ಯಾವುದೇ ವಿಚಾರವನ್ನು ವಿಶಾಲ ದೃಷ್ಟಿಕೋನದಿಂದ ಪ್ರತಿಯೊಬ್ಬರೂ ಆಲೋಚಿಸಿದರೆ ಮತ್ತೂಬ್ಬರ ಮೇಲೆ ಹಗೆ ಸಾಧಿಸುವ, ಪರರನ್ನು ನಿಂದಿಸುವ ಪ್ರಸಂಗವೇ ಎದುರಾಗುವುದಿಲ್ಲ. ಪ್ರತಿಯೊಂದರ ಆಸ್ವಾದಿಸುವಿಕೆ, ಅರಿಯುವಿಕೆ, ನಿರ್ಣಯಿಸುವಿಕೆ, ತಾನು ಹೇಗೆ ನೋಡುತ್ತೇನೆ ಎಂಬುದರ ಮೇಲೆ ನಿಂತಿದೆ. ವೈಯಕ್ತಿಕ ದೃಷ್ಟಿಯಿಂದ ಸಮಾಜವನ್ನು ಕಂಡರೆ ಎಲ್ಲವೂ ತದ್ವಿರುದ್ಧವಾಗಿಯೇ ಕಾಣು ತ್ತದೆ. ಅನುಭೂತರಾಗಿ ಯೋಚಿಸುವುದಕ್ಕಿಂತಲೂ ಸಹಾನುಭೂತಿಶೀಲರಾಗಿ ಯೋಚಿಸಿದಾಗ ದ್ವೇಷ, ಅಸೂಯೆ, ಸಂಘರ್ಷ ದೂರವಾಗಲು ಸಾಧ್ಯವಾಗುತ್ತದೆ. ಪರಸ್ಪರ ಸಹಕಾರಯುತ ಸಹಬಾಳ್ವೆಯ ಬದುಕಿಗೆ ಅಡಿಪಾಯವಾಗುತ್ತದೆ.
ಅಲ್ಲೊಂದು ಮನೆ. ಆ ಮನೆಯಲ್ಲಿ ಪತಿ-ಪತ್ನಿ ಬಹುದಿನಗಳಿಂದ ಅನ್ಯೋನ್ಯ ಭಾವದಿಂದ ಸಂಸಾರ ನಡೆಸುತ್ತಿದ್ದರು. ಅದೇ ಮನೆ ಪಕ್ಕದಲ್ಲಿ ಒಂದು ಸಣ್ಣ ನದಿ ಹರಿಯುತ್ತಿತ್ತು. ಪ್ರತಿನಿತ್ಯ ಹೆಂಡತಿ ಮುಂಜಾನೆ ಎದ್ದ ತತ್‌ಕ್ಷಣ ಪಾರದರ್ಶಕ ಕಿಟಕಿಯಿಂದ ಒಮ್ಮೆ ಆ ನದಿಯನ್ನು ನೋಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಗಂಡನ ಬಳಿ ನದಿಯನ್ನು ವರ್ಣಿಸುವುದು ಅಭ್ಯಾಸವಾಗಿ ಹೋಗಿತ್ತು. ಹೀಗೆ ದಿನಗಳು ಕಳೆಯುತ್ತಿರುವಾಗ ಒಂದಿಷ್ಟು ದಿನಗಳ ಕಾಲ ಮನೆಬಿಟ್ಟು ಇನ್ನೆಲ್ಲೋ ಹೋಗಿ ವಾಸಿಸುವ ಸಂದರ್ಭ ಎದುರಾಗಿ ಅವರಿಬ್ಬರು ಸಿದ್ಧರಾಗಿ ಪ್ರವಾಸ ನೆಪದಲ್ಲಿ ಕೆಲವು ದಿನಗಳ ಕಾಲ ಮನೆಯಿಂದ ದೂರ ಇದ್ದರು. ಬಹುದಿನಗಳ ಬಳಿಕ ಮತ್ತೆ ತಮ್ಮ ಮನೆ ಸೇರಿದರು. ಎಂದಿನಂತೆ ಮನೆಯಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿದರು.
ಮುಂಜಾನೆ ಕೊಂಚ ತಡವಾಗಿ ಎದ್ದ ಮಡದಿ ಕಿಟಕಿಯಿಂದ ಅದೇ ಹರಿಯುವ ನದಿಯನ್ನು ನೋಡುತ್ತಾ ಒಂದೇ ಸಮನಾಗಿ ಹರಿಯುತ್ತಿದ್ದ ಈ ನದಿಗೆ ಏನಾಯಿತು? ನಾನು ಪ್ರವಾಸ ಹೋಗುವವರೆಗೆ ಸ್ವಚ್ಛಂದವಾಗಿ ಶುಭ್ರತೆಯಿಂದ ಹರಿಯುತ್ತಿತ್ತು. ಇವತ್ತು ಯಾಕಿಷ್ಟು ಕಲುಷಿತವಾಗಿ ಕೆಂಬಣ್ಣದಿಂದ ಕೂಡಿದೆ. ನಾನು ಮನೆಯಲ್ಲಿರುವ ತನಕ ಬೆಳಗ್ಗೆ ಹಾಲಿನಂತೆ ಕಂಗೊಳಿಸುತ್ತಿದ್ದ ನೀನು ಯಾಕೆ ಇಷ್ಟೊಂದು ಮಲಿನವಾಗಿದ್ದೀಯಾ ಎಂದು ನದಿಯನ್ನು ಶಪಿಸಲಾರಂಭಿಸಿದಳು.
