Advertisement
ನಗರದ ರಸ್ತೆಗಳಲ್ಲಿ ಅಳವಡಿಸಿರುವ ಅನಧಿಕೃತ ಒಎಫ್ಸಿ ಕೇಬಲ್‌ಗಳ ವಿರುದ್ಧ ಈ ಹಿಂದೆ ಸಮರ ಸಾರಿದ ಪಾಲಿಕೆಯ ಅಧಿಕಾರಿಗಳು, ನೂರಾರು ಮೀಟರ್ ಕೇಬಲ್ ಕತ್ತರಿಸಿ, ಒಂದು ಕೋಟಿ ರೂ. ವರೆಗೆ ದಂಡ ವಿಧಿಸಿ ಏಜೆನ್ಸಿಗಳಿಗೆ ಬಿಸಿಮುಟ್ಟಿಸಿದ್ದರು. ಜತೆಗೆ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಅದರ ನಡುವೆಯೂ ಏಜೆನ್ಸಿಗಳು ನಾಗರಿಕಗೆ ತೊಂದೆರಯಾಗುವ ರೀತಿಯಲ್ಲಿ ಕೇಬಲ್ ಅಳವಡಿಸುವುದನ್ನು ಮಾತ್ರ ನಿಲ್ಲಿಸಿಲ್ಲ.
Related Articles
ಒಎಫ್ಸಿಯಿಂದ ರಸ್ತೆಗುಂಡಿಗಳು
Advertisement
ನೆಲದಡಿಯಲ್ಲಿ ಹಾರಿಜೆಂಟಲ್ ಡೈರೆಕ್ಷನಲ್ ಡ್ರಿಲ್ಲಿಂಗ್ (ಎಚ್‌ಡಿಡಿ) ಯಂತ್ರದ ಮೂಲಕ ಒಎಫ್ಸಿ ಕೇಬಲ್‌ಗಳನ್ನು ಅಳವಡಿಸಲು ಕೆಲ ಏಜೆನ್ಸಿಗಳು ಅನುಮತಿ ಪಡೆದಿವೆ. ಆದರೆ, ಪಾಲಿಕೆಯಿಂದ 100 ಮೀಟರ್‌ಗೆ ಅನುಮತಿ ಪಡೆಯುವ ಸಂಸ್ಥೆಗಳು 500 ಮೀಟರ್ ಕೇಬಲ್ ಅಳವಡಿಸುತ್ತಾರೆ. ಜತೆಗೆ ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಪುನರ್ ದುರಸ್ತಿಪಡಿಸದೆ ರಸ್ತೆಗಳಲ್ಲಿ ರಸ್ತೆಗುಂಡಿ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅನುಸರಿಬೇಕಾದ ನಿಯಮಗಳೇನು?: ಪಾಲಿಕೆಯಿಂದ ಅನುಮತಿ ಪಡೆದ ಏಜೆನ್ಸಿಗಳು ಕೆಲಸ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ವಲಯ ಅಧಿಕಾರಿಗಳಿಗೆ, ಪಾಲಿಕೆಯ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ಗಳಿಗೆ ಲಿಖೀತ ರೂಪದಲ್ಲಿ ಮಾಹಿತಿ ನೀಡಬೇಕು.
ಕಾಮಗಾರಿಗೆ ಸಂಬಂಧಪಟ್ಟ ಕಾರ್ಯಯೋಜನೆಯನ್ನು ಸಂಬಂಧಪಟ್ಟ ವಾರ್ಡ್ ಎಂಜಿನಿಯರ್ ಗಮನಕ್ಕೆ ತಂದು, ಸಂಬಂಧಿಸಿ ವಲಯ ಅಧಿಕಾರಿಗಳು ಅಥವಾ ರಸ್ತೆ ಮೂಲ ಸೌಕರ್ಯ ಎಂಜಿನಿಯರ್‌ಗಳ ಸಲಹೆ ಮೇರೆಗೆ ಮಣ್ಣು ಅಗೆಯುವುದು ಮತ್ತು ಅಗೆತದ ನಂತರ ರಸ್ತೆಯ ಪುನರ್‌ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಯಮಗಳಿದ್ದರೂ, ಏಜೆನ್ಸಿಗಳಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಅವುಗಳ ಪಾಲನೆಗೆ ಮುಂದಾಗಿಲ್ಲ.
ಪ್ರಶ್ನಿಸಿದರೆ ಸಿಬ್ಬಂದಿ ಮೇಲೆ ಹಲ್ಲೆ: ಅನಧಿಕೃತವಾಗಿ ಒಎಫ್ಸಿ ಕೇಬಲ್ ಅಳವಡಿಸುವವರು ರಾತ್ರಿ ವೇಳೆ ಕಾಮಗಾರಿ ನಡೆಸುತ್ತಾರೆ. ಏಜೆನ್ಸಿಗಳು ಹತ್ತಾರು ಮಂದಿಯನ್ನು ನೇಮಿಸಿಕೊಂಡು ಕಾಮಗಾರಿ ತಡೆಯಲು ಬಂದವರ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗುತ್ತಾರೆ.
ನಗರದ ಪ್ರಮುಖ ಭಾಗದಲ್ಲಿ ಇಂತಹ ಅನಧಿಕೃತ ಕೇಬಲ್ ಅಳವಡಿಕೆ ತಡೆಯಲು ಮುಂದಾದ ಪಾಲಿಕೆಯ ಸಿಬ್ಬಂದಿಗೆ ಹೊಡೆದು ಗಾಯಗೊಳಿಸಿರುವ ಹಲವು ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಪಾಲಿಕೆಯಿಂದ ಹಲವಾರು ಠಾಣೆಗಳಲ್ಲಿ ದೂರುಗಳನ್ನು ಸಹ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.