Advertisement

ಪಾಯ ಸಡಿಲಾಗಿ ವಾಲಿದ ಮತ್ತೂಂದು ಕಟ್ಟಡ

01:13 PM Feb 12, 2018 | Team Udayavani |

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಎರಡು ಅಂತಸ್ತಿನ ಕಟ್ಟಡದ ಪಾಯ ಸಡಿಲಗೊಂಡು ಒಂದು ಬದಿಗೆ ವಾಲಿರುವ ಘಟನೆ ಮತ್ತಿಕೆರೆ ವಾರ್ಡ್‌ನ ಕೆ.ಎನ್‌ ಬಡಾವಣೆಯಲ್ಲಿ ಭಾನುವಾರ ನಡೆದಿದೆ. 

Advertisement

ಬಡಾವಣೆಯ ತ್ರಿವೇಣಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಟ್ಟಡವನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ರಾಜಕಾಲುವೆಗೆ ಹೊಂದಿಕೊಂಡಂತೆ ಕಟ್ಟಡ ನಿರ್ಮಿಸಿರುವ ಪರಿಣಾಮ ನೀರು ನುಗ್ಗಿ ಪಾಯ ಸಡಿಲಗೊಂಡ ಹಿನ್ನೆಲೆಯಲ್ಲಿ ಕಟ್ಟಡ ಒಂದು ಕಡೆಗೆ ವಾಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಟ್ಟಡ ಮಾಲೀಕರು 12 ಅಡಿ ಅಗಲ ಹಾಗೂ 40 ಅಡಿ ಉದ್ದದ ಜಾಗದಲ್ಲಿ ನಿಯಮದಂತೆ ಸೆಟ್‌ ಬ್ಯಾಕ್‌ ಬಿಡದೆ ಎರಡು ಅಂತಸ್ತಿ ಕಟ್ಟಡ ನಿರ್ಮಿಸಿದ್ದಾರೆ. ಇದರೊಂದಿಗೆ ಕಟ್ಟಡದ ಹಿಂಭಾಗದಲ್ಲಿರುವ ಜಲಮಂಡಳಿಯ ಮ್ಯಾನ್‌ಹೋಲ್‌ನಿಂದ ಉಕ್ಕಿದ ನೀರು ಹೋಗಿಯೂ ಪಾಯ ಸಡಿಲಗೊಂಡಿರಬಹುದು ಎನ್ನಲಾಗಿದೆ.

ಪಾಲಿಕೆಯಿಂದ ಈ ಭಾಗದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಇತ್ತೀಚೆಗೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ಮಾಲೀಕರು ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದು, ಕಾಮಗಾರಿಯ ವೇಳೆ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿದರೆ ಮಾಲೀಕರೇ ಹೊಣೆ. ಹಾಗಾಗಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಅದರಂತೆ ಶನಿವಾರದಿಂದಲೇ ಪಾಲಿಕೆಯ ಅಧಿಕಾರಿಗಳು ಕಾಲುವೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಲುವೆ ಮೇಲಿನ ಚಪ್ಪಡಿಗಳನ್ನು ತೆರವುಗೊಳಿಸಿದ್ದಾರೆ. ಆದರೆ, ಭಾನುವಾರ ಕಟ್ಟಡ ವಾಲಿಕೊಂಡು ಬಿರುಕು ಬಿಟ್ಟಿದ್ದು, ಕೂಡಲೇ ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಿದ್ದಾರೆ.

Advertisement

ಒಂದು ಮಹಡಿ ತೆರವು: ಭಾನುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿರುವ ಪಾಲಿಕೆಯ ಕಟ್ಟಡ ವಿನ್ಯಾಸ ವಿಭಾಗದ ಎಂಜಿನಿಯರ್‌, ಕಟ್ಟಡವನ್ನು ಕಾಲುವೆಗೆ ಸೇರಿಸಿ ನಿರ್ಮಿಸಿದರಿಂದ ನೀರು ನುಗ್ಗಿ ಪಾಯ ಸಡಿಲಗೊಂಡಿರುವ ಸಾಧ್ಯತೆಯಿದೆ. ಜತೆಗೆ ಎರಡನೇ ಮಹಡಿ ಹಾಗೂ ಮೂರನೇ ಮಹಡಿಯಲ್ಲಿನ ಒಂದು ಕೊಠಡಿ ಹೆಚ್ಚು ಬಿರುಕು ಬಿಟ್ಟಿರುವುದರಿಂದ ಅವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಕಾಲುವೆ ಅಭಿವೃದ್ಧಿ ಕಾರ್ಯ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ. 

ಮುಂದುವರಿದ ಕಟ್ಟಡ ತೆರವು: ಜಯನಗರ 5ನೇ ಬ್ಲಾಕ್‌, ಮಾರೇನಹಳ್ಳಿ ಕೆರೆ ಅಂಗಳದಲ್ಲಿ ರಾಜು ಎಂಬುವವರು ನಿಯಮ ಬಾಹಿರವಾಗಿ ನಿರ್ಮಿಸುತ್ತಿದ್ದ ಕಟ್ಟಡ ಶನಿವಾರ ವಾಲಿಕೊಂಡು ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಕಟ್ಟಡ ತೆರವುಗೊಳಿಸುವ ಕಾರ್ಯ ಭಾನುವಾರವೂ ಮುಂದುವರಿದಿದೆ. ಸಂಪೂರ್ಣ ಕಟ್ಟಡ ತೆರವುಗೊಳಿಸಲು 3ರಿಂದ 4 ದಿನಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next