Advertisement

ಜಿಲ್ಲೆಯ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿನ ಕ್ರಮ

01:35 PM Feb 25, 2017 | Team Udayavani |

ಮಂಗಳೂರು: ಸಂಘ ಪರಿವಾರ ನೀಡಿರುವ ಬಂದ್‌ ಕರೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಆಗಿದ್ದು, ಜಿಲ್ಲೆಯ ಶಾಂತಿ, ಕಾನೂನು-ಸುವ್ಯವಸ್ಥೆಗೆ ಭಂಗತರುವ ಪ್ರಯತ್ನಗಳು ನಡೆದರೆ ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಶುಕ್ರವಾರ ಸರ್ಕಿಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ ಆಯ್ಕೆಯಾದ ಓರ್ವ ಮುಖ್ಯಮಂತ್ರಿ ಅಧಿಕೃತ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭ ಗೊಂದಲ ಸೃಷ್ಟಿಸುವ, ಜಿಲ್ಲೆಯಲ್ಲಿ ಶಾಂತಿ ಕದಡುವ ಕಾರ್ಯವನ್ನು ಸಂಘಪರಿವಾರ ಮಾಡುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಸಂರಕ್ಷಿಸುವ ಹೊಣೆಗಾರಿಕೆ ನನ್ನ ಮೇಲಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದರು.

ಕೇರಳದ ರಾಜಕೀಯಕ್ಕೂ ಕರ್ನಾಟಕದ ರಾಜಕೀಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಒಂದು ರಾಜ್ಯದ ಮುಖ್ಯಮಂತ್ರಿ ನಮ್ಮ ಜಿಲ್ಲೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಸಂದರ್ಭ ಬಂದ್‌ಗೆ ಕರೆ ನೀಡಿರುವುದು ಸಮಂಜಸ
ಅಲ್ಲ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹದ್ದಲ್ಲ. ಇದೇ ವೇಳೆ ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ಸಂಘಪರಿವಾರ ನೀಡಲಿದೆ. ಇದರಿಂದ ಅಹಿತಕಾರಿ ಘಟನೆಗಳು ಸಂಭವಿಸಿದರೆ ತೊಂದರೆ ಅನುಭವಿಸುವವರು ಅಮಾಯಕ ಜನಸಾಮಾನ್ಯರು ಎಂದು ಅವರು ಹೇಳಿದರು.

ನಿಗಾವಹಿಸಲು ಸೂಚನೆ
ಫೆ. 25ರಂದು ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಶಾಲೆಗಳಿಗೆ ಬರುವ ನಿಟ್ಟಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸಂಘಪರಿವಾರ ತನ್ನ ಅಸ್ತಿತ್ವಕ್ಕಾಗಿ ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವ ಕಾರ್ಯಗಳಲ್ಲಿ ನಿರತವಾಗಿದೆ. ದ.ಕ. ಜಿಲ್ಲೆಯ ಜನತೆ ಪ್ರಜ್ಞಾ ವಂತರು, ಬುದ್ದಿವಂತರು. ಜಿಲ್ಲೆಯ ಶಾಂತಿ, ಕಾನೂನು ಸುವ್ಯವಸ್ಥೆ ಕದಡುವ ಹುನ್ನಾರ ವಿಫಲಗೊಳಿಸಬೇಕು ಮತ್ತು ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿ ಕೊಳ್ಳುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next