Advertisement

ಪಿಎನ್‌ಬಿ ಹಗರಣ 11400 ಅಲ್ಲ, 12700 ಕೋಟಿ

12:35 PM Feb 28, 2018 | Harsha Rao |

ಹೊಸದಿಲ್ಲಿ: ಈವರೆಗೆ ಎಲ್ಲರೂ ಅಂದುಕೊಂಡಂತೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದ ಹಗರಣ 11,400 ಕೋಟಿ ರೂ.ಗಳದ್ದಲ್ಲ, ಬದಲಿಗೆ ಅದು 12,700 ಕೋಟಿ ರೂ.ಗಳದ್ದು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಮುಂಬಯಿ ಷೇರು ಮಾರುಕಟ್ಟೆಗೆ ಸೋಮವಾರ ರಾತ್ರಿ ನೀಡಿರುವ ಮಾಹಿತಿಯಲ್ಲಿ ಸ್ವತಃ ಪಂಜಾಬ್‌ ನ್ಯಾಷನಲ್‌ ಬ್ಯಾಂಕೇ ಈ ವಿಚಾರವನ್ನು ತಿಳಿಸಿದೆ.
ಅನಧಿತೃತವಾಗಿ ನಡೆದ ವಹಿವಾಟಿನ ಮೊತ್ತ ಇನ್ನೂ 1,300 ಕೋಟಿ ರೂ.ಗಳಿದ್ದು, ಒಟ್ಟು 12,700 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್‌ ಮಾಹಿತಿ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ನೀರವ್‌ ಮೋದಿ ಮಾಲೀಕತ್ವದ ಫೈರ್‌ಸ್ಟಾರ್‌ ಡೈಮಂಡ್‌ ಕಂಪೆನಿಯು ತಾನು ದಿವಾಳಿಯಾಗಿದ್ದೇನೆ ಎಂದು ತಿಳಿಸುವಂಥ ದಾಖಲೆಗಳನ್ನು ನ್ಯೂಯಾರ್ಕ್‌ನ ದಿವಾಳಿತನಕ್ಕೆ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿದೆ.

Advertisement

ಸಾಲ ಪಾವತಿಗೆ ಬದ್ಧ: ಒರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ಗೆ 97.85 ಕೋಟಿ ರೂ. ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಸಿಂಭೋಲಿ ಶುಗರ್ಸ್‌ ಕಂಪೆನಿಯು ಮಂಗಳವಾರ ಸ್ಪಷ್ಟನೆ ನೀಡಿದ್ದು, ತಾನು ಬಾಕಿಯಿರುವ ಎಲ್ಲ ಮೊತ್ತವನ್ನೂ ಪಾವತಿಸಲು ಬದ್ಧವಿರುವುದಾಗಿ ತಿಳಿಸಿದೆ. ಸಿಬಿಐ ಈಗಾಗಲೇ ಈ ಪ್ರಕರಣ ಸಂಬಂಧ ಕಂಪೆನಿ ಮುಖ್ಯಸ್ಥರು, ಉಪ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇತರ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದೆ.

15 ದಿನಗಳ ಗಡುವು: ಇದೇ ವೇಳೆ, ಬ್ಯಾಂಕಿನ ಕಾರ್ಯನಿರ್ವಹಣಾ ಹಾಗೂ ತಾಂತ್ರಿಕ ರಿಸ್ಕ್ಗಳನ್ನು ಕಡಿಮೆ ಮಾಡುವ ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಸ್ಪಷ್ಟ ಹೊಣೆಗಾರಿಕೆ ವಹಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸುವಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸುವ ಬಗ್ಗೆ ಸ್ಪಷ್ಟ ನೀಲನಕ್ಷೆಯನ್ನು ತಯಾರಿಸಿ ಎಂದು ಬ್ಯಾಂಕುಗಳ ಕಾರ್ಯಕಾರಿ ನಿರ್ದೇಶಕರು ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿಗಳಿಗೆ ವಿತ್ತ ಸಚಿವಾಲಯ ಆದೇಶಿಸಿದೆ. ಇದಕ್ಕೆ 15 ದಿನಗಳ ಗಡುವನ್ನೂ ವಿಧಿಸಲಾಗಿದೆ.

ವಾರಂಟ್‌ಗಾಗಿ ಕೋರ್ಟ್‌ ಮೊರೆ: ವಜ್ರ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಮಂಗಳವಾರ ಮುಂಬಯಿನ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಬುಧವಾರ ಅರ್ಜಿಯ ವಿಚಾರಣೆ ನಡೆಯಲಿದ್ದು, ನೀರವ್‌ ಪರ ವಕೀಲರ ವಾದ ಆಲಿಸಿದ ಬಳಿಕ ಕೋರ್ಟ್‌ ತನ್ನ ಆದೇಶ ಹೊರಡಿಸಲಿದೆ. ಏತನ್ಮಧ್ಯೆ, ಪಿಎನ್‌ಬಿಯ ಮಾಜಿ ಎಂಡಿ ಉಷಾ ಅನಂತಸುಬ್ರಮಣಿಯನ್‌ ಅವರನ್ನು ಮಂಗಳವಾರ ಸಿಬಿಐ ವಿಚಾರಣೆ ನಡೆಸಿದೆ.

2009ರ ಬಳಿಕ ಆಡಿಟ್‌ ನಡೆದೇ ಇಲ್ಲ
ನೀರವ್‌ ವಂಚನೆ ಹಗರಣದ ಕುರಿತು ವಿತ್ತ ಸಚಿವಾಲಯಕ್ಕೆ ಪಿಎನ್‌ಬಿ ಸಲ್ಲಿಸಿದ ವರದಿಯು ಇದೀಗ ಬಹಿರಂಗವಾಗಿದೆ. ಆರ್‌ಬಿಐ ಸೇರಿದಂತೆ ಆಡಿಟ್‌ ಮತ್ತು ನಿಯಂತ್ರಣಾ ಅಧಿಕಾರಿಗಳ ಲೋಪಗಳ ಬಗ್ಗೆಯೂ ಇದರಲ್ಲಿ ಉಲ್ಲೇಖೀಸಲಾಗಿದೆ. ಕಳೆದ 9 ವರ್ಷಗಳಲ್ಲಿ ಬ್ಯಾಂಕ್‌ ವಹಿವಾಟುಗಳ ಆಡಿಟ್‌ ಕಾರ್ಯವನ್ನು ಆರ್‌ಬಿಐ ನಡೆಸಿಯೇ ಇಲ್ಲ. ಹೀಗಾಗಿ 9 ವರ್ಷಗಳಿಂದಲೂ ಅವ್ಯವಹಾರ ಆಗಿದ್ದು ಗಮನಕ್ಕೆ ಬರಲೇ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. 2009ರ ಮಾರ್ಚ್‌ 31ರಂದು ಆರ್‌ಬಿಐ ಆಡಿಟ್‌ ನಡೆಸಿತ್ತು. ಅನಂತರ ನಡೆಸಿಯೇ ಇಲ್ಲ. ಹೀಗಾಗಿ ಆರ್‌ಬಿಐ ಮೇಲ್ವಿಚಾರಣೆಯ ಕೊರತೆಯೂ ಇದಕ್ಕೆ ಕಾರಣವಾಯಿತು ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next