Advertisement

ಮೂಲ ನೆಲೆ ನೆನಪು ಆದಿಕವಿ ಪಂಪನನ್ನೂ ಕಾಡಿವೆ

01:38 PM Feb 06, 2018 | Team Udayavani |

ಬೆಂಗಳೂರು: ಆದಿ ಕವಿ ಪಂಪನಿಗೂ ವಲಸೆ ಕಾಡುತ್ತಿತ್ತು ಎಂಬುದನ್ನು ಅವರ ಕಾವ್ಯಗಳಲ್ಲಿ ಕಾಣಬಹುದಾಗಿದೆ ಎಂದು
ಹಿರಿಯ ಚಿಂತಕ ಲಕ್ಷ್ಮೀಶ ತೋಲ್ಪಾಡಿ ಅಭಿಪ್ರಾಯಪಟ್ಟರು.

Advertisement

ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ನಗರದ ಜೈನ್‌ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಗ ಐತಾಳ ಅವರ “ಸ್ಮರಣೆ ಸಾಲದೆ’, ನಳಿನಿ ಮೈಯ ಅವರ “ಬಂದೀತು ಆ ದಿನ’, ಮತ್ತು ನಳಿನಿ ಮೈಯ ಹಾಗೂ ನಾಗ ಐತಾಳ ಅವರು ಸಂಪಾದಿಸಿರುವ “ನೆನಪಿನ ಓಣಿಯೊಳಗೆ ಮಿನುಗುತಾವ ದೀಪ’ ಪುಸ್ತಕಗಳ ಬಿಡುಗಡೆ ಹಾಗೂ “ಡಯಾನ್ಪೋರಾ ಸಾಂಸ್ಕೃತಿಕ ಆಯಾಮಗಳು’ ಕುರಿತ
ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಲೆಮಾರಿತನ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗುತ್ತದೆ. ನಾವು ಹುಟ್ಟಿ ಬೆಳೆದ ಪ್ರದೇಶವನ್ನು ಬಿಟ್ಟು ಬೇರೆ ಪ್ರದೇಶ ಗಳಿಗೆ ತೆರಳಿದಾಗ ನಾವು ಬಿಟ್ಟು ಬಂದಿರುವ ಅಲ್ಲಿನ ಪರಿಸರ ಅತೀಯಾಗಿ ಕಾಡುತ್ತದೆ. ಇಂಥ ನೆನಪು ಆದಿ ಕವಿ ಪಂಪನನ್ನೂ ಬಿಟ್ಟಿರಲಿಲ್ಲ. ಆತನ ಕಾವ್ಯಗಳಲ್ಲಿ ಇದನ್ನು ಕಾಣಬಹುದಾಗಿದೆ. “ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂದು ಪಂಪನೇ ಹೇಳಿಕೊಂಡಿದ್ದಾನೆ ಎಂದರು.

ಬೆಂಗಳೂರಿನಲ್ಲೀಗ ಶುದ್ಧವಾದ ಕನ್ನಡವೇ ಮರೆತು ಹೋಗಿದೆ. ಈ ಸಂದರ್ಭದಲ್ಲಿ ನಾನಾ ಕಾರಣಗಳಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ತವರು ನೆಲದ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಅವರನ್ನು ಬಿಟ್ಟಿಲ್ಲ. ಅವರೂ ಕನ್ನಡವನ್ನು ಬಿಟ್ಟಿಲ್ಲ. ಅವರ ಭಾಷಾಗುಣ ಮೆಚ್ಚುವಂತಹದ್ದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಡಾ.ನರಹಳ್ಳಿ ಬಾಲಸು ಬ್ರಹ್ಮಣ್ಯ, ಒಬ್ಬರಿಂದ ಒಬ್ಬರು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಟ್ರಸ್ಟ್‌ ಎಲ್ಲರನ್ನು ಒಳಗೊಂಡು ಎಲ್ಲ ಬಗೆಯ ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಬಹುತ್ವಗಳನ್ನು ಎತ್ತಿ ಹಿಡಿಯುವುದು ಟ್ರಸ್ಟ್‌ನ ಪ್ರಮುಖ ಆಶಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

Advertisement

ಏಕಾಕೃತಿಯ ಚಿಂತನೆಗಳೇ ಪ್ರಧಾನವಾಗುತ್ತಿರುವ ಇಂದಿನ ದಿನಗಳಲ್ಲಿ ಬಹುತ್ವವನ್ನು ಪ್ರತಿಪಾದಿಸುವುದು ಪ್ರಜ್ಞಾವಂತರ ಕರ್ತವ್ಯ. ನಮ್ಮ ಮನಸ್ಸು ಮತ್ತು ಸಮಾಜ ಚಲನಶೀಲವಾಗದೇ ಇದ್ದರೆ ಅದು ಕ್ರೌರ್ಯ ಹಾಗೂ ಹಿಂಸೆಗೆ ಅವಕಾಶ ಮಾಡುಕೊಡುತ್ತದೆ ಎಂದು ಈ ಹಿಂದೆ ಲೋಹಿಯಾ ಅವರು ಹೇಳುತ್ತಿದ್ದರು. ಇಂದು ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಹಿಂಸೆ ಮತ್ತು ಕ್ರೌರ್ಯಗಳಿಗೆ ನಮ್ಮ ಮನಸನ್ನು ಜಡವಾಗಿಸಿಕೊಂಡಿರುವುದೇ ಕಾರಣವಾಗಿದೆ ಎಂದರು.

ಕೃತಿಗಳ ಕುರಿತು ಮಾತನಾಡಿದ ಯುವ ಲೇಖಕ ವಿಕ್ರಂ ಹತ್ವಾರ್‌, ಲೇಖಕರುಗಳು ತಮ್ಮ ಹಳೆಯ ನೆಪುಗಳ ಬುತ್ತಿಗೆ ಬರಹದ ರೂಪ ನೀಡಿದ್ದಾರೆ. ಎಲ್ಲ ಲೇಖನಗಳಲ್ಲಿ ಲಹರಿತನವಿದೆ ಎಂದು ಬಣ್ಣಿಸಿದರು. ಇದೇ ವೇಳೆ “ಡಯಾನ್ಪೋರಾ ಸಾಂಸ್ಕೃತಿಕ ಆಯಾಮಗಳು’ ಕುರಿತಾಗಿ ಬೆಳಗ್ಗೆಯಿಂದ ಸಂಜೆಯ ಅವರಿಗೂ ನಡೆದ ವಿಚಾರಗೋಷ್ಠಿಗಳು ಸಾಹಿತ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.

Advertisement

Udayavani is now on Telegram. Click here to join our channel and stay updated with the latest news.

Next