ದಾವಣಗೆರೆ: ಯಾವುದೋ ಕಾರಣ, ಸಂದರ್ಭದಿಂದಾಗಿ ತಂದೆ-ತಾಯಿ ಕಳೆದುಕೊಂಡಂಥವರು ತಾವು ಅನಾಥರು ಎಂದು ಭಾವಿಸದೆ ಸರ್ಕಾರ, ಸಂಘ-ಸಂಸ್ಥೆಗಳ ನೆರವು ಸದುಪಯೋಗಪಡಿಸಿಕೊಂಡು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಅನುದಾನಂ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ 20 ಬಡ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಶಾಲಾ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಇಲ್ಲದಂತಹ ಮಕ್ಕಳಿಗೆ ಸರ್ಕಾರ ಹಲವಾರು ಸೌಲಭ್ಯ ಒದಗಿಸುತ್ತಿದೆ ಎಂದರು. ಹೆತ್ತವರು ಇಲ್ಲ ಎಂಬ ಕೊರಗು ಬೇಡವೇ ಬೇಡ.
ಸರ್ಕಾರ ತಮ್ಮ ರಕ್ಷಣೆ, ಪೋಷಣೆಯ ಜವಾಬ್ದಾರಿ ಹೊರಲಿದೆ. ಹಾಗಾಗಿ ತಮ್ಮಲ್ಲಿನ ಕೀಳಿರಿಮೆ ಬಿಟ್ಟು ಎಲ್ಲರಂತೆ ಇರಬೇಕು. ಸುಂದರ ಬದುಕನ್ನ ಕಟ್ಟಿಕೊಳ್ಳುವತ್ತ ಗಮನ ನೀಡಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹ ತಂದೆ-ತಾಯಿ ಇಲ್ಲದಂತಹ 15 ಮಕ್ಕಳ ಪೋಷಣೆ ಮಾಡುತ್ತಿದೆ. ದತ್ತು ಪಡೆಯುವ ಆಸಕ್ತರಿಗೆ ಷರತ್ತುಗಳ ಆಧಾರದಲ್ಲಿ ದತ್ತು ನೀಡಲಾಗುತ್ತದೆ.
ಮುಂದಿನ ತಿಂಗಳು ಅಮೆರಿಕಾ ದಲ್ಲಿರುವ ಬೆಂಗಳೂರು ಮೂಲದವರು ಇಬ್ಬರು ಮಕ್ಕಳನ್ನು ದತ್ತು ಪಡೆಯಲಿದ್ದಾರೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ನಿಲಯದಲ್ಲಿರುವ ಯುವತಿ ಮದುವೆಯಾಗುವವರಿಗೆ 25 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಿ, ಮದುವೆ ಮಾಡಿಕೊಡಲಾಗುವುದು. ವರ, ಕುಟುಂಬದವರ ಬಗ್ಗೆ ಸಮಗ್ರ ಮಾಹಿತಿ ಪಡೆದ ನಂತರವೇ ಮದುವೆ ಮಾಡಿಕೊಡಲಾಗುತ್ತದೆ.
ಮದುವೆ ನಂತರ ಆಗಾಗ ಮನೆಗೆ ಹೋಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಈಚೆಗೆ ಕೆಲವಾರು ಸಂಘ-ಸಂಸ್ಥೆಗಳು ಸರ್ಕಾರಿ ಅನುದಾನಕ್ಕೆ ತೋರುವ ಆಸಕ್ತಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೋರಿಸುವಲ್ಲಿ ಹಿಂದೆ ಬೀಳುತ್ತವೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಂತವರು ಒಳ್ಳೆಯ ಕೆಲಸ ಮಾಡಬೇಕು. ಅನಿವಾರ್ಯತೆ ಮತ್ತು ತೀರಾ ಅಗತ್ಯತೆ ಹೊಂದಿರುವಂತಹವರಿಗೆ ಸಾಧ್ಯವಾದಷ್ಟು ನೆರವು ನೀಡುವಂತಾಗಬೇಕು.
ಅನುದಾನಂ ಚಾರಿಟಬಲ್ ಟ್ರಸ್ಟ್ 20 ಬಡ ಮಕ್ಕಳನ್ನು ದತ್ತು ಪಡೆದು, ಶಿಕ್ಷಣದ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಟಿ.ಜಿ. ಶಿವಕುಮಾರ್ ಮಾತನಾಡಿ, ಇಂದು ಮಕ್ಕಳನ್ನು ಶೈಕ್ಷಣಿವಾಗಿ ಬೆಳೆಸುವ ಮನಸ್ಸುಗಳ ಕೊರತೆ ಇದೆ. ವಿದ್ಯಾರ್ಥಿಗಳು ದೇಶದ ಆಸ್ತಿ. ಅವರೇ ಮುಂದೆ ರಾಷ್ಟ್ರ ಮುನ್ನಡೆಸಲಿದ್ದಾರೆ. ಅವರಿಗೆ ಎಲ್ಲ ವಲಯದ ಬಗ್ಗೆ ಸಮಗ್ರ ಮಾಹಿತಿ, ತಿಳವಳಿಕೆ ನೀಡಬೇಕು ಎಂದರು.
ಅನುದಾನಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುಬೇರನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೆಯುಐಡಿಎಫ್‌ಸಿ ಎಂಜಿನಿಯರ್ ಆರ್.ಸಿ. ಮೋಹನ್, ಡಾ| ನಾಗಪ್ಪ ಕೆ. ಕಡ್ಲಿ, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಆರ್. ಸುಲೋಚನಾ ಇತರರು ಇದ್ದರು.