ಲಂಡನ್: ಇಂಗ್ಲೆಂಡ್ ರಾಣಿ ವಾಸಿಸುವ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಭಾರತೀಯ ಸಂಸ್ಕೃತಿ ಮನೆಮಾಡಿದೆ. “ಯುಕೆ- ಇಂಡಿಯಾ ಸಂಸ್ಕೃತಿ ವರ್ಷ’ಕ್ಕೆ ಅರಮನೆ ಸಜ್ಜಾಗಿದ್ದು, ಎಆರ್ ರೆಹಮಾನ್ ಕಂಠದಿಂದ “ಜೈಹೋ’ ಆಸ್ಕರ್ ಗೀತೆ ಮೊಳಗಲಿದೆ. ರಾಣಿ 2ನೇ ಎಲಿಜೆಬೆತ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕ್ರಿಕೆಟಿಗ ಕಪಿಲ್ ದೇವ್, ಸಿತಾರ್ ವಾದಕಿ ಅನೌಷ್ಕಾ ಶಂಕರ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇಂಗ್ಲೆಂಡಿನ ಅತಿ ಹಳೆಯ ರೆಸ್ಟೋರೆಂಟಿನ ಬಾಣಸಿಗ ವೀರಸ್ವಾಮಿ
ಕೈ ಅಡುಗೆಯಲ್ಲಿ ಅತಿಥಿಗಳಿಗೆ ವಿಶೇಷ ಭೋಜನ ಸಿದ್ಧಗೊಳ್ಳಲಿದೆ. ಇಂಗ್ಲೆಂಡಿಗೆ ಭೇಟಿ ನೀಡಿದ ಭಾರತೀಯ ಗಣ್ಯರ ಚಿತ್ರಗಳು, ವಿಶೇಷ ಉಡುಗೊರೆಗಳು, ಭಾರತದ ಪುರಾತನ ಹಸ್ತಪ್ರತಿಗಳನ್ನು ಇದೇ ವೇಳೆ ಪ್ರದರ್ಶನಕ್ಕಿಡಲಾಗುತ್ತದೆ. 2015ರಲ್ಲಿ ಇಂಗ್ಲೆಂಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಂದಿನಿಂದ ಸಂಸ್ಕೃತಿ ವರ್ಷವನ್ನು ಆಚರಿಸಲಾಗುತ್ತಿದೆ.