ಧಾರವಾಡ: ಅತ್ಯದ್ಬುತ್ ಆಗಿರುವ ಜಗತ್ತನ್ನು ಅರಿತುಕೊಳ್ಳುವುದೇ ಮನುಷ್ಯನ ಶ್ರೇಷ್ಠ ಸಾಧನೆ ಆಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಇಲ್ಲಿಯ ಕವಿವಿ ಆವರಣದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆರ್ಶೀವಚನ ನೀಡಿದರು.
ಜಗತ್ತಿನ ನೀತಿ-ನಿಯಮಗಳನ್ನು ಅರಿತುಕೊಳ್ಳುವುದೇ ಮನುಷ್ಯನ ಶ್ರೇಷ್ಠ ಜೀವನದ ಸಾಧನೆ ಎಂದರು. ಜಗತ್ತನ್ನು ಕಾಣಬೇಕೆಂದರೆ ವಿಜ್ಞಾನ ಕೇಂದ್ರಕ್ಕೆ ಬರಬೇಕು. ಕಲಿತವರಿಗೆ ತೋರಿಸುವುದಕ್ಕಿಂತ ಗ್ರಾಮೀಣ ಭಾಗದ ಜನರಿಗೆ ತೋರಿಸಿ, ತಿಳಿಯಪಡಿಸಿ ವಿವರಿಸಿದರೆ ಒಳ್ಳೆಯ ಕೆಲಸ ಮಾಡಿದಂತಾಗುವುದು.
ಮನುಷ್ಯನ ದೇಹದಲ್ಲಿರುವ ವೈರಿಗಳನ್ನು ಎದುರಿಸಲು ದೇಹ ಮಾಡುವ ಸೇನೆಯ ರಚನೆ ಮತ್ತು ಯುದ್ಧವನ್ನು ನೋಡಿ ಮನಸ್ಸಿಗೆ ರೋಮಾಂಚನವಾಯಿತು. ಈಗಾಗಲೇ ವಿಜ್ಞಾನ ಕೇಂದ್ರದಿಂದ ಅನೇಕ ವೈಜ್ಞಾನಿಕ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ ಎಂದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಷಯದ ಗ್ರಹಿಕೆ ಶಕ್ತಿ ಇರುತ್ತದೆ.
ಅವರಿಗೆ ಮೂಲ ವಿಜ್ಞಾನದ ಬಗ್ಗೆ ಮಾಹಿತಿ ತಲುಪುವ ವ್ಯವಸ್ಥೆ ಆಗಬೇಕು. ಎಲ್ಲ ವರ್ಗದವರೂ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿರುವ ಮಾಹಿತಿ ಪಡೆದುಕೊಂಡು ಜ್ಞಾನದ ದಾಹವನ್ನು ತೀರಿಸಿಕೊಳ್ಳಬೇಕು ಎಂದರು. ರಾಮಕೃಷ್ಣ ಮಠದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಗ್ರಾಮಾಂತರ ಮಕ್ಕಳಿಗೆ ಒಂದು ವರ್ಷದಲ್ಲಿ ಅರ್ಥ ಮಾಡಿಸಲಿಕ್ಕೆ ಆಗದೇ ಇರುವ ಮೂಲ ವಿಜ್ಞಾನ.
ಇಲ್ಲಿ ಬಂದು ಈ ವಿಜ್ಞಾನ ಕೇಂದ್ರ ವೀಕ್ಷಿಸಿದರೆ ಎರಡೇ ತಾಸಿನಲ್ಲಿ ಕಲಿಯಬಹುದು. ಆಧ್ಯಾತ್ಮಿಕತೆಯ ಛಾಯೆ ಇಲ್ಲದೆ ವಿಜ್ಞಾನ ಕುಂಟು. ವಿಜ್ಞಾನವನ್ನು ಒಳ್ಳೆಯ ಹಾದಿಯಲ್ಲಿ ಉಪಯೋಗಿಸಿಕೊಳ್ಳಲು ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ.
ಅದಕ್ಕೆ ಎರಡೂ ಕಲಿತು, ಅರ್ಥ ಮಾಡಿಕೊಂಡು ನಿಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ| ಕೆ.ಬಿ. ಗುಡಸಿ ಅವರು, ವಿಜ್ಞಾನ ಕೇಂದ್ರ ನಡೆದುಬಂದ ದಾರಿ ಹಾಗೂ ಮುಂಬರುವ ಯೋಜನೆಗಳ ಕುರಿತು ಕಿರು ಪರಿಚಯ ಮಾಡಿಕೊಟ್ಟರು.