Advertisement

ನಿರೀಕ್ಷಿಸಿದಷ್ಟು ಇರ್ಲಿಲ್ಲ ಪ್ರಯಾಣಿಕರು

09:59 AM May 20, 2020 | Suhan S |

ಬೆಳಗಾವಿ: ಎರಡು ತಿಂಗಳ ನಂತರ ಲಾಕ್‌ ಡೌನ್‌ ಸಡಿಲಿಕೆ ಬಳಿಕ ಬಸ್‌ ಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ಮಂಗಳವಾರ ಬೆಳಗ್ಗೆ 7:30ರಿಂದ ಸಂಜೆ 6:30ರವರೆಗೂ ನಗರದಿಂದ ಬೇರೆ ಬೇರೆ ಕಡೆಗೆ ಬಸ್‌ ಕಾರ್ಯಾಚರಿಸಿದವು. ಆದರೆ ನಿರೀಕ್ಷಿಸಿದಷ್ಟು ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ಕಂಡು ಬರಲಿಲ್ಲ.

Advertisement

ಲಾಕ್‌ಡೌನ್‌ದಿಂದಾಗಿ ಬಸ್‌ ಸಂಚಾರ ಇಲ್ಲದೇ ಬೀಕೋ ಎನ್ನುತ್ತಿದ್ದ ಕೇಂದ್ರ ಹಾಗೂ ನಗರ ಬಸ್‌ ನಿಲ್ದಾಣದಲ್ಲಿ ಮೊದಲನೇ ದಿನ ನಿರೀಕ್ಷಿಸಿದಷ್ಟು ಪ್ರಯಾಣಿಕರು ಕಾಣ ಸಿಗಲಿಲ್ಲ. ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಂದುಕೊಂಡಷ್ಟು ಪ್ರಯಾಣಿಕರು ಬಂದಿರಲಿಲ್ಲ. ಹೀಗಾಗಿ ಅನೇಕ ಬಸ್‌ಗಳನ್ನು ಬೇರೆ ಕಡೆಗೆ ಬಿಡದೇ ಹಾಗೆಯೇ ನಿಲ್ಲಿಸಲಾಗಿತ್ತು. ಸರ್ಕಾರ ವಿಧಿ  ಸಿದ್ದ ನಿಯಮಗಳಂತೆ ಬಸ್‌ಗಳಲ್ಲಿ ಕೇವಲ 30 ಜನರನ್ನು ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು.

ಹಸಿರು ನಿಶಾನೆ: ಬೆಂಗಳೂರಿಗೆ ಬಸ್‌ ಹೋಗುವಾಗ ಹಸಿರು ನಿಶಾನೆ ತೋರಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ ಅವರು ಚಾಲನೆ ನೀಡಿದರು. ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು. ವಾಕರಸಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಚಾಲಕ-ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿದ್ದರು. ಕರ್ತವ್ಯ ನಿರ್ವಹಿಸಲು ಹೆಚ್ಚುವರಿಯಾಗಿ 50 ಸಿಬ್ಬಂದಿಗಳನ್ನು ಕರೆಯಿಸಿಕೊಳ್ಳಲಾಗಿತ್ತು. ಬಸ್‌ ಸಂಚಾರ ಹೊರತುಪಡಿಸಿ ಬೇರೆ ಕೆಲಸ ನೀಡಲಾಗಿತ್ತು.

ಬೆಂಗಳೂರಿಗೆ ಹೊರಟ ಮೊದಲ ಬಸ್: ಮೊದಲನೇ ಬಸ್‌ ಬೆಂಗಳೂರಿಗೆ ಬೆಳಗ್ಗೆ 7:30ಕ್ಕೆ ಇಲ್ಲಿಂದ ಹೊರಟಿತು. ಒಟ್ಟು ಎರಡು ಬಸ್‌ಗಳು ಬೆಂಗಳೂರಿಗೆ ಹೋದರೆ, ವಿಜಯಪುರಕ್ಕೆ ಒಂದು, ಬಾಗಲಕೋಟೆಗೆ ಎರಡು ಹಾಗೂ ಧಾರವಾಡಕ್ಕೆ ಬಸ್‌ಗಳು ಹೋದವು. ಬೆಳಗಾವಿಯಿಂದ ಈ ನಾಲ್ಕು ಜಿಲ್ಲೆಗಳು ಹೊರತುಪಡಿಸಿದರೆ ಮತ್ತೆ ಬೇರೆ ಜಿಲ್ಲೆಗೆ ಬಸ್‌ ಸಂಚರಿಸಲಿಲ್ಲ. ಬೆಳಗಾವಿ ನಗರದಿಂದ ಖಾನಾಪುರ, ರಾಮದುರ್ಗ, ವಾಯಾ ನೇಸರಗಿ ಬೆ„ಲಹೊಂಗಲ, ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ ಸೇರಿದಂತೆ ವಿವಿಧ ತಾಲೂಕುಗಳಿಗೆ ಸಂಚರಿಸಿದವು. ಬೆಳಗಾವಿ ವಿಭಾಗದಿಂದ 30 ಬಸ್‌, 88 ನಗರ ಬಸ್‌ ಹಾಗೂ ಬೇರೆ ವಿಭಾಗಗಳಿಂದ 34 ಬಸ್‌ಗಳು ಸಂಚರಿಸಿದವು.

ಕೊನೆಯ ಬಸ್‌ ಗೋಕಾಕಕ್ಕೆ ಬೆಳಗಾವಿಯಿಂದ ಸಂಜೆ 5:30ಕ್ಕೆ ಹೊರಟಿತು. ಸಂಜೆ 6:30ಕ್ಕೆ ಪ್ರವೇಶ ದ್ವಾರವನ್ನು ಬಂದ್‌ ಮಾಡಲಾಗಿತ್ತು. ಪ್ರವೇಶ ದ್ವಾರದಲ್ಲಿ ಪ್ರಯಾಣಿಕರಿಗೆ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಒಳಗೆ ಪ್ರವೇಶ ನೀಡಲಾಯಿತು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿತ್ತು. ಪ್ರಯಾಣಿಕರೂ ಮಾಸ್ಕ್ ಧರಿಸಿಕೊಂಡೇ ಒಳಗೆ ಬಂದು ತಾವು ಹೋಗಬೇಕಿದ್ದ ಬಸ್‌ ಬಳಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತಿದ್ದರು.

Advertisement

ಪ್ರಯಾಣಿಕರ ಸಂಪೂರ್ಣ ಮಾಹಿತಿ: ಪ್ರತಿಯೊಂದು ಬಸ್‌ನಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು. ತ್ರಿಬಲ್‌ ಸಿಟಿನ ಮೇಲೆ ಇಬ್ಬರು ಹಾಗೂ ಡಬಲ್‌ ಸೀಟಿನ ಮೇಲೆ ಒಬ್ಬ ಪ್ರಯಾಣಿಕರು ಕುಳಿತುಕೊಂಡಿದ್ದರು. ಬಸ್‌ ನಿಲ್ದಾಣ ಪ್ರವೇಶಿಸಿದ ಪ್ರತಿಯೊಬ್ಬ ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗುತ್ತಿತ್ತು. ಹೆಸರು, ವಿಳಾಸ, ಮೊಬೈಲ್‌ ನಂಬರ್‌, ಯಾವ ಊರಿಗೆ ಪ್ರಯಾಣ ಎಂಬುದರ ಬಗ್ಗೆ ಮಾಹಿತಿಯನ್ನು ನೋಂದಣಿ ಪುಸ್ತಕದಲ್ಲಿ ನಮೂದು ಮಾಡಲಾಯಿತು. 10 ವರ್ಷದೊಳಗಿನ ಮಕ್ಕಳಿಗೆ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಪ್ರಯಾಣಿಕಸಲು ಅನುಮತಿ ಇರಲಿಲ್ಲ. ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸ್‌ ಮಾಡಿ ಬಸ್‌ ಹತ್ತಿಸಲಾಗಿತ್ತು.

ಬೆಳಗಾವಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಿಟ್ಟ ಬಸ್‌ ಮಾರ್ಗ ಮಧ್ಯದಲ್ಲಿ ಪ್ರಯಾಣಿಕರನ್ನು ಕೇವಲ ಇಳಿಸಲಾಗುತ್ತಿತ್ತು. ಬೇರೆಯವರನ್ನು ಹತ್ತಿಸಿಕೊಳ್ಳಲು ಅವಕಾಶ ಇರಲಿಲ್ಲ. ನಿಲುಗಡೆ ಸ್ಥಳಕ್ಕೆ ಬಂದು ವಾಪಸ್ಸು ಹೋಗುವಾಗ ನೇರವಾಗಿ ಬೆಳಗಾವಿಗೆ ಕರೆದುಕೊಂಡು ಹೋಗಿ ಅಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸ್‌ ಮಾಡಿಕೊಂಡೇ ಪ್ರಯಾಣಿಕರನ್ನು ಇಳಿಸಲಾಗುತ್ತಿತ್ತು.

ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬಸ್‌ ಸಂಚಾರ ಆರಂಭಗೊಂಡಿದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಮತ್ತು ಸ್ಯಾನಿಟೈಸ್‌ ಮಾಡಿಯೇ ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಹಂತ ಹಂತವಾಗಿ ಬಸ್‌ ಗಳನ್ನು ಆಯಾ ಪ್ರದೇಶಗಳಿಗೆ ಕಳುಹಿಸಲಾಗುವುದು. –ಎಂ.ಆರ್. ಮುಂಜಿ, ವಿಭಾಗೀಯ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next