ಕಾರ್ಕಳ: ಅಭಿವೃದ್ದಿ ಕಾರ್ಯದಲ್ಲಿ ರಾಜ್ಯ ಸರಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ ಆರೋಗ್ಯ, ಶಿಕ್ಷಣ, ಕ್ರೀಡೆ ಸಹಿತ ಮೂಲ ಸೌಕರ್ಯಕ್ಕೆ ರಾಜ್ಯ ಸರಕಾರವು ಹೆಚ್ಚಿನ ರೀತಿಯಲ್ಲಿ ಆದ್ಯತೆ ನೀಡುತ್ತಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಒಂದೇ ರೀತಿಯಲ್ಲಿ ಗಣನೆಗೆ ತೆಗೆದುಕೊಂಡು ಅನುದಾನ ಬಿಡುಗಡೆಗೊಳಿಸಿ ಅಭಿ ವೃದ್ಧಿಗೆ ಮುನ್ನುಡಿ ಬರೆಯಬೇಕು ಎನ್ನುವುದು ಸರಕಾರದ ಧ್ಯೇಯ ಎಂದು ಮೀನುಗಾರಿಕೆ, ಯುವಜನ ಸಶಕ್ತೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದಾರೆ.
ಅವರು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಹಾಗೂ ಸುಧಾರಣಾ ಯೋಜನೆ, ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಯೋಜಿಸಿದ 100 ಹಾಸಿಗೆಗಳ ನೂತನ ಕಟ್ಟಡ ಕಾಮಗಾರಿಗಳ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಮಾತ್ರವಲ್ಲದೇ ರಾಜ್ಯದ ಎಲ್ಲೆಡೆ ಅಭಿವೃದ್ಧಿ ಮಂತ್ರ ಪಠಿಸಲು ಸರಕಾರ ಸನ್ನದ್ಧವಾಗಿದೆ. ಮುಖ್ಯ ಮಂತ್ರಿಗಳೂ ಕೂಡ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.ಇದೀಗ ಸರಕಾರವು 6 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ನೂತನ ಆಸ್ಪತ್ರೆಯ ನಿರ್ಮಾಣಕ್ಕೆ ಇದೀಗ ಬದ್ಧವಾಗಿದೆ. ರಾಜಕೀಯ ರಹಿತವಾದ ಅಭಿವೃದ್ಧಿ ಕಾರ್ಯಗಳು ತಾಲೂಕಿನಲ್ಲಿ ನಡೆಯಲಿ. ನಾಗರಿಕನೂ ಕೂಡ ಅದನ್ನೇ ಬಯಸುತ್ತಾನೆ ಎಂದವರು ಹೇಳಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಶುಭ ಹಾರೈಸಿದರು.ಉಡುಪಿ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್, ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಸದಸ್ಯ ಶುಭದ ರಾವ್, ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ರೋಹಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಡಾ| ಮಾಲಿನಿ ಬಂಗೇರ ಸ್ವಾಗತಿಸಿ, ಕೃಷ್ಣ ಹೊಸ್ಮಾರು ನಿರೂಪಿಸಿದರು. ಡಾ| ಸಫಾ ವಂದಿಸಿದರು.
ಶಂಕುಸ್ಥಾಪನೆಯ ಮೊದಲೇ
ಕಟ್ಟಡ ಕಾಮಗಾರಿ: ಆರೋಪ
ಶನಿವಾರ 100 ಹಾಸಿಗೆಗಳ ನೂತನ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನ ಸಮಾರಂಭ ಆಯೋಜಿಸಿದ್ದರೂ ಕಟ್ಟಡಗಳ ಪಿಲ್ಲರ್‌ಗಳು ಶಂಕುಸ್ಥಾಪನೆಯ ಮೊದಲೇ ಎದ್ದಿದೆ. ನೆಪ ಮಾತ್ರಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಶಂಕುಸ್ಥಾಪನೆ ನಡೆಯುವ ಮೊದಲೇ ಕಟ್ಟಡ ಕಾಮಗಾರಿ ನಡೆಸುವ ಮೂಲಕ ಅಸಾಂಪ್ರಾದಾಯಿಕ ಪದ್ಧತಿಗೆ ಇಲ್ಲಿ ನಾಂದಿ ಹಾಡಲಾಗಿದೆ ಎನ್ನುವುದು ಸ್ಥಳೀಯರ ಆರೋಪ.