ಬೆಂಗಳೂರು: ನಗರ ಪ್ರದೇಶದ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫೈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಕಳುಹಿಸಿರುವ ಪ್ರಸ್ತಾವನೆ ಕೇಂದ್ರ ಕಾನೂನು ಸಚಿವಾಲಯದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧದ ಪ್ರಕರಣದ ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, “ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಸಂಬಂಧ ರಾಜ್ಯಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಕೇಂದ್ರ ಕಾನೂನು ಸಚಿವಾಲಯ ಪರಿಶೀಲಿಸುತ್ತಿದ್ದು, ಈ ಬಗ್ಗೆ ರಾಜ್ಯಸರ್ಕಾರದಿಂದ ಪೂರ್ಣ ವಿವರಣೆ ದೊರೆತ ನಂತರ ಕೇಂದ್ರದ ನಿಲುವು ತಿಳಿಸಲಾಗುತ್ತದೆ,’ ಎಂಬ ಅಂಶಗಳನ್ನೊಳಗೊಂಡ ಜ್ಞಾಪನಾಪತ್ರವನ್ನು ನ್ಯಾ. ವಿನೀತ್ ಕೊಠಾರಿ ಅವರ ನ್ಯಾಯಪೀಠಕ್ಕೆ ಸಲ್ಲಿಸಿದರು.
ಈ ಕುರಿತಂತೆ ವಾದ – ಪ್ರತಿವಾದ ಆಲಿಸಿದ ನ್ಯಾಯ ಪೀಠ ಆಗಸ್ಟ್ 3ಕ್ಕೆ ವಿಚಾರಣೆ ಮುಂದೂಡಿತು. ಕಂದಾಯ ಇಲಾಖೆ ದಾಖಲೆಗಳಲ್ಲಿ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಕಾರಣಕ್ಕೆ ನಗರದ ಮಹಾತ್ಮಗಾಂಧಿ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳ ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರವಾನಗಿ ನವೀಕರಣ ಮಾಡಲು ನಿರಾಕರಿಸಿರುವ ರಾಜ್ಯ ಅಬಕಾರಿ ಇಲಾಖೆಯ ಕ್ರಮ ಪ್ರಶ್ನಿಸಿ, ಬ್ರಿಗೇಡ್ ರಸ್ತೆಯ ಫ್ಯೂಷನ್ ಲಾಂಜ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ 20ಕ್ಕೂ ಹೆಚ್ಚು ಬಾರ್ ಮಾಲೀಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಗುರುವಾರ ನಡೆಯಿತು.
ರಾಜ್ಯ ಸರ್ಕಾರದ ವಾದವೇನು?: ನಗರ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಡಿನೋಟಿಫೈ ಮಾಡಿದೆ. ಸ್ಥಳೀಯ ಪ್ರಾಧಿಕಾರಿಗಳು ನಿರ್ವಹಣೆ ಮಾಡುತ್ತಿರುವ ರಸ್ತೆಗಳನ್ನು ರಾಜ್ಯ ಸರ್ಕಾರ ಡಿನೋಟಿಫೈ ಮಾಡಿದೆ.
ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಇನ್ನೂ ಹೆದ್ದಾರಿ ಎಂದೇ ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಹೆದ್ದಾರಿ-4 ಹಾಗೂ ರಾಷ್ಟ್ರೀಯ ಹೆದ್ದಾರಿ- 77 ಕೇಂದ್ರ ಸರ್ಕಾರದ ಡಿನೋಟಿಫೈ ಅಧಿಸೂಚನೆಯಲ್ಲಿ ಉಲ್ಲೇಖೀಸಲಾಗಿಲ್ಲ. ಈ ರಸ್ತೆಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಡಿನೋಟಿಫೈ ಮಾಡಬೇಕು ಎಂಬುದು ರಾಜ್ಯಸರ್ಕಾರದ ವಾದ.