Advertisement

ಜಿಲ್ಲೆಯ ಸಾಧನೆ ನಿರಾಶಾದಾಯಕ: ಸಂಸದ ಜೋಶಿ

01:19 PM Jun 06, 2017 | Team Udayavani |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಉಳಿತಾಯ ಖಾತೆ ಹೊಂದಿದ ಖಾತೆದಾರರೆಲ್ಲರಿಗೂ ಕೇಂದ್ರ ಸರ್ಕಾರದ ವಿಮಾ ಯೋಜನೆಗಳನ್ನು ತಲುಪಿಸುವ ದಿಸೆಯಲ್ಲಿ ಬ್ಯಾಂಕುಗಳು ಕಾರ್ಯೋನ್ಮುಖವಾಗಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. 

Advertisement

ಇಲ್ಲಿನ ಬೈಲಪ್ಪನವರ ನಗರದ ಐಎಂಎ ಹಾಲ್‌ ನಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ 2017-18 ಸಾಲಿನ ಜಿಲ್ಲಾ ಸಾಲ ಯೋಜನೆ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 

ಪ್ರಧಾನಮಂತ್ರಿ ಜೀವನ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್‌ ಪಿಂಚಣಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಬ್ಯಾಂಕುಗಳು ಮಾಡಬೇಕು. ಜನರ ಒಳಿತಿಗೆ ಅನುಷ್ಠಾನ ಗೊಳಿಸಿದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು. 

ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಗಾಗಿ ಕೇವಲ 12 ರೂ. ವಾರ್ಷಿಕ ಕಂತು ತುಂಬುವುದು ಯಾರಿಗೂ ಹೊರೆಯಾಗುವುದಿಲ್ಲ. ಉಳಿತಾಯ ಖಾತೆದಾರರಿಗೆ ವಿಮೆಯ ಪ್ರಯೋಜನವನ್ನು ಮನವರಿಕೆ ಮಾಡಿಕೊಟ್ಟು ವಿಮೆ ಪಡೆಯುವಂತೆ ತಿಳಿಸಬೇಕು ಎಂದರು. ಮುದ್ರಾ ಯೋಜನೆಗೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಅರ್ಹರಿಗೆ ಸಾಲ ನೀಡಲು ಹಿಂದೇಟು ಹಾಕಬಾರದು.

ಮುದ್ರಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯ ಅಂಕಿ-ಅಂಶ ನಿರಾಶಾದಾಯಕವಾಗಿದೆ. ಬೀದರ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದ್ದರೆ ಜಿಲ್ಲೆಯಲ್ಲಿ ಕೇವಲ 17763 ಜನರಿಗೆ 194.45 ಕೋಟಿ ರೂ. ಸಾಲ ನೀಡಲಾಗಿದೆ. ಲೀಡ್‌ ಬ್ಯಾಂಕ್‌ ಮೂರೂ ಯೋಜನೆಗಳ ಅನುಷ್ಠಾನಕ್ಕಾಗಿ ಬ್ಯಾಂಕ್‌ಗಳಿಗೆ ಗುರಿ ನಿಗದಿಪಡಿಸಬೇಕು ಎಂದು ಸೂಚಿಸಿದರು. 

Advertisement

ಪ್ರಧಾನಮಂತ್ರಿ ಬೆಳೆವಿಮೆ ಯೋಜನೆಯಲ್ಲಿ ಕೆಲ ರೈತರಿಗೆ ವಿಮಾ ಹಣ ನೀಡಿಕೆಯಲ್ಲಿ ಸಮಸ್ಯೆಯಾಗಿದೆ. ಜಿಲ್ಲೆಗೆ 172 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ ಕೇವಲ 72 ಕೋಟಿ ರೂ. ಮಾತ್ರ ರೈತರಿಗೆ ನೀಡಲಾಗಿದೆ. ಉಳಿದ ಮೊತ್ತ ನೀಡುವಂತೆ ವಿಮಾ ಕಂಪನಿಗೆ ತಿಳಿಸಬೇಕು ಎಂದರು. 

ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ಬ್ಯಾಂಕ್‌ ಅಧಿಕಾರಿಗಳು ಕೇವಲ ತಮ್ಮ ಕೆಲಸ ಮಾಡಿದರೆ ಸಾಲದು, ಸಾಮಾಜಿಕ ಜವಾಬ್ದಾರಿ ಅರಿತು ಈ ದಿಸೆಯಲ್ಲಿ ಕಾಯೋನ್ಮುಖರಾಗಬೇಕು. ಪ್ರಧಾನಮಂತ್ರಿ ಜೀವನ ಜ್ಯೋತಿ, ಅಟಲ್‌ ಪಿಂಚಣಿ ವಿಮೆ ಹೆಚ್ಚೆಚ್ಚು ಜನರಿಗೆ ತಲುಪುವಂತೆ ಮಾಡಬೇಕು ಎಂದರು. 

ಪ್ರಗತಿ ವರದಿ ನೀಡದ ಬ್ಯಾಂಕ್‌ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದ್ಯತಾ ಕ್ಷೇತ್ರದಲ್ಲಿ ಶೇ.20ರಷ್ಟು ಗುರಿ ಸಾಧಿಸದ ಬ್ಯಾಂಕ್‌ ಗಳ ವಿರುದ್ಧ ಆರ್‌ಬಿಐಗೆ ದೂರು ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿರಲಿ ಅಥವಾ ಖಾಸಗಿ ಬ್ಯಾಂಕ್‌ಗಳಿರಲಿ ಎಲ್ಲ ಬ್ಯಾಂಕುಗಳು  ಆರ್‌ಬಿಐ ಮಾರ್ಗಸೂಚಿಯಂತೆ ಕೆಲಸ ಮಾಡಬೇಕು.

ಇಲ್ಲದಿದ್ದರೆ ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚನೆ ನೀಡಿದರು. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಬ್ಯಾಂಕ್‌ಗಳ ಶಾಖಾ  ವ್ಯವಸ್ಥಾಪಕರಿಗೆ ವರ್ಷಕ್ಕೊಮ್ಮೆ ಕಾರ್ಯಾಗಾರ ಆಯೋಜಿಸಬೇಕು ಎಂದು ಸೂಚನೆ ನೀಡಿದರು. 

ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಮಾತನಾಡಿ, ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವು ನಿರಂತರ ಶ್ರಮಿಸುತ್ತಿದ್ದು, ಈ ಅಭಿಯಾನಕ್ಕೆ ಬ್ಯಾಂಕ್‌ ನವರ ಸಹಕಾರ ಅಗತ್ಯವಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳಲು 2 ದಿನಗಳಲ್ಲಿ ಸಾಲ ನೀಡಬೇಕು. ಖಾತೆದಾರರ ಕೆವೈಸಿ ದಾಖಲೆಗಳು ಬ್ಯಾಂಕ್‌ನವರ ಹತ್ತಿರ ಇರುವುದರಿಂದ ಸುಲಭವಾಗಿ ಅವರಿಗೆ ಶೌಚಾಲಯ ನಿರ್ಮಾಣಕ್ಕೆ ಸಾಲ ನೀಡಬೇಕು ಎಂದರು. 

ಬ್ಯಾಂಕ್‌ಗಳು ತಮ್ಮ ಸಾಮಾಜಿಕ ಸೇವಾ ಜವಾಬ್ದಾರಿ(ಸಿಎಸ್‌ಆರ್‌)ಅನುದಾನದಲ್ಲಿ ಒಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಂದಾದರೂ ಸಮುದಾಯ ಶೌಚಾಲಯ ನಿರ್ಮಿಸಬೇಕು ಎಂದರು. ರಿಜರ್ವ್‌ ಬ್ಯಾಂಕ್‌ ಅಧಿಕಾರಿ ಉದಯಶಂಕರ ಸಿಂಗ್‌, ನಬಾರ್ಡ್‌ ಬ್ಯಾಂಕ್‌ ಪ್ರತಿನಿಧಿ ರಾಮನ್‌ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next