Advertisement

ಆದೇಶವಿಲ್ಲದಿದ್ದರೆ ತೆರವಾಗುತ್ತಿರಲಿಲ್ಲ ಫ‌ಲಕ

12:42 PM Oct 02, 2018 | |

ಬೆಂಗಳೂರು: ಹೈಕೋರ್ಟ್‌ ಮಧ್ಯಪ್ರವೇಶಿಸದಿದ್ದರೆ ನಗರದಲ್ಲಿನ ಒಂದೇ ಒಂದು ಜಾಹೀರಾತು ಫ‌ಲಕವನ್ನು ತೆರವುಗೊಳಿಸಲು ಪಾಲಿಕೆಯಿಂದ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಪಾಲಿಕೆಯ ಉನ್ನತಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಮೊದಲು ಸರ್ಕಾರಿ ಜಾಗದಲ್ಲಿ ಜಾಹೀರಾತು ಫ‌ಲಕಗಳನ್ನು ತೆಗೆಯಲು ಮುಂದಾಗಿದ್ದರೆ ಪಾಲಿಕೆ ಸದಸ್ಯರು, ಶಾಸಕರು ಹಾಗೂ ಸಚಿವರಿಂದ ಒತ್ತಡ ಬರುತ್ತಿತ್ತು.

Advertisement

ಫ‌ಲಕ ತೆರವಿಗೆ ಮುಂದಾದಾಗ ಜನಪ್ರತಿನಿಧಿಗಳು, ಮೊದಲು ನಗರದಲ್ಲಿರುವ ಇತರೆ ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸಿ. ನಂತರ ಬೆಂಬಲಿಗರ ಫ‌ಲಕಗಳನ್ನು ತೆಗೆಯಿರಿ ಎನ್ನುತ್ತಿದ್ದರು. ಅದನ್ನು ಮೀರಿ ಫ‌ಲಕಗಳ ತೆರವಿಗೆ ಮುಂದಾದರೆ ಧಮ್ಕಿ, ಹಲ್ಲೆಗಳು ಸಾಮಾನ್ಯವಾಗಿದ್ದವು. ಆದರೀಗ ಹೈಕೋರ್ಟ್‌ ಆದೇಶವಿರುವ ಕಾರಣ ಮುಕ್ತವಾಗಿ ಕೆಲಸ ಮಾಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖಂಡರ ಫ‌ಲಕಗಳೇ ಹೆಚ್ಚು: ನಗರದ ಅನಧಿಕೃತ ಜಾಹೀರಾತು ಫ‌ಲಕಗಳ ಪೈಕಿ ರಾಜಕೀಯ ಪಕ್ಷಗಳ ಮುಖಂಡರಿಗೆ ಸೇರಿದ ಫ‌ಲಕಗಳೇ ಹೆಚ್ಚು. ಜನಪ್ರತಿನಿಧಿಗಳ ಬೆಂಬಲಿಗರು ಅಂತಹ ಫ‌ಲಕಗಳನ್ನು ನಿರ್ಮಿಸಿ ಹಣ ಮಾಡುತ್ತಾರೆ. ಅವುಗಳ ತೆರವಿಗೆ ಮುಂದಾದರೆ ದೊಟ್ಟಮಟ್ಟದ ಒತ್ತಡ ತರುತ್ತಾರೆ.

ಇದರಿಂದಾಗಿ ಕಣ್ಣ ಮುಂದೆ ಅನ್ಯಾಯ ನಡೆಯುತ್ತಿದ್ದರೂ, ಏನು ಮಾಡಲಾಗದಂತಹ ಪರಿಸ್ಥಿತಿ ಪಾಲಿಕೆಗಿದೆ. ಇನ್ನು ಕೆಲವು ಅಧಿಕಾರಿಗಳು ಫ‌ಲಕ ಅಳವಡಿಕೆಗೆ ಪರೋಕ್ಷ ಬೆಂಬಲ ನೀಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಪಾಲಿಕೆಯ ಅಧಿಕಾರಿಗಳಿಗೆ ಸೇರಿದ ಫ‌ಲಕಗಳೂ ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೋರ್ಟ್‌ ನಿರ್ಧಾರದಿಂದ  ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ರಮಕೈಗೊಳ್ಳುವಂತೆ ಹಾಗೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿದೆ. ಇದರಿಂದ ಅಧಿಕಾರಿಗಳಿಗೂ ಕಾರ್ಯಾಚರಣೆ ನಡೆಸಲು ಧೈರ್ಯ ಬಂದಿದೆ. ಶೀಘ್ರವೇ ಬೆಂಗಳೂರು ಜಾಹೀರಾತು ಮುಕ್ತ ನಗರವಾಗಲಿದೆ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
 
ಎಲ್ಲ ಜಾಹೀರಾತು ಫ‌ಲಕ ತೆರವಿಗೆ ಅವಕಾಶಕ್ಕೆ ಮನವಿ: ಪಾಲಿಕೆಯಿಂದ 2016ರ ನಂತರ ಜಾಹೀರಾತು ಫ‌ಲಕಗಳ ಪರವಾನಗಿ ನವೀಕರಣ ಮಾಡಿಲ್ಲ. ಹೀಗಾಗಿ ನಗರದಲ್ಲಿನ ಎಲ್ಲ ಫ‌ಲಕಗಳು ಅನಧಿಕೃತ ಎಂದು ಪರಿಗಣಿಸಿ ತೆರವುಗೊಳಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಮನವಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೆ.17 ರಂದು ನ್ಯಾಯಾಲಯದ ಆದೇಶದಂತೆ ನಗರದ ಎಲ್ಲ ಜಾಹೀರಾತು ಫ‌ಲಕ ತೆರವು ಕಾರ್ಯ ಆರಂಭಿಸಲಾಗಿದೆ. 2016ರ ನಂತರ ಪಾಲಿಕೆಯ ವ್ಯಾಪ್ತಿಯಲ್ಲಿ ಜಾಹೀರಾತು ಫ‌ಲಕಗಳ ಪರವಾನಗಿ ನವೀಕರಣ ಮಾಡಿಲ್ಲ. ಜತೆಗೆ ಹೈಕೋರ್ಟ್‌ ಕೆಲವೇ ಫ‌ಲಕಗಳಿಗೆ ಮಾತ್ರ ತಡೆಯಾಜ್ಞೆ ನೀಡಿದ್ದು, ಉಳಿದ ಫ‌ಲಕಗಳನ್ನು ಎರಡು ವಾರಗಳಲ್ಲಿ ತೆರವುಗೊಳಿಸಲಾಗುವುದು ಎಂದರು. 

ಪಾಲಿಕೆಯ ಜಾಹೀರಾತು ಪತ್ತೆ ಆ್ಯಪ್‌ ಮೂಲಕ ಜಾಹೀರಾತು ಫ‌ಲಕಗಳ ಸಮೀಕ್ಷೆ ನಡೆಸಿದ್ದು, 3800 ಅನಧಿಕೃತ ಫ‌ಲಕಗಳನ್ನು ಪತ್ತೆ ಮಾಡಲಾಗಿದೆ. ಅದರಂತೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಎರಡು ಬಾರಿ ಅವಕಾಶ ನೀಡಲಾಗಿದೆ. ಜತೆಗೆ ಪಾಲಿಕೆಯಿಂದ ಅನುಮತಿ ನೀಡಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ 2 ಸಾವಿರ ಫ‌ಲಕಗಳ ಮಾಲೀಕರು ದಾಖಲೆ ಸಲ್ಲಿಸಿದ್ದಾರೆ. ಉಳಿದ ಪಲಕ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next