Advertisement

ಸಮೀಕ್ಷೆ ನಂಬಿ ಕೈಕಟ್ಟಿ ಕೂತ್ರೆ ಪಕ್ಷ ಗೆಲ್ಲಲ್ಲ

05:09 PM Aug 28, 2017 | Team Udayavani |

ಚಿತ್ರದುರ್ಗ: ಚುನಾವಣಾಪೂರ್ವ ಸಮೀಕ್ಷೆ ಕಾಂಗ್ರೆಸ್‌ ಪರವಾಗಿದೆ ಎಂದು ತಿಳಿದು ಸುಮ್ಮನೆ ಕುಳಿತರೆ ಗೆಲ್ಲುವುದಿಲ್ಲ. ಇದು ಚುನಾವಣೆ ವರ್ಷ. ಹಾಗಾಗಿ ನಿರಂತರ ಹೋರಾಟ ಮಾಡುತ್ತಿರಬೇಕು ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಕರೆ ನೀಡಿದರು. ಇಲ್ಲಿನ ಕ್ರೀಡಾ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯನ್ನು ಸುಲಭ ಎಂದು ಲೆಕ್ಕ ಹಾಕಬೇಡಿ. ಏಕೆಂದರೆ ಬಿಜೆಪಿಯವರು ಮತದಾರರ ಪಟ್ಟಿಯನ್ನೇ ಬದಲಾಯಿಸುತ್ತಾರೆ ಅಥವಾ ಮತದಾರರ ಪಟ್ಟಿಯಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಹೆಸರನ್ನೇ ರದ್ದುಪಡಿಸುವ ಚಾಣಾಕ್ಷರು. ಆದ್ದರಿಂದ ಮೊದಲು ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕೆಂದರು.
ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಆಡಳಿತ ನೀಡಲಾಗಿದೆ. ಅನೇಕ ಜನಪರ ಕಾರ್ಯಕ್ರಮಗಳನ್ನುಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳ ಸಹಕಾರದಿಂದ ಪಕ್ಷ ಮತ್ತೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಜಿಪಂ, ತಾಪಂ, ಗ್ರಾಪಂ, ಲೋಕಸಭೆ ಸೇರಿದಂತೆ ಎಲ್ಲ
ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಸಾಧಿಸಿ ಅಧಿಕಾರ ಪಡೆದಿದೆ. ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅ ಧಿಕ ಮತಗಳ ಅಂತರದಲ್ಲಿ ಗೆಲುವು ಕಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಬೇಕು. ಅದಕ್ಕಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ತಿಳಿಸಿದರು. ಪಕ್ಷದ ವೀಕ್ಷಕ ಆರ್‌.ವಿ. ವೆಂಕಟೇಶ್‌ ಮಾತನಾಡಿ, ಸಭೆಯಲ್ಲಿ ಗೊಂದಲ ಸೃಷ್ಟಿಸಿದರೆ ಸಹಿಸುವುದಿಲ್ಲ. ಸಾವಿರಾರು ಕಣ್ಣುಗಳು ನಮ್ಮನ್ನು ನೋಡುತ್ತಿರುತ್ತವೆ. ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. 2018ಕ್ಕೆ ಪರಿಣಾಮಕಾರಿ ಫಲಿತಾಂಶಕ್ಕಾಗಿ ಈಗಿನಿಂದಲೇ ಹೋರಾಟ ಮಾಡಬೇಕು. ಕಿತ್ತಾಟ ಮಾಡಿಕೊಂಡರೆ ಬೇರೆ ಪಕ್ಷದವರಿಗೆ ನಾವು ಆಹಾರವಾಗುತ್ತೇವೆ. ಅಲ್ಲದೆ ಮುಂಬರುವ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರ ದೃಷ್ಟಿಯಲ್ಲಿ ನಾವು ಕಿತ್ತಾಟ ಮಾಡುತ್ತೇವೆಂಬ ಭಾವನೆ ಬರಬಾರದು ಎಂದು ತಾಕೀತು ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ್‌, ವೀಕ್ಷಕರಾದ ಆರ್‌. ಕೃಷ್ಣಪ್ಪ, ಯೋಗೇಶ್ವರಿ, ದಿವ್ಯಾ ಗೌಡ, ಗೋವಿಂದಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಲಿಡ್ಕರ್‌ ಅಧ್ಯಕ್ಷ ಒ. ಶಂಕರ್‌, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಶಿವು ಯಾದವ್‌, ಮಧು ಪಾಲೇಗೌಡ, ರಾಜೇಂದ್ರ, ಆಶ್ರಫ್‌ ಅಲಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next