಗರದ ವಿವಿಧ ಆಟೋ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಹುಡುಕಾಟ ನಡೆಸಿ, ಬಸ್ ನಿಲ್ದಾಣದ ರಸ್ತೆ ಬದಿಯ ಅಂಗಡಿಗಳ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿದ್ದ ಆಟೋವನ್ನು ಕೊನೆಗೂ ಲಾಲ್‌ಬಂದ್ ಬೀದಿಯ ಮನೆ ಬಳಿಯಲ್ಲಿ ನಿಂತಿರುವುದು ಪತ್ತೆಯಾಯಿತು. ಆಟೋ ಚಾಲಕ ಮಹಮದ್ ಇಲಿಯಾಸ್ ಚಿನ್ನಾಭರಣವಿದ್ದ ಬ್ಯಾಂಗ್‌ನ್ನು ಗಮನಿಸದೆ ತನ್ನ ಆಟೋವನ್ನು ಮನೆ ಮುಂದೆ ನಿಲ್ಲಿಸಿದ್ದರು. ಆಟೋದಲ್ಲಿ ಹುಡುಕಾಟ ನಡೆಸಿದ ವೇಳೆ ಚಿನ್ನಾಭರಣ ಇದ್ದ ಬ್ಯಾಗ್ ಸೀಟಿನ ಹಿಂಬದಿಯಲ್ಲಿ ಪತ್ತೆಯಾಯಿತು.
ಆಟೋಸೀಟಿನ ಹಿಂಬದಿಯಲ್ಲಿ ಇಟ್ಟು ಪ್ರಯಾಣಿಕ ಸಫೀರ್ ಅಹಮದ್ ಇಳಿದು ಬಸ್ ಹತ್ತಿದ್ದರು. ಚಾಲಕ ಸಹ ಗಮನಿಸದೆ ಮನೆಗೆ ತೆರಳಿದ್ದರು. ಇನ್ಸ್ಪೆಕ್ಟರ್ ದೇವೇಂದ್ರರವರು ಚಿನ್ನಾಭರಣವಿದ್ದ ಬ್ಯಾಗನ್ನು ಮಾಲಿಕ ಸಫೀರ್ ಅಹಮದ್‌ರಿಗೆ ಒಪ್ಪಿಸಿದರು. ಕಳೆದು ಹೋಗಿದ್ದ ೬೫ ಗ್ರಾಂ.ಚಿನ್ನಾಭರಣ ಸಿಕ್ಕ ಸಂಭ್ರಮದಲ್ಲಿ ಸಫೀರ್ ಅಹಮದ್ ಪೊಲೀಸರು ಹಾಗೂ ಆಟೋ ಚಾಲಕನಿಗೆ ಧನ್ಯವಾದ ಹೇಳಿ ಮನೆಯತ್ತ ತೆರಳಿದರೆ, ಮಾಲಿಕರಿಗೆ ಆಭರಣವನ್ನು ಮರಳಿಸಿದ ಸಂತಸದಲ್ಲಿದ್ದರು.