Advertisement
ಉದ್ಯಾನ ನಿರ್ಮಿಸದಿದ್ದರೆ ಜಾಹೀರಾತಿಗೆ ತಡೆ: ಈಗಿರುವ ಪೂರ್ವ-ಪಶ್ಚಿಮ ಕಾರಿಡಾರ್‌ನ ಮೆಟ್ರೋ ಕಂಬಗಳ ಮೇಲೆ ಬರೀ ಜಾಹೀರಾತುಗಳು ರಾರಾಜಿಸುತ್ತಿವೆ. ಆದರೆ, ಉತ್ತರ-ದಕ್ಷಿಣ ಕಾರಿಡಾರ್‌ನ ಕಂಬಗಳ ಮೇಲೆ ಜಾಹೀರಾತುಗಳ ಜತೆಗೆ ವರ್ಟಿಕಲ್ ಉದ್ಯಾನ ಬೆಳೆಸಲಾಗುವುದು. ಉದ್ದೇಶಿತ ಮಾರ್ಗಕ್ಕೆ ಸಂಬಂಧಿಸಿದ ಜಾಹೀರಾತುಗಳ ಟೆಂಡರ್ ದಾಖಲೆಗಳಲ್ಲೂ ಇದನ್ನು ಉಲ್ಲೇಖೀಸಿದ್ದು, ಗುತ್ತಿಗೆ ಪಡೆದವರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಹಾಗೊಂದು ವೇಳೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ, ಜಾಹೀರಾತು ಅಳವಡಿಕೆ ಅನುಮತಿ ತಡೆಹಿಡಿಯಲಿಕ್ಕೂ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಗುತ್ತಿಗೆದಾರರು ವರ್ಟಿಕಲ್ ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ತಮ್ಮ ಪ್ರಸ್ತಾವಿತ ವಿನ್ಯಾಸ ಹಾಗೂ ವೃತ್ತಿಪರರ ನೆರವಿನ ವಿವರಗಳನ್ನು ಸಲ್ಲಿಸಬೇಕು. ಅವರ ಉದ್ದೇಶಿತ ವಿನ್ಯಾಸವು ತಾಂತ್ರಿಕ ಮೌಲ್ಯಮಾಪನದ ಭಾಗವಾಗಿಲ್ಲದಿದ್ದರೂ, ಉದ್ಯಾನದ ಅಂತಿಮ ನಿರ್ಮಾಣದ ಮಾದರಿಯನ್ನು ಪರಿಗಣಿಸಲಾಗುವುದು ಎಂದೂ ಬಿಎಂಆರ್‌ಸಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ನೂತನ ಎಂಡಿ ಅಧಿಕಾರ ಸ್ವೀಕಾರ: ಬಿಎಂಆರ್‌ಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಶಾಂತಿನಗರದಲ್ಲಿರುವ ನಿಗಮದ ಕಚೇರಿಗೆ ಆಗಮಿಸಿದ ನೂತನ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರಿಗಳು ಅಭಿನಂದಿಸಿದರು. ನಿರ್ದೇಶಕರಾದ ಢೋಕೆ, ವಿಜಯಕುಮಾರ್ ಧೀರ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಯಾಮರಾ ಬಳಸಲು ಆಧಾರ್ ಅಗತ್ಯ: ಕ್ಯಾಮರಾದೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಆಧಾರ್ ಮತ್ತು ಮೊಬೈಲ್ ಸಂಖ್ಯೆ ದಾಖಲಿಸುವುದು ಕಡ್ಡಾಯ. ಪೂರ್ವಾನುಮತಿ ಇಲ್ಲದೆ, ಕ್ಯಾಮರಾ ತೆಗೆದುಕೊಂಡು ಹೋಗುವಂತಿಲ್ಲ. ಹಾಗೊಂದು ವೇಳೆ ಕ್ಯಾಮರಾದೊಂದಿಗೆ ಪ್ರಯಾಣಿಸಬೇಕಾದರೆ, ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿರುವ ಭದ್ರತಾ ಸಿಬ್ಬಂದಿ ಬಳಿ ಇರುವ ಪುಸ್ತಕದಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸುವುದು ಅತ್ಯಗತ್ಯ.
ವಿಜಯನಗರ, ವಿಧಾನಸೌಧ, ಬೈಯಪ್ಪನಹಳ್ಳಿ, ಮಲ್ಲೇಶ್ವರ, ಯಶವಂತಪುರ ನಿಲ್ದಾಣಗಳಲ್ಲಿ ಇದನ್ನು ಆದೇಶದಂತೆ ಪಾಲಿಸಲಾಗುತ್ತಿದೆ. ಬ್ಯಾಗ್ ತಪಾಸಣಾ ಯಂತ್ರದಲ್ಲಿ ಕ್ಯಾಮರಾ ಕಂಡುಬಂದರೆ, ಪ್ರಯಾಣಿಕರಿಂದ ಅಗತ್ಯ ಮಾಹಿತಿಯನ್ನು ನಮೂದಿಸಿಕೊಂಡು, ಯಾವುದೇ ಕಾರಣಕ್ಕೂ ಫೋಟೋ ಕ್ಲಿಕ್ಕಿಸುವಂತಿಲ್ಲ ಎಂದು ತಾಕೀತು ಮಾಡಿ ಕಳುಹಿಸಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.