Advertisement

ಮಂಗನ ಹಾವಳಿಗೆ ತತ್ತರಿಸಿದ ಜನತೆ

10:44 AM Mar 08, 2019 | Team Udayavani |

ಹುಮನಾಬಾದ: ನಗರದಲ್ಲಿ ಕೆಲವು ತಿಂಗಳಿಂದ ಸಮಸ್ಯೆಯಾಗಿ ಪರಿಣಮಿಸಿರುವ ಮಂಗಗಳ ದಾಳಿಯಿಂದ ಬೇಸತ್ತಿರುವ ಸಾರ್ವಜನಿಕರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿರುವುದರಿಂದ
ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ದಿನ ಬೆಳಗಾದರೆ ಪಟ್ಟಣದ ಕಟ್ಟಡಗಳ ಛಾವಣಿಗಳ ಮೇಲೆ ಮಂಗಗಳದ್ದೇ ದರ್ಬಾರು. ಕಟ್ಟಡದ ಮೇಲಿನ ನೀರಿನ ಟ್ಯಾಂಕ್‌ ಮುಚ್ಚಳಿಕೆ ಕಿತ್ತೆಸೆಯುವುದು. ಪೈಪ್‌ ಮುರಿಯುವುದು, ಕೆಲವೊಮ್ಮೆ ನೇರ ಮನೆಯೊಳಗೆ ನುಗ್ಗಿ ಬ್ರೆಡ್‌, ಹಣ್ಣು, ರೊಟ್ಟಿ ಮತ್ತಿತರ ಆಹಾರ ಪದಾರ್ಥಗಳನ್ನು ಹೊತ್ತೂಯ್ಯುತ್ತಿವೆ. ಮನೆ ಬಾಗಿಲು ತೆರೆದಿಡದಿದ್ದರೆ ಕಿಟಕಿ ಬಳಿ ಕುಳಿತು ತಿನ್ನಲು ಏನಾದರೂ ಕೊಡುವವರೆಗೆ ಅಲ್ಲಿಂದ ಕದಲುವುದಿಲದಲ.
ಕಿಟಕಿಯಿಂದಲೇ ಮಹಿಳೆಯರು, ಮಕ್ಕಳನ್ನು ಹೆದರಿಸುತ್ತವೆ.

ಸಮಸ್ಯೆ ಇಷ್ಟೇ ಅಲ್ಲ ಮನೆ ಅಂಗಳದಲ್ಲಿ ಸುಮ್ಮನೆ ಕುಳಿತ ಮಹಿಳೆಯರು, ಬೀದಿಯಲ್ಲಿ ಆಡುವ ಮಕ್ಕಳಿಗೆ ಮಂಗಗಳು ಕಚ್ಚಿ ಗಂಭೀರ ಗಾಯಗೊಳಿಸುತ್ತಿವೆ. ಮೂರು ತಿಂಗಳ ಹಿಂದಷ್ಟೆ ಮೋಳಕೇರಾ ಗ್ರಾಮದಲ್ಲಿ ಮೋಳಿಗೆ ಮಾರಯ್ಯ ಗುಹೆಯ ಅರ್ಚಕ ವಿರೂಪಾಕ್ಷಯ್ಯ ಸ್ವಾಮಿ ಅವರಿಗೆ ಜೋರಾಗಿ ಒದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹಳ್ಳಿಖೇಡ(ಬಿ) ಪಟ್ಟಣದ ಕರಣಕುಮಾರ ಸೇರಿ ಸುಮಾರು 13 ಜನರ ಕಾಲಿಗೆ ಮಂಗಗಳು ಕಚ್ಚಿವೆ.

ಹುಮನಾಬಾದ ಪಟ್ಟಣದ ಜೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುರುಶಾಂತ ವಾರದ ಅವರ ತಾಯಿ ಕಾಲಿಗೂ ಮಂಗ ಕಚ್ಚಿ ಗಂಭೀರ ಗಾಯಗೊಳಿಸಿದೆ. ಅದು ಮರೆಯುವ ಮುನ್ನವೇ ಮಂಗಳವಾರ ಸಂಜೆ 7ರ ಸುಮಾರು ನಗರದ ತೋಪಗಲ್ಲಿಯಲ್ಲಿ ತಮ್ಮ ಪುತ್ರ ಅಶೋಕ ಹಿರೇಮಠ ಅವರ ಮನೆ ಅಂಗಳದಲ್ಲಿ ಕುಳಿತಿದ್ದ ಗುರುಶಾಂತಯ್ಯ ಹಿರೇಮಠ ಅವರ ಮೇಲೆ ದಾಳಿ ಮಾಡಿರುವ ಮಂಗ ತೊಡೆಗೆ ಗಂಭೀರ ಗಾಯಗೊಳಿಸಿದ್ದು, ಸದ್ಯ ಬೀದರ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಿಲು ಮುಚ್ಚಿ ಕುಳಿತ ಮಹಿಳೆಯರು: ಮಂಗನ ಕಾಟ ಹೆಚ್ಚಿದ್ದರಿಂದ ಮಹಿಳೆಯರು, ಮಕ್ಕಳು ಮನೆ ಹೊರಗೆ ಬರದೇ ಬಾಗಿಲ ಚಿಲಕ ಹಾಕಿಕೊಂಡೇ ಕುಳಿತುಕೊಳ್ಳವುವಂತಾಗಿದೆ. ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಮನೆ ಪಾಠಕ್ಕೂ ಕಳಿಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಮನೆಯಲ್ಲಿನ ಮಕ್ಕಳು, ಹಿರಿಯರ ಗತಿ ಏನು? ಎನ್ನುತ್ತಾರೆ ಸಂಜೀವಕುಮಾರ ಶೀಲವಂತ, ಕಲ್ಪನಾ ಕಠಾರಮಠ…, ಪವನ ಘವಾಳ್ಕರ, ಬಸವರಾಜ ಅಕ್ಕಪ್‌ ಅವರು.

Advertisement

ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ: ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣದ ನಿವಾಸಿಗಳು ಎಚ್ಚರಿಸಿದ್ದಾರೆ.

ಪ್ರಾಣಿಗಳು ವಿನಾಕಾರಣ ಯಾರ ಮೇಲೂ ದಾಳಿ ಮಾಡುವುದಿಲ್ಲ. ಮನೆ ಅಂಗಳ, ಕಿಟಕಿ ಹತ್ತಿರ ಬರುವ ಮಂಗಗಳಿಗೆ ಬಿಸ್ಕತ್ತು, ರೊಟ್ಟಿ ಕೊಡುತ್ತಾರೆ. ಹಾಗೆ ಕೊಡುವವರು ಒಂದೊಮ್ಮೆ ನೀಡದಿದ್ದಾಗ ಹೀಗೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಕಚ್ಚಿದ ಮಂಗನನ್ನು ಹಿಡಿಯಲು ಬೀದರ್‌ ಸಮೀಪದ ಕೊಳಾರ ಗ್ರಾಮದ ವಿಶೇಷ ತಂಡವನ್ನು ಶುಕ್ರವಾರವೇ ಆಹ್ವಾನಿಸಿ, ಸಿಕ್ಕ ತಕ್ಷಣ ಸ್ಥಳಾಂತರಿಸುತ್ತೇವೆ. 
 ರಮೇಶ ಕನಕಟಕರ್‌, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next