Advertisement

Temperature; ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಬಸವಳಿದ ಜನ

12:01 AM Mar 07, 2024 | Team Udayavani |

ಬೆಂಗಳೂರು: ರಾಜ್ಯದ ತಾಪಮಾನದಲ್ಲಿ ಬಹುತೇಕ ಕಡೆ ವಾಡಿಕೆಗಿಂತ 3 ಡಿಗ್ರಿಸೆಲ್ಸಿಯಸ್ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಲ್ಲಿ ಎರಡನೇ ಬಾರಿಗೆ ಮಾರ್ಚ್‌ ಮೊದಲ ವಾರದಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ.

Advertisement

ಬೆಂಗಳೂರಿನಲ್ಲಿ ವಾಡಿಕೆಗಿಂತ 3 ಡಿ.ಸೆ. ಹೆಚ್ಚಿನ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಮಾರ್ಚ್‌ ಮೊದಲ ವಾರದಲ್ಲಿ ಸಾಮಾನ್ಯವಾಗಿ 32.5 ಡಿ.ಸೆ.ಗರಿಷ್ಠ ಉಷ್ಣಾಂಶ ದಾಖಲಾಗುತ್ತಿತ್ತು. ಹಲವು ವರ್ಷಗಳ ಬೇಸಗೆ ಸಂದರ್ಭದಲ್ಲಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ದಾಟಿತ್ತು. ಆದರೆ 15 ವರ್ಷಗಳಲ್ಲಿ ಮಾರ್ಚ್‌ ಮೊದಲ ವಾರದಲ್ಲಿ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಮಂಗಳವಾರ 36 ಡಿ.ಸೆ.ಗರಿಷ್ಠ ಉಷ್ಣಾಂಶ ದಾಖಲಾಗಿದೆ.

2019 ಮಾ.8ರಂದು 37.1 ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ರಾಜ್ಯದಲ್ಲಿ ಮಾರ್ಚ್‌, ಎಪ್ರಿಲ್‌, ಮೇ ತಿಂಗಳವರೆಗೆ ತಾಪಮಾನ ಮುಂದುವರಿಯಲಿದೆ. ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಸಹಿತ ಕೆಲವು ಭಾಗಗಳಲ್ಲಿ ಶೀಘ್ರದಲ್ಲೇ ಉಷ್ಣ ಅಲೆ ಬರುವ ಸಾಧ್ಯತೆಗಳಿವೆ. ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಲಿಲ್ಲ. ಕೊಂಚ ತಡವಾಗಿ ಕರಾವಳಿಯಲ್ಲೂ ತಾಪಮಾನ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ವಾಡಿಕೆ ಮಳೆ ಸಾಧ್ಯತೆ
ಮಾರ್ಚ್‌ ತಿಂಗಳ ಅಂತ್ಯದಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. 8 ಮಿ.ಮೀ.ನಿಂದ 12 ಮಿ.ಮೀ.ವರೆಗೆ ಮಳೆಯಾದರೆ ಅದನ್ನು ವಾಡಿಕೆ ಮಳೆ ಎನ್ನಲಾಗುತ್ತದೆ. ಒಟ್ಟಾರೆಯಾಗಿ ಈ ಬಾರಿ ರಾಜ್ಯದಲ್ಲಿ ವಾಡಿಕೆ ಮಳೆ ಬೀಳುವ ಲಕ್ಷಣ ಗೋಚರಿಸಿದೆ. ಇದರಿಂದ ಈ ವರ್ಷ ಬರದ ಪರಿಸ್ಥಿತಿ ಹೋಗುವ ಲಕ್ಷಣ ಕಂಡು ಬಂದಿದೆ. ಜೂನ್‌ ಬಳಿಕದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ?
ಬೆಂಗಳೂರಿನಲ್ಲಿ 36, ಕಲಬುರಗಿ 38.4, ಚಾಮರಾಜನಗರ, ಬಾಗಲ ಕೋಟೆ ತಲಾ 37.5, ರಾಯಚೂರು 37.2, ಕೊಪ್ಪಳ 37.1, ಮಂಡ್ಯ 37, ಚಿತ್ರ ದುರ್ಗ 36.1, ಹಾವೇರಿ 36.4, ದಾವ ಣಗೆರೆ 36, ಧಾರವಾಡ 35.6, ಮಂಗ ಳೂರು 32.6 ಡಿ.ಸೆ.ಗರಿಷ್ಠ ಉಷ್ಣಾಂಶ ಮಂಗಳವಾರ ದಾಖಲಾ ಗಿದೆ. ಬುಧ ವಾರ ಬೆಂಗಳೂರಿನಲ್ಲಿ 35.2 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದೆ.

