Advertisement
ಜೆಡಿಎಸ್ ಜತೆಗಿನ ಮೈತ್ರಿಯ ಬಳಿಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚು ಕಳೆಗಟ್ಟಿದೆ. ಮೈಸೂರು, ಮಂಡ್ಯ, ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ “ಮೈತ್ರಿ’ ಗೆಲುವಿನ ಹಿಂದೆ ಜೆಡಿಎಸ್‌ನ ಕೊಡುಗೆ ಗಣನೀಯವಾಗಿದೆ.
Related Articles
Advertisement
ಸಂಘಟನೆ ಅನಿವಾರ್ಯ :2019ರಲ್ಲಿ ಲೋಕಸಭಾ ಚುನಾವಣೆ ನಡೆಯುವಾಗ ಬಿಜೆಪಿ ಸಂಘಟನಾತ್ಮಕವಾಗಿ ಹೆಚ್ಚು ಬಲಶಾಲಿಯಾಗಿತ್ತು. ವಿಧಾನಸಭೆಯಲ್ಲಿ ಪಕ್ಷವನ್ನು 103 ಸ್ಥಾನದವರೆಗೆ ತಲುಪಿಸಿದ್ದ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚಿಸದೇ ಇದ್ದರೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದು, ರಾಜ್ಯಪೂರ್ತಿ ಸುತ್ತಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಅವಕಾಶ ಸ್ವಲ್ಪದರಲ್ಲೇ ತಪ್ಪಿ ಹೋಗಿದ್ದರಿಂದ ಕಾರ್ಯಕರ್ತರ ಪಡೆ ಹಠ ಕಟ್ಟಿ ಲೋಕಸಭಾ ಚುನಾವಣೆ ನಡೆಸಿತ್ತು. ಆದರೆ ಈ ಬಾರಿ ಪಕ್ಷ ಸಂಘಟನಾತ್ಕವಾಗಿ ಸೊರಗಿ ಹೋಗಿತ್ತು. ವಿಧಾನಸಭಾ ಚುನಾವಣೆ ಪೂರ್ವದಲ್ಲೇ ಆರಂಭವಾದ ಒಳಜಗಳ ಇದುವರೆಗೂ ಮುಂದುವರಿದಿತ್ತು. ಹೀಗಾಗಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಸವಾಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮೇಲಿದೆ. ಮುನಿಸಿಕೊಂಡ ಹಿರಿಯರ ವಿಶ್ವಾಸ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಸಂಖ್ಯಾಬಲದ ದೃಷ್ಟಿಯಿಂದ ಪ್ರಬಲರಾಗಿರುವ ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಬೆಳೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಂಥವರನ್ನು ಪಕ್ಕಕ್ಕಿಟ್ಟು ಭವಿಷ್ಯದಲ್ಲಿ ಪಕ್ಷ ಕಟ್ಟುವುದು ಕಷ್ಟ. ಹೀಗಾಗಿ ಸಂಘಟನೆ ಹಾಗೂ ಹಿರಿಯರ ವಿಶ್ವಾಸ ಗಳಿಸುವ ಅನಿವಾರ್ಯತೆ ರಾಜ್ಯ ಘಟಕದ ಮೇಲೆ ಬಿದ್ದಿದೆ. ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರದ ಕೌಂಟ್‌ಡೌನ್ ಪ್ರಾರಂಭ ಎಂಬ ಹೇಳಿಕೆಗಳನ್ನು ಪಠಿಸುವ ದುಸ್ಸಾಹಸಕ್ಕೆ ಕೈ ಹಾಕುವ ಬದಲು ಪಕ್ಷದ ಕೇಡರ್‌ನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಈಗ ಬಿಜೆಪಿಯ ಮುಂದೆ ಇದೆ. -ರಾಘವೇಂದ್ರ ಭಟ್