Advertisement

ಲಘು ಮಾತು ವಾಪಸ್ ಪಡೆಯಲಿ: ಹಾಲಪ್ಪ ವಿರುದ್ದ ಕಾಗೋಡು ಪುತ್ರಿಯ ಆಕ್ರೋಶ

03:06 PM Jan 28, 2022 | Team Udayavani |

ಸಾಗರ: ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ರೈತರ ಪರ ಹೋರಾಟ ಸಂದರ್ಭದಲ್ಲಿ ಶಾಸಕ ಹಾಲಪ್ಪ ಹರತಾಳು ಅವರು ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಾಗಿದೆ, ಅವರಿಗೆ ಏನೂ ಗೊತ್ತಾಗುವುದಿಲ್ಲ ಎಂದು ನೀಡಿರುವ ಹೇಳಿಕೆ ಖಂಡನೀಯ, ಅವರು ಆಡಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಕಾಗೋಡು ಪುತ್ರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಒತ್ತಾಯಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1951ರ ಕಾಗೋಡು ಸತ್ಯಾಗ್ರಹದಿಂದ ಹಿಡಿದು 1974ರಲ್ಲಿ ತಿದ್ದುಪಡಿಯಾದ ಭೂಸುಧಾರಣಾ ಕಾಯ್ದೆ ಅನುಷ್ಟಾನದವರೆಗೂ ಕಾಗೋಡು ರೈತರಿಗೆ ಭೂಮಿ ಕೊಡಲು ಅವಿರತವಾಗಿ ಶ್ರಮಿಸಿದ್ದಾರೆ. ಬಹುಶಃ ಈ ವಿಷಯ ಶಾಸಕರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಮೀಸಲು ಅರಣ್ಯದ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡುತ್ತಿದ್ದಾಗ ಮೌನವಾಗಿದ್ದ ಶಾಸಕರು ಜನರಿಗೆ ಭೂಮಿಹಕ್ಕು ಕೊಡಿಸಿದ ಕಾಗೋಡು ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಅಂದು, ಇಂದು, ಮುಂದು ಸಹ ಕಾಗೋಡು ಅವರು ರೈತರಿಗಾಗಿಯೆ ತಮ್ಮ ಜೀವನವನ್ನು ಮುಡುಪಾಗಿ ಇರಿಸಿದವರು. 2015ರಲ್ಲಿ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯ ಭೂಮಂಜೂರಾತಿ ಸಂದರ್ಭದಲ್ಲಿ ಆಗಿನ ವಿಶೇಷ ಅಧಿಕಾರಿ 1300 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವಂತೆ ತಿಳಿಸಿದ್ದರು. ನಂತರ ರೈತರ ಜಮೀನು ಈ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅದನ್ನು 1050 ಎಕರೆಗೆ ಇಳಿಸಲಾಯಿತು. ಅಂತಿಮವಾಗಿ ರೈತರ ಜಮೀನು ಬಿಟ್ಟುಕೊಟ್ಟು 777.07ಎಕರೆ ಜಮೀನು ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಅಂದು ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ 1300 ಎಕರೆ ಜಮೀನು ಕೊಡುತ್ತೇವೆ. ವಿಶ್ವವಿದ್ಯಾಲಯವನ್ನು ನಮ್ಮ ವ್ಯಾಪ್ತಿಗೆ ತನ್ನಿ ಎಂದು ಸಭೆಯಲ್ಲಿ ಮನವಿ ಮಾಡಿದ್ದರು. ಆದರೆ ಕಾಗೋಡು ರೈತರ ಹಿತಕ್ಕಾಗಿ ವಿಶ್ವವಿದ್ಯಾಲಯ ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಈ ಯಾವ ವಿಷಯವೂ ಹಾಲಿ ಶಾಸಕರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ತರುವಲ್ಲಿ ನಡೆದ ಘಟನಾವಳಿಗಳ ಕುರಿತು ಜನರಿಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದರು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಧುಮಾಲತಿ ಮಾತನಾಡಿ, ಹಾಲಪ್ಪ ಅವರಿಗೆ ಮಹಿಳೆಯರ ಬಗ್ಗೆ ಗೌರವ ಕೊಡುವುದು ಗೊತ್ತಿಲ್ಲ. ಇರುವಕ್ಕಿ ಹೋರಾಟ ಸಂದರ್ಭದಲ್ಲಿ ನನ್ನ ಪತಿ ಕಲ್ಲಪ್ಪ ಮೆಣಸಿನಾಳ್ ತಮ್ಮ ಪತ್ನಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾರೆ ಎಂದು ನೀಡಿರುವ ಹೇಳಿಕೆಗೆ ನನ್ನ ಧಿಕ್ಕಾರವಿದೆ. ಅಧಿಕಾರಿಗಳನ್ನು ಕಳ್ಳಸುಳ್ಳ ಎಂದು ಹೇಳುವ ಮೂಲಕ ಸರ್ಕಾರಿ ನೌಕರರನ್ನು ಹಾಲಪ್ಪ ಅವರು ಅವಮಾನಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಕಿಂಚಿತ್ ಗೌರವ ಇಲ್ಲದ ಶಾಸಕರು ತಮಗೂ ಹೆಂಡತಿ ಮಕ್ಕಳು ಇದ್ದಾರೆ ಎನ್ನುವುದನ್ನು ಮರೆಯಬಾರದು. ಕಲ್ಲಪ್ಪ ಹೆಂಡತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆಯನ್ನು ಹಾಲಪ್ಪ ಅವರು ಹಿಂದಕ್ಕೆ ಪಡೆಯದೇ ಹೋದಲ್ಲಿ ಅವರ ಮನೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯೆ ಎನ್.ಲಲಿತಮ್ಮ ಮತ್ತು ಮಾಜಿ ಸದಸ್ಯೆ ಪರಿಮಳ ಮಾತನಾಡಿ, ಓರ್ವ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್ ಮತ್ತು ಆರು ದಶಕಕ್ಕೂ ಹೆಚ್ಚುಕಾಲ ಬಡವರು, ರೈತರು, ಭೂಹೀನರ ಪರ ಧ್ವನಿಯಾಗಿ ಅವರಿಗೆ ಭೂಮಿಹಕ್ಕು ಕೊಡಿಸುವಲ್ಲಿ ಶ್ರಮಿಸಿದ ಕಾಗೋಡು ಬಗ್ಗೆ ಶಾಸಕರು ಆಡಿರುವ ಮಾತು ಅವರ ವ್ಯಕ್ತಿತ್ವಕ್ಕೆ ತಕ್ಕುದ್ದಲ್ಲ. ಶಾಸಕರು ತಕ್ಷಣ ಬಹಿರಂಗ ಕ್ಷಮೆ ಯಾಚನೆ ಮಾಡಬೇಕು. ಶಾಸಕರು ಬಹಿರಂಗ ಕ್ಷಮೆಯಾಚನೆ ಮಾಡದೆ ಹೋದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಗೋಷ್ಠಿಯಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪ್ರಮುಖರಾದ ಅನ್ವರ್ ಭಾಷಾ, ವೆಂಕಟೇಶ್ ಮೆಳವರಿಗೆ, ಸದ್ದಾಂ, ಸಂತೋಷ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next