Advertisement
ಉಪ್ಪಿನಕಾಯಿಯ ಬಳಕೆ ಇಂದು ನಿನ್ನೆಯದಲ್ಲ. ಪುರಾಣ ಕಾಲದಿಂದಲೂ ಇತ್ತು ಎಂಬುದಕ್ಕೆ ನಿದರ್ಶನವಾಗಿ ರಾಮಾಯಣಕ್ಕೆ ಸಂಬಂಧಪಟ್ಟಂತೆ ಒಂದು ಜನಪದೀಯ ವಿನೋದ ಕತೆ ಇದೆ. ಅದು ಶ್ರೀರಾಮ ಪಟ್ಟಾಭಿಷೇಕದ ಸಂದರ್ಭ. ಅರಮನೆಯಲ್ಲಿ ಪ್ರಜೆಗಳಿಗೆ ಔತಣಕೂಟದ ಏರ್ಪಾಡಾಗಿತ್ತು. ವಾನರ ಸೇನೆಯೂ ಬಂದಿತ್ತು. ಎಲ್ಲರ ಜತೆ ಸಾಲಾಗಿ ಕೂತು ಮಂಗಗಳು ಶಿಸ್ತಿನಿಂದ ಊಟ ಮಾಡುತ್ತಿದ್ದವು. ಒಂದು ಪುಟ್ಟ ಮಂಗ ಮಾವಿನಮಿಡಿ ಉಪ್ಪಿನಕಾಯಿಯನ್ನು ತಿನ್ನಲೆಂದು ಹಿಚುಕುವಾಗ ಅದರೊಳಗಿದ್ದ ಬೀಜ ಮೇಲಕ್ಕೆ ಹಾರಿತು. ಅದು ಕೂಡಲೇ “”ಎಲಾ! ಇಷ್ಟು ಸಣ್ಣ ಬೀಜಕ್ಕೆ ಎಷ್ಟು ಸೊಕ್ಕು? ಇದರಿಂದ ಹೆಚ್ಚು ಎತ್ತರಕ್ಕೆ ನಾನು ಹಾರಿ ತೋರಿಸುತ್ತೇನೆ” ಎಂದು ಹಾರಿತು. ಇದನ್ನು ನೋಡಿದ ಅದರ ಹತ್ತಿರ ಕೂತ ಮಂಗ “”ನಾನು ಇನ್ನೂ ಮೇಲಕ್ಕೆ ಹಾರಬಲ್ಲೆ” ಎಂದು ಹಾರಿತು. ಕೊನೆಗೆ ಅಲ್ಲಿದ್ದ ಎಲ್ಲ ಮಂಗಗಳೂ ಪೈಪೋಟಿಯಿಂದ ಹಾರತೊಡಗಿದವು. ಇದು ಮಂಗಗಳ ಹುಟ್ಟುಗುಣದ ಕತೆಯಾದರೂ ಉಪ್ಪಿನಕಾಯಿ ಅಂದೂ ಕೂಡ ಮುಖ್ಯ ವ್ಯಂಜನವಾಗಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.
