Advertisement

ರೈಲು ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಪ್ರಯಾಣಿಕರ ಪರದಾಟ

07:29 AM Feb 25, 2019 | Team Udayavani |

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ರೈಲು ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಸ್ವಚ್ಛತೆ ಇಲ್ಲಿ ಮರಿಚಿಕೆ. ರೈಲು ನಿಲ್ದಾಣದಲ್ಲಿರುವ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಕಾರಣ ಮುಚ್ಚಿದ ಬಾಗಿಲು ತೆಗದೇ ಇಲ್ಲ! ದಿನೇ ದಿನೇ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ನಿಲ್ದಾಣವನ್ನು ಆರೇಳು ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

Advertisement

ಪ್ರಯಾಣಿಕ ಸೌಕರ್ಯಕ್ಕಾಗಿ ಇಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅದು ಬಾಗಿಲು ಜಡಿದುಕೊಂಡಿದೆ. ಹೀಗಾಗಿ ರಾಮನಗರ ರೈಲು ನಿಲ್ದಾಣದಲ್ಲಿ ಸ್ವಚ್ಛ ಭಾರತ, ಬಯಲು ಮುಕ್ತ ಶೌಚಾಲಯ ಕಾರ್ಯಕ್ರಮಗಳು ಅನ್ವಯಿಸುವುದಿಲ್ಲ. ಹಿರಿಯರು, ಮಹಿಳೆಯರ ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ. ಪುರುಷರ ನಿಲ್ದಾಣದ ಮೂಲೆಗೆ ಸಾಗಿ ನಿವಾರಿಸಿಕೊಳ್ಳುತ್ತಿದ್ದಾರೆ. 

ಶೌಚಾಲಯ ಮುಚ್ಚಿರುವುದೇಕೆ?: ಶೌಚಾಲಯದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಮುಚ್ಚಲಾಗಿದೆ ಎಂದು ರೈಲು ನಿಲ್ದಾಣದ ಸಿಬ್ಬಂದಿ ಹೇಳಿದ್ದಾರೆ. ಆದರೆ 2-3 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲವೇ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಶೌಚಾಲಯ ನಿರ್ವಹಣೆಗೆ ಗುತ್ತಿಗೆ ನೀಡಿದ್ದು. ಸದರಿ ಗುತ್ತಿಗೆ ಹೊಂದಿರುವ ವ್ಯಕ್ತಿಯ ನಿರ್ಲಕ್ಷ್ಯ ಕೂಡ ಶೌಚಾಲಯದ ಬಾಗಿಲು ಹಾಕಿರುವುದಕ್ಕೆ ಕಾರಣ ಎಂದು ಗೊತ್ತಾಗಿದೆ. ರೈಲು ನಿಲ್ದಾಣದ ಹೊರಗಡೆ ಇದ್ದ ಶೌಚಾಲಯವನ್ನು ಒಡೆದು ಹಾಕಲಾಗಿದೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ. 

ಸ್ವಚ್ಛ ಭಾರತ – ಇಲ್ಲಿ ಅನ್ವಿಯಿಸೋಲ್ಲ: ಪ್ಲಾಟ್‌ಪಾರಂಗಳಲ್ಲಿ ಸ್ವಚ್ಛತೆ ಇಲ್ಲದೇ ಸೊರಗುತ್ತಿದೆ. ಪ್ಲಾಟ್‌ಪಾರಂಗಳನ್ನು ದಾಟಲು ಇರುವ ಸ್ಕೈವಾಕ್‌ ಮೇಲೆ ನಾಯಿಗಳು ಹೇಸಿಗೆ ಮಾಡುತ್ತಿವೆ. ಪ್ರಯಾಣಿಕರು ಸ್ಕೈವಾಕ್‌ ಮೇಲೆ ಓಡಾಡುವಾಗ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಇದೆ. ರಾಮನಗರದ ಬೀದಿ ಬೀದಿಗಳಲ್ಲಿ ಸುತ್ತಾಡುವ ನಾಯಿಗಳು ರೈಲು ನಿಲ್ದಾಣದಲ್ಲೂ ಸ್ವಚ್ಛಂದವಾಗಿ ಸಂಚಾರ ಮಾಡುತ್ತವೆ. ನಗರವಾಸಿಗಳಿಗೆ ಆಗುತ್ತಿರುವ ತೊಂದರೆಯೇ ರೈಲು ಪ್ರಯಾಣಿಕರಿಗೂ ಆಗುತ್ತಿದೆ.

