Advertisement

ಸಾಲ ಮರುಪಾವತಿಸದ ಹಮಾಲಿ ಹತ್ಯೆಗೈದ ಮಾಲೀಕ

11:19 PM May 04, 2019 | Lakshmi GovindaRaj |

ದಾವಣಗೆರೆ: ಹಮಾಲಿಯೊಬ್ಬನ ಹತ್ಯೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹಮಾಲರು ಶನಿವಾರ ನಗರದ ಎಪಿಎಂಸಿ ಮಾರುಕಟ್ಟೆ ಬಂದ್‌ ಮಾಡಿ, ಹತ್ಯೆ ಆರೋಪಿ, ಈರುಳ್ಳಿ ದಲ್ಲಾಲಿ ಮಾಲೀಕನ ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸಗೈದಿದ್ದಾರೆ.

Advertisement

ಬಸಾಪುರದ ವೀರೇಶ್‌(35) ಎಂಬ ಹಮಾಲನ ಹತ್ಯೆಯಿಂದ ಆಕ್ರೋಶಗೊಂಡ ಹಮಾಲರು, ಆತನನ್ನು ಕೊಲೆ ಮಾಡಿದ್ದಾರೆನ್ನಲಾದ ನಗರದ “ಹಲಗೇರಿ ಗುರಣ್ಣ ಆ್ಯಂಡ್‌ ಸನ್ಸ್‌’ ಈರುಳ್ಳಿ ವ್ಯಾಪಾರಿ ಮೃತ್ಯುಂಜಯ ಅವರ ಅಂಗಡಿಗೆ ನುಗ್ಗಿ, ಕಲ್ಲು ತೂರಾಟ ನಡೆಸಿದರು.

ಕಿಟಕಿಯ ಗಾಜು ಪುಡಿ ಮಾಡಿ, ಅಲ್ಲಿದ್ದ ಪೀಠೊಪಕರಣ, ತೂಕದ ಮೆಷಿನ್‌, ಇತರ ಸಾಮಗ್ರಿಗಳನ್ನು ಧ್ವಂಸಗೊಳಿಸಿದರು. ನಂತರ ಅಂಗಡಿ ಮುಂದೆ ಪ್ರತಿಭಟನೆ ನಡೆಸಿ, ಟೈರ್‌ ಸುಟ್ಟು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಏನಿದು ಪ್ರಕರಣ: ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಯಲ್ಲಿ “ಹಲಗೇರಿ ಗುರಣ್ಣ ಆ್ಯಂಡ್‌ ಸನ್ಸ್‌’ ಅಂಗಡಿಯಲ್ಲಿ ಬಸಾಪುರದ ವೀರೇಶ್‌ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ. ಅಂಗಡಿ ಮಾಲೀಕ ಮೃತ್ಯುಂಜಯರ ಬಳಿ ಸಾಲ ಪಡೆದಿದ್ದ.

ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಬಾರದ ಆತ, ಪಡೆದ ಸಾಲವನ್ನು ಹಿಂತಿರುಗಿಸಿರಲಿಲ್ಲ. ವೀರೇಶನನ್ನು ಕಾರಿನಲ್ಲಿ ಕರೆದೊಯ್ದ ಮೃತ್ಯುಂಜಯ, ಸಾಲ ಮರು ಪಾವತಿಸುವಂತೆ ಕೇಳಿದ್ದ. ಆಗ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ.

Advertisement

ಈ ವೇಳೆ ವೀರೇಶ ತನ್ನ ಮಾಲೀಕನಿಗೆ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೃತ್ಯುಂಜಯ ಆತನ ಮೇಲೆ ಹಲ್ಲೆ ನಡೆಸಿದ್ದರಿಂದ ವೀರೇಶ್‌ ಮೃತಪಟ್ಟಿದ್ದಾನೆ. ನಂತರ ಮೃತ್ಯುಂಜಯ ತನ್ನ ಸಹೋದರ ಬಸವೇಶನ ನೆರವಿನಿಂದ ವೀರೇಶನ ಶವವನ್ನು ಕಾರಿನಲ್ಲಿ ಬಚ್ಚಿಟ್ಟಿದ್ದ.

ಏ.25ರ ಬೆಳಗಿನ ಜಾವ 2.30ರ ಸುಮಾರಿಗೆ ಹಲಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹಲಗೇರಿ-ಹರಿಹರ ರಸ್ತೆಯ ತೆರೆದಹಳ್ಳಿಯ ಬಳಿ ಕಾರನ್ನು ಹುಣಸೆಮರಕ್ಕೆ ಗುದ್ದಿಸಿ ಬೆಂಕಿ ಹಚ್ಚಿದ್ದಾರೆ. ನಂತರ ಅಪಘಾತದಲ್ಲಿ ಮಾಲೀಕ ಮೃತ್ಯುಂಜಯನೇ ಮೃತಪಟ್ಟಿರುವುದಾಗಿ ನಂಬಿಸಿದ್ದಾರೆ.

ಮೃತ್ಯುಂಜಯ ಕೋಲ್ಕೊತ್ತಾಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾನೆ. ವೀರೇಶ್‌ ನಾಪತ್ತೆಯಾಗಿರುವ ಬಗ್ಗೆ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಏ.26ರಂದು ತೆರೆದಹಳ್ಳಿ ಚಾನಲ್‌ ಬಳಿ ಕಾರಿನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಹಲಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.

ನಂತರ ಶವ ಹಮಾಲಿ ವೀರೇಶನದ್ದು ಎಂಬುದು ಬೆಳಕಿಗೆ ಬಂದಿದೆ. ಮೇ 1ರಂದು ಆರೋಪಿಗಳನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ. ಕೃತ್ಯದ ಬಗ್ಗೆ ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಹೋದರರನ್ನು ಈಗಾಗಲೇ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next