ಅದು 1978. ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಪಡುವಾರಳ್ಳಿ ಪಾಂಡವರು’ ಎಂಬ ಅದ್ಭುತ ಚಿತ್ರ ಬಿಡುಗಡೆಯಾಗಿ ಇತಿಹಾಸ ಬರೆದಿತ್ತು. ನಾಲ್ಕು ದಶಕದ ಬಳಿಕ ಅದೇ ಹೆಸರಿನ ಸಿನಿಮಾವೊಂದು ಈಗ ಸೆಟ್ಟೇರುತ್ತಿದೆ. ಆದರೆ, ಅದು “1989′ ರಲ್ಲಿನ ಪಡುವಾರಳ್ಳಿ ಪಾಂಡವರ ಕಥೆ! ಆದರೆ, ಪುಟ್ಟಣ್ಣ ಅವರ ಚಿತ್ರಕ್ಕೂ ಹೊಸಬರ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅಂದಹಾಗೆ, ಹೊಸ ತಂಡ ಸೇರಿಕೊಂಡು ಮಾಡುತ್ತಿರುವ ಆ ಚಿತ್ರಕ್ಕೆ “ಪಡುವಾರಳ್ಳಿ ಪಾಂಡವರು ಇನ್ 1989′ ಎಂದು ಹೆಸರಿಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಜಗ್ಗು ಶಿರ್ಸಿ ನಿರ್ದೇಶಕರು. ಹೊಸ ಪ್ರತಿಭೆಗಳನ್ನೆಲ್ಲಾ ಒಗ್ಗೂಡಿಸಿ, ಹೊಸಬಗೆಯ ಕಥೆ ಮಾಡಿಕೊಂಡು ರೆಟ್ರೋ ಸ್ಟೈಲ್‌ನಲ್ಲೇ ಸಿನಿಮಾ ಮಾಡೋಕೆ ಹೊರಟಿದ್ದಾರೆ.
ಪುಟ್ಟಣ್ಣ ಅವರ “ಪಡುವಾರಳ್ಳಿ ಪಾಂಡವರು’ ಚಿತ್ರ ಬಂದ ನಂತರದ ಹದಿಮೂರು ವರ್ಷಗಳು ಉರುಳಿದ ಮೇಲೆ ಅದೇ ಪಡುವಾರಳ್ಳಿಯಲ್ಲಿ ಏನೆಲ್ಲಾ ಆಗೋಯ್ತು ಎಂಬ ಕಲ್ಪನೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ಜೋಗ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. 60 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಜಗ್ಗು ಅವರದು. ಈ ಸಿನಿಮಾದ ವಿಶೇಷವೆಂದರೆ, ಪುಟ್ಟಣ್ಣರ “ಪಡುವಾರಳ್ಳಿ’ ಸಿನಿಮಾದಲ್ಲಿದ್ದ ಸ್ವಾಮೀಜಿ ಪಾತ್ರ ಇಲ್ಲಿಯೂ ಮುಂದುವರೆಯಲಿದೆ. ಆ ಚಿತ್ರದಲ್ಲಿ ಪಾಂಡವರು ದುಷ್ಟರನ್ನು ಓಡಿಸಿಕೊಂಡು ಹೋಗುವ ಕ್ಲೈಮ್ಯಾಕ್ಸ್ ಇತ್ತು. ಇಲ್ಲಿ ಕೌರವರ ದಂಡು ಪುನಃ ಪಡುವಾರಳ್ಳಿಯಲ್ಲಿ ಉದ್ಭವ ಆಗೋದನ್ನು ತೋರಿಸಲಾಗುವುದು ಎಂಬುದು ಜಗ್ಗು ಮಾತು.
ಪುಟ್ಟಣ್ಣರ ಚಿತ್ರದ ಸ್ಪೂರ್ತಿ ಪಡೆದು ಹುಟ್ಟಿಕೊಂಡ ಈ ಕಥೆಗೆ ಐವರು ನಾಯಕರಿದ್ದಾರೆ. ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತ ವಿನು ವೆಂಕಟೇಶ್, ಸತೀಶ್, ಜಾನ್, ಮಹಾಸತಿ, ಆಶಾ ಭಂಡಾರಿ, ಬಸವರಾಜ್ ಬಣಕಾರ್, ಇತರರು ನಟಿಸಿದ್ದಾರೆ. ಇವರೊಂದಿಗೆ ಸ್ವಸ್ತಿಕ್ ಶಂಕರ್ ಹಾಗೂ ಸ್ವಾಮೀಜಿ ಪಾತ್ರದಲ್ಲಿ ಜಿ.ವಿ.ಕೃಷ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು, ಚಿತ್ರಕ್ಕೆ ಬಕ್ಕೇಶ್ ರೊನಾಡ್ ಹಾಗೂ ಪಂಚಮ್‌ದೇವ್ ಸಂಗೀತ ನೀಡಿದ್ದಾರೆ. ಈ ಪೈಕಿ ಪಂಚಮ್ ದೇವ್ ರಂಗಕಲಾವಿದರಾಗಿದ್ದು, ಅವರಿಲ್ಲಿ ರೊಮ್ಯಾಂಟಿಕ್ ಹಾಡೊಂದನ್ನು ಸಂಯೋಜಿಸಿದ್ದಾರಂತೆ. ನಾಯಕ ವಿನು ವೆಂಕಟೇಶ್‌ಗೆ
ಇದು ಮೊದಲ ಚಿತ್ರವಾಗಿದ್ದು, ಅವರ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆಯಂತೆ. ನಾಯಕಿ ಆಶಾಭಂಡಾರಿ ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದು, ಮಾಡೆಲಿಂಗ್‌ನಲ್ಲೂ ಮಿಂದೆದ್ದವರು. ಆಡಿಷನ್ ಮೂಲಕ ಅವರಿಲ್ಲಿ ಆಯ್ಕೆಯಾಗಿದ್ದನ್ನು ಹೇಳಿಕೊಂಡರು.
ಹಿರಿಯ ಕಲಾವಿದ ಸ್ವಸ್ತಿಕ್ ಶಂಕರ್‌ಗಿಲ್ಲಿ ಕೌರವ ದಂಡಿನಲ್ಲಿ ಕಾಣಿಸಿಕೊಳ್ಳುವ ಮುಖ್ಯಸ್ಥನ ಪಾತ್ರವಂತೆ. ಅಂದು ನಿರ್ಮಾಪಕ ಅಣಜಿ ನಾಗರಾಜ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಹಾರೈಸಿದರೆ, ಸಂಚಾರಿ ವಿಜಯ್ ಸಾಂಗ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.