ರೈಲು ನಿಲ್ದಾಣದ ಅಂದ ಹೆಚ್ಚಿಸಲು ನಿಲ್ದಾಣದ ಮುಂಭಾಗ ವಿಶಾಲವಾದ ಉದ್ಯಾನವನ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ. ರಾತ್ರಿ ವೇಳೆ ಪುಂಡರಿಗೆ ಈ ಉದ್ಯಾನವನ ತಕ್ಕ ತಾಣವಾಗುತ್ತಿದೆ. ಹೀಗಾಗಿ ಅಧಿಕಾರಿಗಳು ರೈಲು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ರೈಲ್ವೆ ಆಸ್ತಿಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. 

Advertisement

ಭದ್ರತೆಯೂ ಇಲ್ಲ: ದಿನನಿತ್ಯ ರಾಮನಗರ ನಿಲ್ದಾಣವನ್ನು ಸಾವಿರಾರು ಮಂದಿ ಅವಲಂಭಿಸಿದ್ದರೂ ಸಹ ಇಲ್ಲೊಂದು ಪೊಲೀಸ್‌ ಔಟ್‌ ಪೋಸ್ಟ್‌ ಇಲ್ಲ. ಪ್ರಯಾಣಿಕರ ಭದ್ರತೆಗೆ ರೈಲು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದು ಕೈಗನ್ನಡಿ. ಪಾರ್ಕಿಂಗ್‌ ವ್ಯವಸ್ಥೆ ಇದೆಯಾದರೂ ಅದು ಸಮರ್ಪಕವಾಗಿಲ್ಲ. ಸುಸಜ್ಜಿತ, ಅಧುನಿಕ ಪಾರ್ಕಿಂಗ್‌ ವ್ಯವಸ್ಥೆಗೆ ಪ್ರಯಾಣಿಕರು ಪದೇ ಪದೇ ಒತ್ತಾಯಿಸಿದರು ಏನೂ ಉಪಯೋಗವಾಗಿಲ್ಲ. 

ಸಿ ದರ್ಜೆ ನಿಲ್ದಾಣ: ದಿನ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸಿದರು ಜಿಲ್ಲಾ ಕೇಂದ್ರ ರಾಮನಗರದ ರೈಲು ನಿಲ್ದಾಣ ಸಿ ದರ್ಜೆಗೆ ಸೇರಿದೆ. ಎ ಮತ್ತು ಬಿ ದರ್ಜೆ ರೈಲು ನಿಲ್ದಾಣಗಳಿಗೆ ಸಿಗುವ ಸವಲತ್ತುಗಳು ಈ ರೈಲು ನಿಲ್ದಾಣಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ನಿಲ್ದಾಣ ರಾಮನಗರ ನಿಲ್ದಾಣಕ್ಕಿಂತ ಹೆಚ್ಚು ವಹಿವಾಟು, ಹೆಚ್ಚು ಪ್ರಯಾಣಿಕರನ್ನು ಹೊಂದಿದೆ. ಹೀಗಾಗಿ ಅಲ್ಲಿನ ಸವಲತ್ತುಗಳು ಆಧುನಿಕವಾಗಿದೆ ಎಂದು ಉದಾಹರಣೆ ನೀಡಿದ್ದಾರೆ. 

ಎಲ್ಲಾ ರೈಲುಗಳು ನಿಲ್ಲುವುದಿಲ್ಲ: ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ರೈಲುಗಳು ನಿಲ್ಲುವುದಿಲ್ಲ. ದೂರ ಪ್ರಯಾಣಿಸುವ ಅನೇಕ ರೈಲುಗಳು ಇಲ್ಲಿ ನಿಲುಗಡೆ ಕೊಡುತ್ತಿಲ್ಲ. ಮಂಡ್ಯ ಮತ್ತು ಕೆಂಗೇರಿಯಲ್ಲಿ ನಿಲ್ಲುವ ಈ ರೈಲುಗಳು ರಾಮನಗರದಲ್ಲೂ ನಿಂತರೆ ಈ ನಿಲ್ದಾಣದ ವಹಿವಾಟು ಕೂಡ ಹೆಚ್ಚಳವಾಗಲಿದೆ. ಆದರೆ, ಇದ್ಯಾವುದನ್ನು ಮಾಡದೆ ಸಿ.ದರ್ಜೆ ನಿಲ್ದಾಣ ಎಂದು ಅಧಿಕಾರಿಗಳು ನಿರ್ಲಕ್ಷಿéಸುವುದು ಸರಿಯಲ್ಲ ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯ.

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next