ಬೆಂಗಳೂರು: “ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆ ನಾಟಕೀಯವಾದದ್ದು, ಜನರು ಅವರ ಮಾತನ್ನು ಒಪ್ಪುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, “ದೇವೇಗೌಡರು ಈ ಸಂದರ್ಭದಲ್ಲಿ ಆರೋಪ ಮಾಡುವ ಅಗತ್ಯ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು.
ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಿಗೆ ಹೋಗಬೇಕೆಂದು ತೀರ್ಮಾನ ಮಾಡಿ, ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನ ಮಾಡಿದ್ದೆವು. ಸಿದ್ದರಾಮಯ್ಯ ಅವರು ಆರಂಭದಿಂದಲೂ ಮೈತ್ರಿ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಕಣ್ಣೀರು ಹಾಕುವಂತಹ ಸಮಸ್ಯೆ ಇರಲಿಲ್ಲ. ನಾವು 80 ಜನ ಇದ್ದರೂ ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೆವು ಎಂದು ಹೇಳಿದರು.
ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಕಾರ್ಯಕರ್ತರು, ಶಾಸಕರು, ನಾಯಕರ ನಡುವೆ ಅಸಮಾಧಾನ ಇತ್ತು, ಬಿಜೆಪಿಯನ್ನು ದೂರ ಇಡಲು ನಾವು ಮೈತ್ರಿ ಮಾಡಿಕೊಂಡಿದ್ದೆವು. ಚುನಾವಣೆ ಫಲಿತಾಂಶ ಬಂದ ನಂತರ ಸರ್ಕಾರ ಉಳಿಸಿಕೊಳ್ಳಲು ನಾವೆಲ್ಲರೂ ಸರ್ವ ಪ್ರಯತ್ನ ಮಾಡಿದ್ದೇವೆ. ನಾಡಿನ ಜನತೆಗೆ ಇದೆಲ್ಲ ಗೊತ್ತಿದೆ. ಸಿದ್ದರಾಮಯ್ಯ ಬಗ್ಗೆ ದೇವೇಗೌಡರು ಆರೋಪ ಮಾಡದೇ ಇದ್ದಿದ್ದರೆ, ಸಿದ್ದರಾಮಯ್ಯ ಮಾತನಾಡುತ್ತಿರಲಿಲ್ಲ.
ಜೆಡಿಎಸ್ ನಾಯಕರು ಇದನ್ನು ಇಲ್ಲಿಗೇ ನಿಲ್ಲಿಸುವುದು ಒಳ್ಳೆಯದು. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು. ರಾಜಕಾರಣದಲ್ಲಿ ಕಷ್ಟ, ಸಂಕಷ್ಟ ಬರುವುದು ಸಹಜ, ಅದನ್ನು ಬಿಟ್ಟು ಕಣ್ಣೀರು ಹಾಕಿದರೆ ಅವನೆಂಥ ರಾಜ? ಎಲ್ಲವನ್ನೂ ಎದುರಿಸಿ ಆಳ್ವಿಕೆ ಮಾಡುವವನೇ ರಾಜ. ನಮ್ಮಲ್ಲಿ ಅಸಮಾಧಾನ ಇತ್ತು. ಆದರೆ, ಅವರ ವೈಯಕ್ತಿಕ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ.
ಒಟ್ಟಾರೆ ಸರ್ಕಾರ ನಡೆಸಲು ವಿಫಲರಾದರು ಎಂದರು. ಮೈತ್ರಿ ಮುಂದುವರೆಸುವ ಬಗ್ಗೆ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಮೈತ್ರಿ ಮಾಡಿಕೊಂಡಿದ್ದೆವು. ಈಗ ಸನ್ನಿವೇಶ ಬದಲಾಗಿದೆ ಎಂದು ಹೇಳಿದರು.
ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೃಪ್ತಿ ಪಡಿಸುವ ಕೆಲಸ ಮಾಡಬೇಕು. ಅವರು ತಮ್ಮ ಶಾಸಕತ್ವ ತ್ಯಾಗ ಮಾಡಿ, ಅನರ್ಹರಾಗಿದ್ದಾರೆ. ಅವರು ಜನರಿಗೆ ಮುಖ ತೋರಿಸಬೇಕಲ್ಲಾ? ಅನರ್ಹರ ಹೋರಾಟ, ತ್ಯಾಗ, ಬಲಿದಾನ ವ್ಯರ್ಥವಾಗಬಾರದು. 17 ಜನ ಶಾಸಕರಿಗೆ ಸರ್ಕಾರ ಉರುಳಿಸುವ ಮತ್ತು ಅಧಿಕಾರಕ್ಕೆ ತರುವ ಶಕ್ತಿ ಇದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