Advertisement

ಆರೋಗ್ಯದ ಬಗ್ಗೆ ಇರಲಿ ಕಾಳಜಿ
ರಾಜ್ಯದಲ್ಲಿ ತಾಪಮಾನ ಏರಿಕೆಗೆ ಜನ ಸಾಮಾನ್ಯರು ಬಸವಳಿದಿದ್ದು, ತಾಪಮಾನ ಇನ್ನಷ್ಟು ಏರಿಕೆಯಾದರೆ ಬಿಸಿಲಿನಲ್ಲಿ ಕಾಣಿಸಿಕೊಳ್ಳುವ ವಿವಿಧ ಕಾಯಿಲೆಗಳು ಉಲ½ಣಿಸುವ ಸಾಧ್ಯತೆಗಳಿವೆ. ಹೀಗಾಗಿ ಬೇಸಗೆ ಕಾಯಿಲೆಗಳು ಬರುವ ಮುನ್ನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಮಕ್ಕಳಲ್ಲಿ ವಾಂತಿಭೇದಿ, ಕೆಂಗಣ್ಣು, ಕಣ್ಣಲ್ಲಿ ನೀರು, ತಲೆ ತಿರುಗುವಿಕೆ ಲಕ್ಷಣ ಗೋಚರಿಸಿದರೆ, ದೊಡ್ಡವರಲ್ಲಿ ತಲೆ ಸುತ್ತುವಿಕೆ, ಬಿಸಿಲಾಘಾತದಂತಹ ಕಾಯಿಲೆಗಳು ಉಲ್ಬಣಿಸಿವೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.

ಕರ್ನಾಟಕದಲ್ಲಿ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದೆ. ಕೆಲವು ಕಡೆ ಇನ್ನಷ್ಟು ತಾಪಮಾನ ಹೆಚ್ಚಲಿದೆ. ಪರಿಣಾಮ ಭೂಮಿಯ ಮೇಲಿನ ತೇವಾಂಶವೂ ಕಡಿಮೆಯಾಗುತ್ತಿದೆ. ರಾಜ್ಯದೆಲ್ಲೆಡೆ ಒಣ ಹವೆ ಇರಲಿದೆ. ಜನ ಸಾಮಾನ್ಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
-ಪ್ರಸಾದ್‌, ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ.

ಬೇಸಗೆಯಲ್ಲಿ ಆಹಾರ ಪದ್ಧತಿ ಹೀಗಿದ್ದರೆ ಉತ್ತಮ
-ದಿನಕ್ಕೆ ಕನಿಷ್ಠ 3 ಲೀಟರ್‌ಗೂ ಹೆಚ್ಚಿನ ನೀರು ಸೇವಿಸಿ
-ಹಣ್ಣು, ತರಕಾರಿ ಜತೆಗೆ ಪಾನೀಯ ಸೇವನೆಗೆ ಒತ್ತು ನೀಡಿ
-ಕರಿದ ಆಹಾರ, ಮಸಾಲಾ ಪದಾರ್ಥ, ಮಾಂಸಾಹಾರ ಸೇವನೆ ಬೇಡ
- ದೇಹ, ಮನಸ್ಸಿಗೆ ಹಿತ ನೀಡುವಂತಹ ಕಾಟನ್‌ ಉಡುಪು ಧರಿಸಿ
- ದಿನಕ್ಕೆ 2 ಬಾರಿ ಸ್ನಾನ ಮಾಡಿದರೆ ಚರ್ಮದ ಸಮಸ್ಯೆ ತಡೆಗಟ್ಟಬಹುದು

 

Advertisement

Udayavani is now on Telegram. Click here to join our channel and stay updated with the latest news.

Next