Related Articles
Advertisement
ಫೆಬ್ರವರಿ ತಿಂಗಳ ಆರಂಭದಲ್ಲೇ ಅತ್ತೆ “”ಮಾವಿನಮರ ಹೂ ಹೋಗಿದೆಯಾ? ನೋಡಿ ಬನ್ನಿ” ಎಂದು ಮಾವನನ್ನು ಕಾಡಿಗೆ ಅಟ್ಟುತ್ತಿದ್ದರು. ಹೂ ಹೋಗಿದೆ ಎಂದು ಗೊತ್ತಾದರೆ ಸಾಕು ವಾರ ವಾರ ಅದು ಎಷ್ಟು ದೊಡ್ಡದಾಗಿದೆ ಎಂದು ತಿಳಿಯಲು ಮಾವ ಮತ್ತೆ ಕಾಡಿಗೆ ಹೋಗಬೇಕಿತ್ತು. ಹಲಸಿನ ಬೀಜದಷ್ಟು ದೊಡ್ಡ ಗಾತ್ರವಾದಾಗ ಮಾವಿನ ಮಿಡಿ ಕೊಯ್ಯಲು ರೆಡಿ. ಮಾವಿನಕಾಯಿ ಗೊರಟು ಕಟ್ಟಿದರೆ ಮಿಡಿ ಉಪ್ಪಿನಕಾಯಿಗೆ ಅಯೋಗ್ಯ. ಕೆಲವೊಮ್ಮೆ ಮಾವಿನ ಮರ ತೇರಿನಂತೆ ಹೂ ಬಿಟ್ಟರೂ ಮುಗಿಲು ಬಂತೆಂದರೆ ಹೂ ಕರಟಿ ಮಿಡಿ ಆಗುತ್ತಿರಲಿಲ್ಲ. ಆಗ ಅತ್ತೆ ಮಾಡಿದ ಪೂರ್ವ ಸಿದ್ಧತೆಗಳೆಲ್ಲ ನೀರಿನಲ್ಲಿ ಇಟ್ಟ ಹೋಮದಂತಾಗುತ್ತಿತ್ತು. ಅತ್ತೆ ದುಃಖದಿಂದ ಮುಗಿಲನ್ನು ಕಳ್ಳರಿಗೆ ಹೋಲಿಸಿ ಹೇಳುವ ಜಾನಪದ ಹಾಡೊಂದನ್ನು ಹಾಡುತ್ತಿದ್ದರು. ಅದು ಹೀಗಿದೆ.
ಮಾವಿನ ಹೂಗಿಂಗೆ ಆರ್ಬಂದೋ ಕಳ್ಳಾರುಮಾಯದಲ್ಲಿ ಬಪ್ಪ ದುರಿತಾವ
ದುರಿತ ಪರ್ವತಂಗಳ ಕಾಯು ನಮ್ಮೂರ ವನದುರ್ಗೆ
ಮಾವಿನಮಿಡಿ ಕೊಯ್ಯುವ ಮುನ್ನಾ ದಿನ ಮಾವ ಮರ ಹತ್ತುವುದರಲ್ಲಿ ಪರಿಣತನಾದ ಚಂದಪ್ಪನನ್ನು ಕರೆದುಕೊಂಡು ಕಾಡಿನಲ್ಲಿ ಈಗಾಗಲೇ ಗೊತ್ತುಮಾಡಿದ ಮಾವಿನಮರದ ಬಳಿಗೆ ಹೋಗುತ್ತಿದ್ದರು. ಚಂದಪ್ಪಅಲ್ಲೇ ಸುತ್ತಮುತ್ತ ಇರುವ ಬಿದಿರಮೆಳೆಯಿಂದ ಬಿದಿರನ್ನು ಕಡಿದು ಏಣಿಯಂತೆ ಮರಕ್ಕೆ ಒರಗಿಸಿ ಕಟ್ಟುತ್ತಿದ್ದ. ಮರದಲ್ಲಿ ಕೆಂಜಿರುವೆ ಇದ್ದರೆ ಅದಕ್ಕೆ ಗೆಮೆಕ್ಸಿನ್ ಎಂಬ ಪುಡಿಯನ್ನು ಕೆಂಜಿರುವೆ ಗೂಡಿಗೆ ಹಾಗೂ ಟೊಂಗೆ ಟೊಂಗೆಗೆ ಉದುರಿಸುತ್ತಿದ್ದ. ಮರುದಿನ ಸೂರ್ಯ ಹುಟ್ಟುವ ಮೊದಲೇ ಮಾವ ಚಂದಪ್ಪನೊಂದಿಗೆ ಇನ್ನೊಬ್ಬ ಸಹಾಯಕನ ಜೊತೆಗೂಡಿಕೊಂಡು ಕತ್ತಿ, ಗೋಣಿ, ಹಗ್ಗ, ಕೈಕುರುವೆ ಹಿಡಿದುಕೊಂಡು ಯುದ್ಧಕ್ಕೆ ಹೊರಡುವಂತೆ ಮಿಡಿ ಕೊಯ್ಯಲು ಹೊರಡುತ್ತಿದ್ದರು. ಚಂದಪ್ಪಸಪೂರವಾದ ಉದ್ದ ಬಿದಿರಿನ ಕೋಲಿನ ತುದಿಗೆ ಸಣ್ಣ ಕೋಲು ಕಟ್ಟಿ, ಹಿಂದಿನ ದಿನ ಏಣಿ ಕಟ್ಟಿದ್ದ ಮರ ಏರುತ್ತಿದ್ದ. ಮಾವಿನ ಮಿಡಿಗಳಿರುವ ಗೊಂಚಲಿಗೆ ಬಿದಿರುಕೋಲು ಹಾಕಿ ತನ್ನತ್ತ ಎಳೆದು ಜಾಗ್ರತೆಯಿಂದ ಗೊಂಚಲನ್ನು ತುಂಡು ಮಾಡಿ ಕೈಕುರುವೆಗೆ ತುಂಬಿಸುತ್ತಿದ್ದ. ಕೈಕುರುವೆ ತುಂಬಿದಾಗ ಹಗ್ಗದಿಂದ ಕಟ್ಟಿ ಕೆಳಗೆ ಇಳಿಸುತ್ತಿದ್ದ. ಅದನ್ನು ಕೆಳಗೆ ನಿಂತ ಸಹಾಯಕ ಹಿಡಿದು ಅದರಿಂದ ಮಾವಿನಮಿಡಿ ತೆಗೆದು ಗೋಣಿಗೆ ತುಂಬಿಸುತ್ತಿದ್ದ. ಮರ ಇಡೀ ಖಾಲಿ ಮಾಡಿದ ಮೇಲೆಯೇ ಚಂದಪ್ಪಇಳಿಯುತ್ತಿದ್ದುದು. ಒಮ್ಮೆ ಹೀಗೆ ಏಣಿ ಕಟ್ಟಿ ಇಟ್ಟ ಮರಕ್ಕೆ ಮರುದಿನ ಯಾವುದೋ ಕಾರಣದಿಂದ ಹೋಗಲು ಆಗಿರಲಿಲ್ಲ. ಅದರ ಮರುದಿನ ಹೋದಾಗ ಯಾರೋ ಬಂದು ಎಲ್ಲ ಮಾವಿನಮಿಡಿಗಳನ್ನು ಕೊçದಿದ್ದರು. ಬೋಳು ಮರ ಕಂಡು ಮಾವ ಮತ್ತು ಕೆಲಸದವರು ತಲೆಗೆ ಕೈ ಹೊತ್ತು ಹಿಂದಿರುಗಿದ್ದರು. ಮಾವಿನಮಿಡಿ ಮನೆಗೆ ಬರುವಾಗ ಮಧ್ಯಾಹ್ನ ಕಳೆಯುತ್ತಿತ್ತು. ಅತ್ತೆ ಸಡಗರದಿಂದ ಮಾವ ಮತ್ತು ಕೆಲಸದವರಿಗೆ ಊಟ ಬಡಿಸಿ ಗೋಣಿಯಿಂದ ಮಿಡಿಗಳನ್ನು ತೆಗೆದು ಮುಂಡಂಗಿ ಚಾಪೆ ಮೇಲೆ ಹರಡುತ್ತಿದ್ದರು. ಒಂದನ್ನು ತೆಗೆದು ಮೂಸಿ “”ಈ ಸಾರಿ ಮಿಡಿ ಬಹಳ ಚೆನ್ನಾಗಿದೆ. ಒಳ್ಳೆ ಸೊನೆ. ಜೀರಿಗೆ ಪರಿಮಳ. ಇನ್ನೂ ಸ್ವಲ್ಪ ಎಳೆಯದಿರುವಾಗ ಕೊಯಿದಿದ್ದರೆ ಒಳ್ಳೆಯದಿತ್ತು” ಎಂದು ಅಭಿಪ್ರಾಯಗಳನ್ನು ಹೇಳುತ್ತಿದ್ದರು. ನಂತರ ಅತ್ತೆ ಕಲ್ಲು ಉಪ್ಪನ್ನು ಅರೆಯುವ ಕಲ್ಲಿಗೆ ಹಾಕಿ ಕುಟ್ಟಿ ಪುಡಿ ಮಾಡುತ್ತಿದ್ದರು. ಮಾವಿನ ಮಿಡಿಯ ತೊಟ್ಟು ಮುರಿಯುವ ಕೆಲಸ ನನ್ನ ಪಾಲಿಗೆ. ತೊಟ್ಟು ತೆಗೆದ ಮಿಡಿಗಳನ್ನು ಅತ್ತೆ ದೊಡ್ಡ ದೊಡ್ಡ ಮಣ್ಣಿನ ಮಡಕೆಗಳಿಗೆ ಸುರುವಿ ಅದಕ್ಕೆ ಪುಡಿ ಮಾಡಿದ ಉಪ್ಪು$ಬೆರೆಸಿ ಇಡುತ್ತಿದ್ದರು. ಇಷ್ಟಕ್ಕೇ ಮುಗಿಯಲಿಲ್ಲ. ಅದಕ್ಕೆ ಪ್ರತಿದಿನ ಕೈ ಹಾಕಬೇಕಿತ್ತು. ಒದ್ದೆ ಕೈ ಹಾಕಿದಿರೋ ಉಪ್ಪಿನಕಾಯಿ ಕೆಡುವುದು ಗ್ಯಾರಂಟಿ. ವಾರ ಕಳೆದಾಗ ಮಿಡಿ ಚಿರುಟಿ ಸಣ್ಣಗೆ ಆಗುತ್ತಿತ್ತು. ಹಸಿರು ಬಣ್ಣ ಹೋಗಿ ನಸುಹಳದಿ ಬಣ್ಣಕ್ಕೆ ತಿರುಗುತ್ತಿತ್ತು. ಹೀಗಾದಾಗ ಉಪ್ಪಿನಕಾಯಿ ಹಾಕಲು ಸಿದ್ಧವಾಗಿದೆ ಎಂದು ಅರ್ಥ. ಚಿರುಟಿದ ಮಿಡಿಗಳನ್ನು ಅತ್ತೆ ಬೆಳಗ್ಗೆ ಎದ್ದ ತಕ್ಷಣ ಮಡಕೆಯಿಂದ ಸೋಸಿ ತೆಗೆದು ಬೆತ್ತದ ಬುಟ್ಟಿಗೆ ಹಾಕುತ್ತಿದ್ದರು. ಮಡಕೆಯಲ್ಲಿರುವ ಮಿಡಿ ಅದ್ದಿದ ಸೊನೆಮಿಶಿತ ಉಪ್ಪು$ನೀರನ್ನು ತೆಗೆದು ಕುದಿಸಿ ತಣಿಸಿ ಇಡುತ್ತಿದ್ದರು. ಆ ಉಪ್ಪು$ನೀರು ಸಾಕಾಗದಿದ್ದರೆ ಎಂದು ಬೇರೆ ಉಪ್ಪು$ನೀರನ್ನೂ ಮಾಡುತ್ತಿದ್ದರು. ತಣಿದ ಉಪ್ಪು$ನೀರಲ್ಲಿ ಸಾಸಿವೆಯನ್ನು ನುಣ್ಣಗೆ ರುಬ್ಬುತ್ತಿದ್ದರು. ರುಬ್ಬಿದ ಸಾಸಿವೆಗೆ ಮೆಣಸಿನ ಪುಡಿ, ಇಂಗು, ಅರಸಿನ ಪುಡಿ ಸೇರಿಸಿ ಬೆರೆಸಿ ಉಪ್ಪಿನಕಾಯಿ ಹಿಟ್ಟು ತಯಾರಿಸುತ್ತಿದ್ದರು. ಈ ಹಿಟ್ಟಿಗೆ ಮಾವಿನಮಿಡಿ ಬೆರೆಸಿ ಭರಣಿಗೆ ತುಂಬಿಸಿದರೆ ಉಪ್ಪಿನಕಾಯಿ ಹಾಕುವ ಕೆಲಸ ಮುಗಿದ ಹಾಗೆ. ಆಮೇಲೆ ಬಿಳಿ ಬಟ್ಟೆಯಿಂದ ಭರಣಿಯ ಬಾಯಿಕಟ್ಟಿ ಅಟ್ಟದಲ್ಲಿ ಇಡುತ್ತಿದ್ದರು. ಹೀಗೆ ಇಟ್ಟ ಉಪ್ಪಿನಕಾಯಿ ಎರಡು ವರ್ಷದವರೆಗೂ ತಾಜಾ ಆಗಿ ಇರುತ್ತಿತ್ತು. ಅದನ್ನು ನಾವು ಯಾರೂ ಮುಟ್ಟುವ ಹಾಗೆ ಇರಲಿಲ್ಲ. ಬಡಿಸುವ ಬಾಟಲಿಯಲ್ಲಿ ಮುಗಿದಾಗ ಅತ್ತೆಯೇ ತೆಗೆಯುವ ಕ್ರಮ. ಏಕೆಂದರೆ ಎಲ್ಲರೂ ಮುಟ್ಟಿದರೆ ನೀರಪಸೆ ತಾಗಿ ಭರಣಿಗೆ ಹುಳ ಬೀಳಬಹುದೆಂಬ ಭಯ. ಎಷ್ಟು ಜಾಗ್ರತೆ ಮಾಡಿದರೂ ಕೊಯ್ಯುವಾಗ ಕೆಲವು ಮಿಡಿಗಳು ನೆಲಕ್ಕೆ ಬೀಳುತ್ತಿದ್ದವು. ಅವುಗಳನ್ನು ಹೆಕ್ಕಿ ಪ್ರತ್ಯೇಕವಾಗಿ ಇಡುತ್ತಿದ್ದರು. ಏಕೆಂದರೆ ಅವುಗಳು ಎತ್ತರದಿಂದ ಬಿದ್ದಿರುವ ಕಾರಣ ನಜ್ಜುಗುಜ್ಜಾಗಿರುತ್ತಿದ್ದವು. ಅವುಗಳನ್ನು ಮಿಡಿ ಉಪ್ಪಿನಕಾಯಿಗೆ ಬಳಸಿದರೆ ಅಂಥ ಉಪ್ಪಿನಕಾಯಿ ಹೆಚ್ಚು ಸಮಯ ಬಾಳಿಕೆ ಬರುತ್ತಿರಲಿಲ್ಲ. ಈ ಮಿಡಿಗಳನ್ನು ನಾಲ್ಕು ತುಂಡುಮಾಡಿ ಕಡಿಭಾಗ ಎಂಬ ಹೆಸರಿನ ಉಪ್ಪಿನಕಾಯಿಯನ್ನು ಅತ್ತೆ ತಯಾರಿಸುತ್ತಿದ್ದರು. ಮಿಡಿ ಉಪ್ಪಿನಕಾಯಿ ಹಾಕಿದ ತಕ್ಷಣ ತಿನ್ನಲು ಯೋಗ್ಯವಾಗಿರುವುದಿಲ್ಲ. ಕಡಿಭಾಗ ಉಪ್ಪಿನಕಾಯಿಯನ್ನು ತಯಾರಿಸಿದ ತಕ್ಷಣ ಉಪಯೋಗಿಸಬಹುದು. ಮಿಡಿ ಉಪ್ಪಿನಕಾಯಿ ಬಳಸಬೇಕಾದರೆ ಹಾಕಿ ಕನಿಷ್ಟ ಒಂದು ತಿಂಗಳಾದರೂ ಕಳೆಯಬೇಕು. ಆಗ ಮಿಡಿಯ ಹುಳಿ ರಸಕ್ಕೆ ಸೇರಿ, ರಸದ ಖಾರ ಮಿಡಿಗೆ ಸೇರಿ ಒಂದು ಅದ್ಭುತ ರುಚಿ ನಿರ್ಮಾಣವಾಗಿರುತ್ತದೆ. ಬಲಿತ ಕಾಡುಮಾವಿನಕಾಯಿಯನ್ನು ಇಡಿಯಾಗಿ ಬೇಯಿಸಿ ಅತ್ತೆ ಹಾಕುವ “ಇಡಿಕ್ಕಾಯಿ’ ಎಂಬ ಉಪ್ಪಿನಕಾಯಿಯೂ ಬಹಳ ರುಚಿ ಇರುತ್ತಿತ್ತು. ಕಾಡುಮಾವಿನಹಣ್ಣನ್ನು ಬೇಯಿಸಿ ಸಾಸಿವೆ, ಮೆಂತೆ, ಮೆಣಸನ್ನು ಹುರಿದು ಪುಡಿಮಾಡಿ ಅರಸಿನಪುಡಿ, ಉಪ್ಪು$ ನೀರಿನೊಂದಿಗೆ ಬೆರೆಸಿ ಮಾಡಿದ ಹಣ್ಣು ಉಪ್ಪಿನಕಾಯಿ ಗಂಜಿ ಊಟಕ್ಕೆ ಹೇಳಿ ಮಾಡಿಸಿದಂತೆ ಇರುತ್ತಿತ್ತು. ಮಾವನಿಗೆ ಹಲ್ಲು ಗಟ್ಟಿ ಇರದುದರಿಂದ ಮಿಡಿ ಉಪ್ಪಿನಕಾಯಿ ತಿನ್ನಲು ಕಷ್ಟವಾಗುತ್ತದೆ ಎಂದು ಅತ್ತೆ ಬಲಿತ ಕಾಡುಮಾವಿನ ನಾಲ್ಕೂ ಬದಿ ಕೆತ್ತಿ ಬೇಯಿಸಿ “ಬೇಶಿದ ಕೆತ್ತೆ’ ಎಂಬ ಮೆತ್ತನೆಯ ಉಪ್ಪಿನಕಾಯಿಯನ್ನೂ ಮಾಡುತ್ತಿದ್ದರು. ಇದನ್ನು ಬೇಯಿಸದೆಯೆ ಮಾಡುವ ಹಸಿ ಕೆತ್ತೆ ಎಂಬ ಉಪ್ಪಿನಕಾಯಿಯೂ ದಿವ್ಯವಾಗಿತ್ತು. ಅತ್ತೆ ಭರಣಿಗಟ್ಟಲೆ ಉಪ್ಪಿಕಾಯಿ ಹಾಕುತ್ತಿದ್ದರೂ ಮಾರಾಟದ ಉದ್ದೇಶ ಇರಲಿಲ್ಲ. ಮದುವೆಯಾಗಿ ಹೋದ ಹೆಣ್ಣುಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೆ ಮನೆಗೆ ಬಂದ ಅತಿಥಿಗಳು ಯಾರಾದರೂ ಅತ್ತೆಯಲ್ಲಿ “”ನಿಮ್ಮ ಉಪ್ಪಿನಕಾಯಿ ಚೆನ್ನಾಗಿದೆ” ಎಂದು ಹೇಳಿದರೆ ಸಾಕು ಅವರು ಹೋಗುವಾಗ ಬಾಟಿ ತುಂಬ ಉಪ್ಪಿನಕಾಯಿ ತುಂಬಿಸಿಕೊಟ್ಟು ಕಳುಹಿಸುತ್ತಿದ್ದರು. ಈಗ ಉಪ್ಪಿನಕಾಯಿ ಹಾಕುವ ಸರದಿ ನನ್ನದು. ಕಾಡು ಇಡೀ ಬೋಳಾಗಿದೆ. ಮೊದಲಿ ನಂತೆ ಮಾವಿನಮರಗಳಿಲ್ಲ. ಇದ್ದರೂ ಅಲ್ಲೊಂದು ಇಲ್ಲೊಂದು. ಮರ ಹತ್ತುವವರೂ ಇಲ್ಲ. ಕೇಳಿದ ಸಂಬಳ ಕೊಟ್ಟು ಕೊಯ್ಯಿಸುವ ತಾಕತ್ತು ನಮಗೂ ಇಲ್ಲ. ಅತ್ತೆಯ ಉಪ್ಪಿನಕಾಯಿ ಜಗತ್ತು ಕಾಲಪ್ರವಾಹದಲ್ಲಿ ಕೊಚ್ಚಿ ಹೋಯಿತು ಎಂದು ನನಗೆ ಮಿಡಿ ಉಪ್ಪಿನಕಾಯಿ ಹಾಕುವ ಈ ಸಮಯದಲ್ಲಿ ಅನಿಸುತ್ತದೆ. ಸಹನಾ ಕಾಂತಬೈಲು