Advertisement
ಜಾತ್ರೆ ಸ್ವರೂಪ: ಹಾಸನ, ಮಂಡ್ಯ, ಕೋಲಾರ, ರಾಮನಗರ ಜಿಲ್ಲೆಗಳಿಂದ ಕೃಷಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ರೈತರು ನೂರಾರು ಬಸ್, ಕಾರುಗಳಲ್ಲಿ ಆಗಮಿಸಿದ್ದರು. ಇದರಿಂದಾಗಿ ಮುಖ್ಯದ್ವಾರದ ಒಂದು ಕಿ.ಮೀ. ನಂತರ ಆರಂಭಗೊಂಡು ಮೇಳದ ಮುಖ್ಯ ವೇದಿಕೆ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
Related Articles
Advertisement
ಮುದ್ದೆ ಊಟ-ಬಿರಿಯಾನಿ ಸ್ಪೆಷಲ್: ಕೃಷಿ ಮೇಳದಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ್ದು, ಫುಡ್‌ಕೋರ್ಟ್ ಮತ್ತು ಮುದ್ದೆ ಊಟ. ಮಧ್ಯಾಹ್ನ 12 ಗಂಟೆಯಿಂದಲೇ ಮುದ್ದೆ ಊಟಕ್ಕೆ ಜನರು ಸಾಲುಗಟ್ಟಿ ನಿಂತಿದ್ದರು. ತಲಾ 50ರೂ.ಗಳಿಗೆ ಮುದ್ದೆ, ಅನ್ನ, ಮೊಸರನ್ನ, ಒಂದು ಪಲ್ಯ,
ಕಡಲೆಕಾಳು, ಹೆಸರುಕಾಳಿನಿಂದ ತಯಾರಿಸಿದ ಸಾರು, ತರಕಾರಿಯ ಸಾಂಬಾರು, ಉಪ್ಪಿನಕಾಯಿ ಊಟಕ್ಕೆ ಹಲವರು ಮಾರುಹೋಗಿದ್ದರು. ಒಂದು ಪಂಕ್ತಿಗೆ ಸುಮಾರು 600ರಿಂದ 800 ಜನರು ಏಕಕಾಲದಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇತ್ತಾದರೂ, ಎಲ್ಲಿಯೂ ಗೊಂದಲ, ಗದ್ದಲ ಇರಲಿಲ್ಲ. ಶಾಂತಿಯುತವಾದ ಭೋಜನ ವ್ಯವಸ್ಥೆ ಜನರ ಮೆಚ್ಚುಗೆ ಗಳಿಸಿತು.
ಇನ್ನೊಂದೆಡೆ ಸುಮಾರು 40 ಮಳಿಗೆಗಳಲ್ಲಿ ತರೇವಾರಿ ತಿಂಡಿ ತಿನಿಸುಗಳು, ವಿವಿಧ ಬಗೆಯ ಬಿರಿಯಾನಿಗಳು, ಕಬಾಬ್, ಚಿಕನ್-ಮಟನ್ ಫ್ರೈ, ಮೊಲದ ಮಾಂಸದ ಕಬಾಬ್, ಮೀನಿನ ಫ್ರೈ, ಚಿಕನ್ ಮಸಾಲ ಫ್ರೈ, ಎಗ್ ಬೋಂಡಾ, ನಾಟಿಕೋಳಿ ಸಾಂಬರ್ ಹಳ್ಳಿಯ ರೈತರನ್ನು ಮುಗಿಬೀಳುವಂತೆ ಮಾಡಿತ್ತು.
ಕೃಷಿ ಮೇಳದಲ್ಲೂ ಸೆಲ್ಫಿ ಆರ್ಭಟ ಜೋರಾಗಿಯೇ ಇತ್ತು. ಕಪ್ಪುರಕ್ತದ ಖಡಕ್‌ನಾಥ್ ಕೋಳಿ, ಮಲೆನಾಡು ಗಿಡ್ಡಿ, ಹಳ್ಳಿಕಾರ್ ತಳಿಯ ಹೋರಿಗಳು, ಅತ್ಯಾಧುನಿಕ ಯಂತ್ರೋಪಕರಣಗಳು, ಅಲಂಕಾರಿಕ ಗಿಡಗಳ ಮುಂದೆ ನಿಂತು ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರಿಗೆ ವಯಸ್ಸಿನ ಮಿತಿ ಇರಲಿಲ್ಲ. ಮಹಿಳೆಯರು, ಮಕ್ಕಳು, ಯುವತಿಯರು, ಯುವಕರು ಎಲ್ಲರೂ ಸೆಲ್ಫಿಗೆ ಮಾರುಹೋಗಿದ್ದರು.
ಕೃಷಿ ಮೇಳದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ಪ್ರಮುಖ ಆಕರ್ಷಣೆ. ವಿವಿಧ ತಳಿಗಳ ಬೀಜಗಳು, ಗಿಡಗಳು ಮತ್ತು ಸುಧಾರಿತ ತಳಿಗಳ ಗಿಡಗಳು ಸಿಗುತ್ತವೆ. ಕಳೆದ ಐದಾರು ವರ್ಷಗಳಿಂದ ಮೇಳಕ್ಕೆ ಬರುತ್ತಿದ್ದು, ಮಾವು, ಸಪೋಟಾ, ಹಲಸಿನ ಹಣ್ಣಿನ ತಳಿಗಳನ್ನು ಖರೀದಿ ಮಾಡಿದ್ದು, ಉತ್ತಮವಾಗಿವೆ.-ಕೆ.ಟಿ.ನಾಗಚಂದ್ರ, ರೈತ, ಮಂಡ್ಯ. ನಾವು ರೈತರಲ್ಲ. ಆದರೂ ಕೃಷಿಯ ಬಗ್ಗೆ ತುಂಬಾ ಆಸಕ್ತಿ ಇದೆ. ಮೇಳದ ಸಂದರ್ಭದಲ್ಲಿ ಭೇಟಿ ನೀಡಿ, ಹೊಸ ಯಂತ್ರಗಳು, ಸಂಶೋಧಿತ ತಳಿಗಳನ್ನ ನೋಡುತ್ತೇನೆ. ಇಷ್ಟವಾದರೆ ತೆಗೆದುಕೊಂಡು ಹೋಗಿ, ಮಹಡಿಯಲ್ಲಿ ಬೆಳೆಸುವ ಪ್ರಯತ್ನ ಮಾಡುತ್ತಿರುತ್ತೇನೆ. ತುಂಬಾ ಚೆನ್ನಾಗಿ ಕೃಷಿ ಮೇಳ ನಡೆಯುತ್ತದೆ. ಒಂದೇ ಬಾರಿಗೆ ನಾಲ್ಕೈದು ಲಕ್ಷ ಜನರನ್ನು ಕಾಣುವುದೇ ಖುಷಿಯ ವಿಚಾರ.
-ಸುರೇಖಾ ರಾಮನಾಥ್, ಸಾಫ್ಟ್ವೇರ್ ಎಂಜಿನಿಯರ್. ಬೆಂಗಳೂರು.