ಇದನ್ನು ಕಂಡು ಆಕೆಯ ಮಾತುಗಳನ್ನು ಆಲಿಸುತ್ತಿದ್ದ ಗಂಡ ತನ್ನ ಹೆಂಡತಿಯ ಬಳಿ ಬಂದು ನೋಡು ಯಾಕಿಷ್ಟು ರೇಗಾಡುತ್ತೀಯಾ, ಆ ನದಿ ತನ್ನ ಪಾಡಿಗೆ ತಾನು ಹರಿಯುತ್ತಿದೆ. ಅದರಲ್ಲಿ ಯಾವುದೇ ಮಾಲಿನ್ಯ ಇಲ್ಲ. ಆ ನೀರು ಕೊಳಕಾಗಿಲ್ಲ. ತೊಂದರೆ ಇರುವುದು ನಮ್ಮ ಬಳಿಯೇ, ನೀನು ನೋಡುತ್ತಿರುವ ಈ ಕಿಟಕಿಯ ಗಾಜಿನ ಬಣ್ಣ ಬದಲಾಗಿದೆ. ನಾವು ಕೆಲವು ದಿನಗಳಿಂದ ಮನೆಯಲ್ಲಿ ಇಲ್ಲದೇ ಇದ್ದುದರಿಂದ ಕಿಟಕಿಯ ಗಾಜಿನ ತುಂಬೆಲ್ಲ ಧೂಳು ತುಂಬಿದೆ. ಕಿಟಕಿಯ ಗಾಜು ಕೊಳಕಾಗಿದೆ. ಮೊದಲು ನಮ್ಮ ಮನೆ ಕಿಟಕಿಯ ಗಾಜು ಸ್ವಚ್ಛಗೊಳಿಸುವ. ಅನಂತರ ಎಲ್ಲವೂ ಇದ್ದ ರೂಪದಲ್ಲಿಯೇ ಕಾಣುತ್ತದೆ. ನೀನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಬೇಕಿದೆ ಎಂದ. ಪತಿಯ ಈ ಮಾತನ್ನು ಮನವರಿಕೆ ಮಾಡಿಕೊಂಡ ಆಕೆ ನದಿಯನ್ನು ಶಪಿಸುವ ಬದಲಾಗಿ ಕಿಟಕಿಯ ಗಾಜುಗಳನ್ನು ಸ್ವಚ್ಛಗೊಳಿಸಿ ಈ ಹಿಂದಿನಂತೆ ನದಿಯತ್ತ ದೃಷ್ಟಿ ಹರಿಸಿದಾಗ ನದಿ ಮಾಲಿನ್ಯರಹಿತವಾಗಿರುವುದು ಭಾಸವಾಯಿತು.
ಅನೇಕ ಬಾರಿ ನಾವು ಇಂತಹುದೇ ಪ್ರಸಂಗಕ್ಕೆ ಒಳಗಾಗುತ್ತೇವೆ. ಮೊದಲು ನಮ್ಮನ್ನು ನಾವೇ ಸರಿಪಡಿಸಿಕೊಳ್ಳದೆ ಪರರನ್ನು ಶಪಿಸುತ್ತಾ ಕಾಲ ಕಳೆಯುತ್ತಿರುತ್ತೇವೆ. ನಮ್ಮಲ್ಲಿರುವ ದೋಷಗಳನ್ನು ಕಂಡುಕೊಳ್ಳದೆ ಇತರರ ಮೇಲೆ ಇತರ ವಸ್ತುಗಳ ಮೇಲೆ ಭಾರ ಹೇರುತ್ತಾ ಬರುತ್ತೇವೆ. ಇದರ ಬದಲಾಗಿ ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಆಗ ನಿಜಾಂಶ ಏನೆಂಬುದು ಅರ್ಥವಾಗುತ್ತದೆ. “ಸೃಷ್ಟಿಯನ್ನು ಅದರ ದೃಷ್ಟಿಯಿಂದಲೇ ನೋಡು ನಿನ್ನ ದೃಷ್ಟಿಯಿಂದ ಯಾಕೆ ಸೃಷ್ಟಿಯನ್ನು ನೋಡುವೆ’ ಎಂಬ ಮಾತಿನಂತೆ ಪ್ರಕೃತಿಯ ಅರಿಯುವಿಕೆಯನ್ನು ಪ್ರಕೃತಿಯ ನೋಟದಿಂದಲೇ ಅರಿತುಕೊಳ್ಳಲು ಸಾಧ್ಯವಾದಾಗ ನಮ್ಮೊಳಗಿನ ಕುಂದುಕೊರತೆಗಳನ್ನು ಅವಲೋಕಿಸಿಕೊಳ್ಳುವಷ್ಟು ಪ್ರಬುದ್ಧರಾದಾಗ ಪ್ರತಿಯೊಂದರ ವಾಸ್ತವ ವಿಚಾರಗಳನ್ನು ಮನಗಾಣಲು ಸಾಧ್ಯವಾಗುತ್ತದೆ.
- ಅರವಿಂದ, ಉಜಿರೆ